Ad Widget .

ಇಂದು ಗಾಂಧಿ ಜಯಂತಿ ಆಚರಣೆ/ ಸ್ವರಾಜ್ಯದ ಎಪ್ಪತ್ತೈದರ ಹೊತ್ತಿನಲ್ಲಿ ಗಾಂಧಿಯ ಹಿಂದ್ ಸ್ವರಾಜ್‍ನ ನೆನಪು

ಸಮಗ್ರ ನ್ಯೂಸ್: ಭಾರತದ ಸ್ವರಾಜ್ಯದ ಕನಸು ನನಸಾಗಿ ಎಪ್ಪತ್ತೈದು ವರ್ಷಗಳು ಕಳೆದಿವೆ. ಬ್ರಿಟಿಷ್ ವಸಾಹತುಶಾಹಿ ಆಡಳಿತ ವ್ಯವಸ್ಥೆ ಮರೆಯಾಗಿ ಏಳು ದಶಕಗಳು ಕಳೆದುಹೋಗಿವೆ. ಭಾರತೀಯರ ಸ್ವರಾಜ್ಯದ ಪರಿಕಲ್ಪನೆ ತನ್ನದೇ ಹಾದಿಯಲ್ಲಿ ಸಾಗಿಬಂದರೂ, ಅದರಲ್ಲಿ ಬ್ರಿಟಿಷರು ತಮ್ಮ ಛಾಯೆಯನ್ನು ಒಂದಿಷ್ಟು ಉಳಿಸಿಕೊಳ್ಳುವಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆಡಳಿತದಲ್ಲಿ ಭಾರತೀಯರು ಪಾಲ್ಗೊಂಡರು ಕೂಡ, ಸಂಪೂರ್ಣ ಭಾರತೀಯತೆ ಕಾಣಸಿಗಲಿಲ್ಲ ಎಂಬುದಂತೂ ಸತ್ಯ. ಗಾಂಧೀಜಿಯ ಕನಸಿನ ಸ್ವರಾಜ್ಯ ಸ್ವತಂತ್ರ ಭಾರತದಲ್ಲಿ ಮರೆಯಾಯಿತು. ಗಾಂಧಿಯವರ ಹಿಂದ್ ಸ್ವರಾಜ್‍ನ ಪರಿಕಲ್ಪನೆಗಳು ಭಾರತ ಸ್ವರಾಜ್ಯವಾದಾಗ ಕಳೆದುಹೋಯಿತು. ಈ ಎಪ್ಪತ್ತೈದು ವರ್ಷಗಳ ಪಯಣದ ಜೊತೆಗೆ ಹಿಂದ್ ಸ್ವರಾಜ್‍ನ ಪರಿಕಲ್ಪನೆಗಳ ಸುತ್ತ ಒಂದು ಅವಲೋಕನ ಇದು.

Ad Widget . Ad Widget .

