ಸಮಗ್ರ ನ್ಯೂಸ್: ತಮಿಳುನಾಡಿನ ಕೂನೂರು ಬಳಿಯ ಮರಪಾಲಂ ಬಳಿ ಬಸ್ ಕಮರಿಗೆ ಬಿದ್ದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಆಘಾತಕಾರಿ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ 55 ಜನರು ಪ್ರಯಾಣಿಸುತ್ತಿದ್ದ ಬಸ್ಸು 100 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಈ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಕೊಯಮತ್ತೂರು ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಶರವಣ ಸುಂದರ್ ಮಾತನಾಡಿ, ಅಪಘಾತದಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಮೃತರಲ್ಲಿ ಮೂವರು ಮಹಿಳೆಯರು ಮತ್ತು ಐವರು ಪುರುಷರಾಗಿದ್ದಾರೆ. ಸಂತ್ರಸ್ತರು ತೆಂಕಶಿ ಜಿಲ್ಲೆಯ ಕಡಯಂ ಮೂಲದವರಾಗಿದ್ದು, ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಕೊಯಮತ್ತೂರ್ ಆಸ್ಪತ್ರೆಗೆ ರವಾನಿಸಲಾಗಿದೆ.