ಸಮಗ್ರ ನ್ಯೂಸ್: ಚಾರಣ ಪ್ರಿಯರಿಗೆಲ್ಲ ಪರಿಚಿತವಾದ ಚಾರಣ ತಾಣವೆಂದರೆ ಅದು ಕುಮಾರ ಪರ್ವತ. ಈ ಸಾಲಿನ ಕುಮಾರ ಪರ್ವತ ಚಾರಣಕ್ಕೆ ಅನುಮತಿ ನೀಡುವುದರ ಮೂಲಕ ಅರಣ್ಯ ಇಲಾಖೆ ಚಾರಣಿಗರಿಗೆ ಸಿಹಿ ಸುದ್ದಿ ನೀಡಿದೆ.
ಕುಮಾರ ಪರ್ವತ ಚಾರಣವೆಂದರೆ ಅದೊಂದು ತರಹ ಚಾಲೆಂಜಿಂಗ್. ಪುಷ್ಪಗಿರಿ ಎಂದು ಕೂಡ ಕರೆಲ್ಪಡುವ ಕುಮಾರ ಪರ್ವತ ಕರ್ನಾಟಕದ 6ನೇ ಅತೀ ಎತ್ತರದ ಶಿಖರವಾಗಿದೆ. ಚಾರಣಿಗರು ಕುಕ್ಕೆ ಸುಬ್ರಹ್ಮಣ್ಯದಿಂದ ಗಿರಿಗದ್ದೆಯ ಮೂಲಕ ಅಥವಾ ಸೋಮವಾರ ಪೇಟೆಯ ಬೀಡೇಹಳ್ಳಿಯ ಮೂಲಕ ಪರ್ವತದ ತುದಿಯನ್ನು ತಲುಪಬಹುದು. ಕುಮಾರ ಪರ್ವತವು ದೂರದಿಂದ ನೋಡಲು ಒಂದೇ ಪರ್ವತದಂತೆ ಕಂಡರೂ, ಅದು ಶೇಷ ಪರ್ವತ, ಸಿದ್ದ ಪರ್ವತ ಮತ್ತು ಕುಮಾರ ಪರ್ವತ ಎಂಬ ಮೂರು ಶಿಖರಗಳನ್ನು ಹೊಂದಿದೆ. ಶೇಷ ಪರ್ವತವು ದಕ್ಷಿಣಕ್ಕೆ ಮುಖ ಮಾಡಿದ ಏಳು ಹೆಡೆಯ ಸರ್ಪದಂತೆ ಕಾಣುತ್ತಿದ್ದು, ಅದನ್ನು ದಾಟಿ ಕುಮಾರ ಪರ್ವತವನ್ನು ತಲುಪಬೇಕಾಗುತ್ತದೆ.

ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ 13 ಕಿಮೀನಷ್ಟು ದೂರ ಇದ್ದು, ಚಾರಣಕ್ಕೆ ಬೇಕಾದ ಅವಶ್ಯಕ ವಸ್ತುಗಳನ್ನು ಕೊಂಡೊಯ್ಯಬೇಕಾಗುತ್ತದೆ. ಗಿರಿಗದ್ದೆಯ ಭಟ್ಟರ ಮನೆಯಲ್ಲಿ ಊಟ ಉಪಹಾರಕ್ಕೆ ವ್ಯವಸ್ಥೆ ಇರುತ್ತದೆ. ರಾತ್ರಿ ಗಿರಿಗದ್ದೆಯಲ್ಲಿ ವಾಸ್ತವ್ಯ ಮಾಡಿ ಬೆಳಗ್ಗೆ ಬೇಗನೆ ಚಾರಣ ಮಾಡುವವರು ಇರುವುದರಿಂದ ಟೆಂಟ್‍ನ ವ್ಯವಸ್ಥೆ ಇರುತ್ತದೆ.