‘ಹಿಂದ್ ಸ್ವರಾಜ್’ ಗಾಂಧೀಜಿಯ ಸ್ವರಾಜ್ಯದ ಕನಸುಗಳ ಬಿಚ್ಚಿಟ್ಟ ಕೃತಿ. 1908ರಲ್ಲಿ ಗಾಂಧೀಜಿಯವರು ಲಂಡನ್‍ನಿಂದ ಹಡಗಿನಲ್ಲಿ ಹಿಂತಿರುಗುತ್ತಿದ್ದಾಗ ಕ್ರಾಂತಿಕಾರಿಗಳಿಗೆ ಉತ್ತರವಾಗಿ ಬರೆದ ಕೃತಿ ಇದು. ಇದು 30 ಸಾವಿರ ಪದಗಳ ಗ್ರಂಥ. 1908ರ ನವೆಂಬರ್ 13ರಿಂದ 22ರವರೆಗೆ ಸತತವಾಗಿ ಈ ಕೃತಿಯನ್ನು ಬರೆದು ಮುಗಿಸಿದರು. ಒಟ್ಟು 271 ಪುಟಗಳ ಕೃತಿ ಇದು. ಗುಜರಾತಿಯಲ್ಲಿ ಬರೆದ ಕೃತಿಯನ್ನು ಮುಂದೆ ಇಂಗ್ಲೀಷ್‍ಗೆ ಭಾಷಾಂತರ ಮಾಡಿದರು. 1912ರಲ್ಲಿ ಈ ಕೃತಿಯನ್ನು ಓದಿದ ಗೋಖಲೆಯವರು, ಇದು ಅವಸರದಲ್ಲಿ ಬರೆದ ಅಪಕ್ವ ಕೃತಿ ಎಂದರು. ಆದರೆ ಗಾಂಧೀಜಿ “ಇದು ದ್ವೇಷದ ಬದಲು ಪ್ರೀತಿಯನ್ನು ಕಲಸುತ್ತದೆ. ಹಿಂಸೆಗೆ ಬದಲಾಗಿ ಆತ್ಮತ್ಯಾಗವನ್ನು ಕಲಿಸುತ್ತದೆ. ಪಶುಬಲಕ್ಕೆ ಎದುರಾಗಿ ಆತ್ಮಬಲವನ್ನು ಎದುರು ನಿಲ್ಲಿಸುತ್ತದೆ. ಇದರಲ್ಲಿ ಒಂದು ಪದವನ್ನು ಕೂಡ ಬದಲಿಸಲಾರೆ ಎಂದು 1921ರಲ್ಲಿ ಹೇಳಿದರು. ಮುಂದೆ ಒಂದಿಷ್ಟು ಭಾಷೆಯನ್ನು ತಿದ್ದಿದರೆ ಹೊರತು, ಕೃತಿಯಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.

Ad Widget . Ad Widget .

ಹಿಂದ್ ಸ್ವರಾಜ್ ಕೃತಿ ಸಾಗುವುದು ಓದುಗ ಮತ್ತು ಸಂಪಾದಕನ ನಡುವಿನ ಸಂವಾದದ ರೂಪದಲ್ಲಿ. ಓದುಗನ ಪ್ರಶ್ನೆಗಳಿಗೆ ಗಾಂಧೀಜಿ ಉತ್ತರವನ್ನು ನೀಡುತ್ತಾ ಸಾಗುತ್ತಾರೆ. ಕಾಂಗ್ರೆಸ್ ಮತ್ತು ಅದರ ಅಧಿಕಾರಿಗಳ ಕುರಿತು ಆರಂಭವಾಗುವ ಮಾತು, ಯಂತ್ರ ಮತ್ತು ಕಾರ್ಖಾನೆಗಳ ಕುರಿತು ಮಾತನಾಡುವ ಹಂತದಲ್ಲಿ ಕೊನೆಯಾಗುತ್ತದೆ. ಈ ಸಂವಾದದ ಉದ್ದಕ್ಕೂ ಕಾಣಸಿಗುವುದು ಭಾರತದ ಸ್ವರಾಜ್ಯದ ವಿಚಾರವಷ್ಟೇ. ಸ್ವರಾಜ್ಯ ಎಂದರೇನು ಎಂಬ ಪ್ರಶ್ನೆಗೆ ಬ್ರಿಟಿಷರನ್ನು ಭಾರತದಿಂದ ಓಡಿಸುವುದಷ್ಟೇ ಸ್ವರಾಜ್ಯ ಅಲ್ಲ ಎಂಬ ಉತ್ತರ ನೀಡುವ ಗಾಂಧಿ, ಬ್ರಿಟಿಷರ ಆಡಳಿತ ವ್ಯವಸ್ಥೆಯನ್ನೇ ಮುಂದುವರಿಸಿದರೆ ನಮಗೆಂತಹ ಸ್ವರಾಜ್ಯ ದೊರಕಿತು ಎಂಬ ಮರುಪ್ರಶ್ನೆಯನ್ನು ಹಾಕುತ್ತಾರೆ. ಬ್ರಿಟಿಷರ ಆಡಳಿತ ವ್ಯವಸ್ಥೆ ನಮಗೆ ಸರಿ ಎನಿಸಬಹುದಾದರೆ ಅವರು ಇಲ್ಲಿ ನಡೆಸುತ್ತಿರುವ ಶೋಷಣೆಯನ್ನು ನಿಲ್ಲಿಸಿದರೆ ಸಾಕು. ಅವರು ಭಾರತದಿಂದ ಹೊರಹೋಗುವ ಅವಶ್ಯಕತೆ ಏನಿದೆ. ಒಟ್ಟಿನಲ್ಲಿ ಹುಲಿ ಬೇಡ, ಹುಲಿಯ ಗುಣ ಮಾತ್ರ ಬೇಕು ಎಂಬುದು ನಮ್ಮ ಆಲೋಚನೆ ಎಂದು ಗಾಂಧಿ ಹೇಳುತ್ತಾರೆ.

ಬ್ರಿಟನ್ನಿನ ಸಂಸತ್ತು ವ್ಯವಸ್ಥೆಯನ್ನು ಟೀಕಿಸುವ ಗಾಂಧಿ, ಇದುವರೆಗೂ ಪಾರ್ಲಿಮೆಂಟ್ ತಾನಾಗಿ ಒಂದಾದರೂ ಒಳ್ಳೆಯ ಕೆಲಸವನ್ನು ಮಾಡಲಿಲ್ಲ. ಹಾಗೆಯೇ ಅದರ ನಾಯಕರು ಆಗಾಗ ಬದಲಾಗುತ್ತಿರುತ್ತಾರೆ. ಆದ್ದರಿಂದ ಪಾರ್ಲಿಮೆಂಟ್‍ನಿಂದ ಒಳ್ಳೆಯ ಆಡಳಿತ ಸಾಧ್ಯವಿಲ್ಲ ಎನ್ನುತ್ತಾರೆ. ಇವತ್ತು ಪಾರ್ಲಿಮೆಂಟ್ ಮಾಡಿದ ಕೆಲಸವನ್ನು ನಾಳೆ ಇನ್ನೊಮ್ಮೆ ಅಳಿಸಬಹುದು. ಆದ್ದರಿಂದ ಪಾರ್ಲಿಮೆಂಟ್‍ನ ಆಲೋಚನೆಗಳಲ್ಲಿ ಸ್ಥಿರತೆಯಿಲ್ಲ. ಪಾರ್ಲಿಮೆಂಟ್ ಮಾತನಾಡಲಷ್ಟೇ ಸೀಮಿತವಾಗಿದೆ. ಆದ್ದರಿಂದ ಅದನ್ನು ಮಾತಿನ ಅಂಗಡಿ ಎಂದು ಕರೆಯುತ್ತಾರೆ. ಇಂತಹ ಪಾರ್ಲಿಮೆಂಟ್‍ನಿಂದ ಒಳ್ಳೆಯ ಆಡಳಿತ ನೀಡಲು ಸಾಧ್ಯವಿಲ್ಲ ಎಂಬುದು ಗಾಂಧೀಜಿಯ ವಾದ. ಆದರೆ ಭಾರತ ಸ್ವರಾಜ್ಯವಾದಾಗ ಇದೇ ಪಾರ್ಲಿಮೆಂಟ್ ವ್ಯವಸ್ಥೆಯನ್ನು ಆಯ್ದುಕೊಳ್ಳುತ್ತದೆ. ಇದರ ಜೊತೆಗೆ ಇಂಗ್ಲಿಷ್ ಮತದಾರರಿಗೆ ಪತ್ರಿಕೆಗಳೇ ವೇದವಾಕ್ಯಗಳಿದ್ದಂತೆ. ಆದರೆ ಪತ್ರಿಕೆಗಳು ಬಹುಪಾಲು ಅಪ್ರಾಮಾಣಿಕರು. ಒಂದೇ ವಿಚಾರವನ್ನು ಹಲವು ರೀತಿಯಲ್ಲಿ ಬರೆಯುತ್ತಾರೆ. ಇಂತಹ ಪತ್ರಿಕೆಗಳಿಂದ ಸರಕಾರದ ಕುರಿತು ನೈಜ ವಿಚಾರಗಳನ್ನು ನಿರೀಕ್ಷಿಸುವುದು ಕಷ್ಟ ಎನ್ನುತ್ತಾರೆ ಗಾಂಧಿ.

ಹಿಂದ್ ಸ್ವರಾಜ್‍ನ ಪ್ರತಿ ಹಂತದಲ್ಲೂ ಸ್ವತಂತ್ರ ಭಾರತದ ಆಡಳಿತದಲ್ಲಿ ಬ್ರಿಟಿಷರ ಛಾಯೆ ಆವರಿಸುವ ಆತಂಕವನ್ನು ಗಾಂಧಿ ವ್ಯಕ್ತಪಡಿಸುತ್ತಾರೆ. ಬ್ರಿಟಿಷರ ಆಧುನಿಕ ನಾಗರಿಕತೆಯ ಮಾಯೆಯಲ್ಲಿ ಭಾರತೀಯರು ಸಿಲುಕಿಕೊಳ್ಳುತ್ತಿದ್ದಾರೆ. ಈ ನಾಗರಿಕತೆಯ ಗುರಿ ಶರೀರ ಸುಖ ಮಾತ್ರ. ಮರದ ತೊಗಲನ್ನು ಹೊದೆಯುತ್ತಿದ್ದವರು, ಯಂತ್ರಗಳಿಂದ ತಯಾರಿಸಿದ ಬಟ್ಟೆಗಳನ್ನು ಹಾಕಿಕೊಂಡ ತಕ್ಷಣ ನಾಗರಿಕನಾಗುತ್ತಾನೆ ಎಂದರೆ ಇದೆಂತಹ ನಾಗರಿಕತೆ ಎಂಬ ಗಾಂಧಿ ಪ್ರಶ್ನಿಸುತ್ತಾರೆ. ಅದೇ ರೀತಿಯ ಯಂತ್ರಗಳನ್ನು ಉಪಯೋಗಿಸಿ ಸಾವಿರಾರು ಜನರ ಉದ್ಯೋಗಗಳನ್ನು ಕಿತ್ತುಕೊಳ್ಳಲಾಗುತ್ತಿದೆ, ನೂರಾರು ಜನರನ್ನು ಏಕಕಾಲದಲ್ಲಿ ಕೊಲ್ಲಲಾಗುತ್ತಿದೆ ಇಂತಹ ನಾಗರಿಕತೆ ನಮಗೆ ಬೇಡ ಎಂಬುದು ಗಾಂಧಿ ಅಭಿಪ್ರಾಯ.
ಭಾರತದ ನಾಗರಿಕತೆ ಸಿರವಂತಿಕೆಯ ಮೋಹಕ್ಕೆ ಸಿಲುಕಿದವರಲ್ಲ. ದೊಡ್ಡ ದೊಡ್ಡ ಪಟ್ಟಣಗಳ ಮೋಹಕ್ಕೆ ಸಿಲುಕಿದವರಲ್ಲ. ಚಿಕ್ಕ ಚಿಕ್ಕ ಹಳ್ಳಿಗಳೇ ಅವರಿಗೆ ತೃಪ್ತಿದಾಯಕವಾಗಿದ್ದವು. ರಾಜರು, ರಾಜದಂಡ, ಅವರ ಖಡ್ಗ ಎಲ್ಲವೂ ನೈತಿಕ ಬಲಕ್ಕೆ ಸಮನಲ್ಲ ಎಂಬ ಅರಿವು ಸಾಮಾನ್ಯ ಜನರಿಗೆ ಇತ್ತು. ರಾಜರಿಗಿಂತ ಸಾಧು ಶರಣರು ಹೆಚ್ಚಿನ ಮೌಲ್ಯವನ್ನು ಹೊಂದಿದ್ದರು. ಇಂತಹ ನಾಗರಿಕತೆಯನ್ನು ಹೊಂದಿರುವ ರಾಷ್ಟ್ರ ಬ್ರಿಟಿಷರಿಂದ ಏನು ಕಲಿಯಬೇಕು? ಇತರರಿಗೆ ಕಲಿಸುವ ರಾಷ್ಟ್ರ ಇದು ಎಂದು ಗಾಂಧಿ ಹೇಳುತ್ತಾರೆ.

ಬ್ರಿಟಿಷರ ಶಿಕ್ಷಣವೆಂದರೆ ಅಕ್ಷರ ಜ್ಞಾನವಷ್ಟೇ. ಮಕ್ಕಳಿಗೆ ಓದುಬರಹ ಅಂಕಗಣಿತಗಳನ್ನು ಕಲಿಸುವುದೇ ಪ್ರಾಥಮಿಕ ಶಿಕ್ಷಣ. ಇಂತಹ ಶಿಕ್ಷಣ ವ್ಯವಸ್ಥೆಯಲ್ಲಿ ಬೆಳೆದವರು ಮುಂದೆ ವಕೀಲರು, ವೈದ್ಯರು ಆದಾಗ ಹಣದ ಮೋಹದ ಬೀಳುತ್ತಾರೆ. ಜನರನ್ನು ಸುಲಿಗೆ ಮಾಡಲು ಆರಂಭಿಸುತ್ತಾರೆ. ಇಂತಹ ಶಿಕ್ಷಣದ ಅಗತ್ಯ ಭಾರತಕ್ಕೆ ಇಲ್ಲ. ಇಲ್ಲಿ ಪ್ರೊ. ಹಕ್ಸಲೇ ಹೇಳಿದ, “ತನ್ನ ದೇಹ ತನಗೆ ದಾಸನಾಗಿ, ಹೇಳಿದ ಕೆಲಸವನ್ನು ಸರಾಗವಾಗಿ, ಸಂತೋಷವಾಗಿ ಶಕ್ತಿಯಿದ್ದಷ್ಟು ಮಾಡುವಂತೆ ಯಾರಿಗೆ ತಾರುಣ್ಯದಲ್ಲಿ ಶಿಕ್ಷಣ ದೊರೆತಿದೆಯೋ; ಯಾರ ಬುದ್ದಿ ಶುದ್ಧ, ಶಾಂತ, ನ್ಯಾಯದರ್ಶಿ ಆಗಿದೆಯೋ; ಯಾರ ಮನಸ್ಸು ಪ್ರಕೃತಿ ನಿಯಮಗಳ ಜ್ಞಾನದಿಂದ ಪೂರ್ಣವಾಗಿದೆಯೋ, ಯಾರ ಇಂದ್ರೀಯಗಳು ನಿಗ್ರಹಿತವೋ; ಯಾರ ಅಂತರಾತ್ಮ ಪರಿಶುದ್ಧವೋ; ಯಾರಿಗೆ ನೀಚ ಕಾರ್ಯವೆಂದರೆ ಹೇಸಿಗೆಯೋ; ಯಾರು ತನ್ನಂತೆಯೇ ಪರರನ್ನು ಕಾಣುತ್ತಾನೋ, ಅವನೇ ನಿಜವಾದ ಶಿಕ್ಷಿತ” ಎಂಬ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ.

ಇವೆಲ್ಲವೂ ಗಾಂಧಿಯ ಸ್ವರಾಜ್ಯದ ಪರಿಕಲ್ಪನೆಗಳು. ಬ್ರಿಟಿಷರು ಬೇಡ, ಅವರ ವ್ಯವಸ್ಥೆ ಬೇಕು ಎಂಬುದು ಸ್ವರಾಜ್ಯವಾಗಲು ಸಾಧ್ಯವಿಲ್ಲ ಎಂಬುದು ಗಾಂಧೀಜಿಯ ವಾದ. ಆದರೆ ಸ್ವತಂತ್ರ ಭಾರತ ಸಾಗಿದ್ದೆಲ್ಲಾ ವಿರುದ್ಧ ದಿಕ್ಕಿನಲ್ಲೇ. ಬ್ರಿಟಿಷರನ್ನು ಹೊರಹಾಕಿದ ನಾವು, ಅವರ ಆಡಳಿತ ವ್ಯವಸ್ಥೆಯನ್ನು ಉಳಿಸಿಕೊಂಡೆವು. ಮೆಕಾಲೆಯ ಶಿಕ್ಷಣ ನೀತಿ ಭಾರತೀಯರ ಜ್ಞಾನವನ್ನು ನುಂಗಿ ಹಾಕಿತು. ಶಿಕ್ಷಣವೆಂದರೆ ಅಕ್ಷರಜ್ಞಾನ ಎಂಬ ಅಜ್ಞಾನದಲ್ಲಿ ನಾವು ತೇಲಿಹೋದೆವು. ಒಬ್ಬ ರೈತ ಪ್ರಾಮಾಣಿಕತೆಯಿಂದ ತನ್ನ ಊಟವನ್ನು ಗಳಿಸುತ್ತಾನೆ. ಅವನಿಗೆ ಸಾಮಾನ್ಯ ಲೋಕಜ್ಞಾನವಿದೆ. ತನ್ನ ಸಂಗಡದವರ ಜೊತೆ ಹೇಗೆ ಬದುಕಬೇಕು ಎಂದು ಅವನಿಗೆ ಗೊತ್ತಿದೆ. ಒಳ್ಳೆಯ ನಡತೆಯನ್ನು ಹೊಂದಿದ್ದಾನೆ. ಅವನಿಗೆ ಅಕ್ಷರ ಜ್ಞಾನವನ್ನು ಹೇಳಿಕೊಟ್ಟು ಏನೂ ಸಾಧಿಸಲು ಸಾಧ್ಯವಿಲ್ಲ. ಆದರೆ ಭಾರತದ ಶಿಕ್ಷಣ ವ್ಯವಸ್ಥೆ ಈ ದಿಕ್ಕಿನಲ್ಲಿ ಸಾಗಲಿಲ್ಲ ಎಂಬುದು ಸಾರ್ವಕಾಲಿಕ ಸತ್ಯ.

ಭಾರತೀಯ ಸಭ್ಯತೆಯೇ ಸರ್ವೋತ್ತಮ. ಐರೋಪ್ಯ ನಾಗರಿಕತೆ ಮೂರು ದಿನದ ಮೋಜು ಎಂಬುದು ನಮಗೆ ಅರಿವಾಗಲೇ ಇಲ್ಲ. ಮೆಕಾಲೆ ಶಿಕ್ಷಣ ನಮ್ಮನ್ನು ಗುಲಾಮಗಿರಿಗೆ ನೂಕಿದೆ ಎಂಬ ಗಾಂಧೀಜಿಯ ನುಡಿಗಳು ನಮಗೆ ಅರಿವಾಗಲೇ ಇಲ್ಲ. ಹಿಂದ್ ಸ್ವರಾಜ್‍ನ ಕೊನೆಯಲ್ಲಿ ಬರುವ ನಿಜವಾದ ಸ್ವರಾಜ್ಯ ಎಂದರೆ ಆತ್ಮರಾಜ್ಯ. ಅದಕ್ಕೆ ದಾರಿ ಆತ್ಮಬಲ ಎಂಬ ಮಾತುಗಳೂ ಸ್ವರಾಜ್ಯದ ಎಪ್ಪತ್ತೈದರ ಹೊತ್ತಿನಲ್ಲೂ ನಾವು ನೆನಪು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಬ್ರಿಟಿಷರ ಪ್ರಭಾವದಿಂದ ನಾವು ಹೊರಬರಲು ಪ್ರಯತ್ನ ಪಡದಿದ್ದರೆ, ಭಾರತೀಯ ಅಸ್ಮಿತೆಯನ್ನು ಕಳೆದುಕೊಳ್ಳುವ ದಿನಗಳು ದೂರವಿಲ್ಲ. ಗಾಂಧೀಜಿಯ ರಾಮರಾಜ್ಯದ ಕನಸು, ಇಂದಿನ ಸ್ವರಾಜ್ಯದ ಹಾದಿಗಿಂತಲೂ ಮಿಗಿಲಾದದ್ದು ಎಂಬುದು ನಮಗೆ ಅರ್ಥವಾಗಬೇಕಿದೆ. ಆಗ ಗಾಂಧಿ ಜಯಂತಿ ಆಚರಣೆ ಸಾರ್ಥಕತೆ ಕಂಡುಕೊಳ್ಳಬಹುದು.

ಕುಮಾರ್ ಶೇಣಿ

Leave a Comment

Your email address will not be published. Required fields are marked *