Ad Widget .

ವಿಶ್ವ ರೇಬಿಸ್ ದಿನ, ಸೆಪ್ಟಂಬರ್ 28

ಪ್ರತಿ ವರ್ಷ ಸೆಪ್ಟಂಬರ್ 28ರಂದು ವಿಶ್ವದಾದ್ಯಂತ ವಿಶ್ವ ರೇಬಿಸ್ ದಿನ ಎಂದು ಆಚರಿಸಿ, ರೇಬಿಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

2007ನೇ ವರ್ಷದಿಂದ ಈ ಆಚರಣೆ ಜಾರಿಗೆ ಬಂದಿತು. 2023ನೇ ವರ್ಷದ ಆಚರಣೆಯ ಧ್ಯೇಯ ವಾಕ್ಯ “Rabies one health, Zero Deaths” ಅಂದರೆ “ರೇಬಿಸ್ ಒಂದೇ ಆರೋಗ್ಯ, ಶೂನ್ಯ ಸಾವು” ಎಂಬುದಾಗಿದೆ. ಸೆಪ್ಟಂಬರ್ 28ರಂದು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಪ್ರೆಂಚ್ ರಸಾಯನ ಶಾಸ್ತ್ರ ತಜ್ಞ ಹಾಗೂ ಸೂಕ್ಷ್ಮ ಜೀವಿ ವಿಜ್ಞಾನಿ, “ಸರ್ ಲೂಯಿಸ್ ಪ್ಯಾಶ್ಚರ್” ಅವರು ಮರಣ ಹೊಂದಿದ ದಿನ. ಅವರ ನೆನಪಿಗಾಗಿ ಈ ದಿನವನ್ನು “ವಿಶ್ವ ರೇಬಿಸ್ ದಿನ” ಎಂದು ಆಚರಣೆಗೆ ತರಲಾಯಿತು.

Ad Widget . Ad Widget . Ad Widget .


ರೇಬಿಸ್ ರೋಗ ಸಾವಿರಾರು ವರ್ಷಗಳಿಂದ ಮನುಕುಲವನ್ನು ಕಾಡುತ್ತಿದ್ದರೂ, ಈ ಕಾಯಿಲೆಗೆ ಈವರೆಗೂ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಕಂಡು ಹಿಡಿಯಲಾಗದಿರುವುದು ಬಹಳ ಸೋಜಿಗದ ಸಂಗತಿ. ಜಾಗತಿಕವಾಗಿ ಪ್ರತಿ ವರ್ಷ 55,000 ಮಂದಿ ಈ ರೋಗದಿಂದ ಸಾವನ್ನಪ್ಪುತ್ತಿದ್ದು, ಇದರಲ್ಲಿ 95 ಶೇಕಡಾ ಮಂದಿ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಸಾವನ್ನಪ್ಪುತ್ತಿದ್ದಾರೆ. ಜಾಗತಿಕ ಅಂಕಿ ಅಂಶಗಳ ಪ್ರಕಾರ ಹುಚ್ಚು ನಾಯಿಯ ಕಡಿತಕ್ಕೊಳಗಾಗಿ ಶೇಕಡಾ 95 ರಿಂದ 97 ಮಂದಿ ಸಾವನ್ನಪ್ಪುತ್ತಿದ್ದು, ಪ್ರತಿ ಹತ್ತು ನಿಮಿಷಕ್ಕೊಮ್ಮೆ ಜಗತ್ತಿನ ಯಾವುದಾದರೊಂದು ಸ್ಥಳದಲ್ಲಿ, ಒಬ್ಬ ಮನುಷ್ಯ ರೇಬಿಸ್‍ನಿಂದಾಗಿ ಸಾವಿಗೀಡಾಗುತ್ತಿದ್ದಾನೆ. ಆದಾಗ್ಯೂ ರೇಬಿಸ್ ರೋಗ ಮಾರಣಂತಿಕವಾದರೂ, ಸೂಕ್ತ ಸಮಯದಲ್ಲಿ ಲಸಿಕೆಗಳನ್ನು ನೀಡಿದರೆ, ಅದು ಪ್ರತಿಶತ 100 ಶೇಕಡಾ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ರೇಬಿಸ್ ಖಾಯಿಲೆ ಪ್ರಾಣಿಗಳ ಮೂಲಕ ಮಾನವರಿಗೆ ಹರಡುವ ಖಾಯಿಲೆಯಾಗಿದ್ದು, ಸೋಂಕನ್ನು ಹೊಂದಿರುವ ನಾಯಿ, ಬೆಕ್ಕು, ಬಾವಲಿ, ರಕೂನ್ ಮತ್ತು ನರಿಗಳ ಕಡಿತದಿಂದ ಉಂಟಾಗುತ್ತದೆ. ಸಾಕು ನಾಯಿಗಳಿಗೆ ಮತ್ತು ಬೆಕ್ಕುಗಳಿಗೆ ಲಸಿಕೆಯನ್ನು ಹಾಕುವುದರ ಮೂಲಕ ರೋಗವನ್ನು ಖಂಡಿತವಾಗಿಯೂ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.

ರೇಬಿಸ್ ಬಗ್ಗೆ ನಿಮಗೇನು ಗೊತ್ತು?

ವಿಶ್ವದೆಲ್ಲೆಡೆ ರೇಬಿಸ್‍ನಿಂದ ಆಗುವ ಮರಣದ ಸಂಖ್ಯೆಗೆ ಭಾರತವೊಂದರಲ್ಲೇ ಶೇಕಡಾ 36ರಷ್ಟು ಕಾಣಸಿಗುತ್ತದೆ. ರೇಬಿಸ್ ಎನ್ನುವ ವೈರಸ್‍ನ ಸೋಂಕು ಹೆಚ್ಚಾಗಿ ನಾಯಿಯ ಕಡಿತದಿಂದ ಹರಡುತ್ತದೆ. ಸಾಮಾನ್ಯವಾಗಿ ಸುಮಾರು 60ಶೇಕಡಾ ಬೀದಿನಾಯಿಗಳಿಂದ ಮತ್ತು ಶೇಕಡಾ 40 ಸಾಕು ನಾಯಿಗಳಿಂದ ಆಗುತ್ತದೆ. ಸಮಾಧಾನಕರ ಅಂಶವೆಂದರೆ ನಾಯಿ ಕಡಿತದ ತಕ್ಷಣ ಚಿಕಿತ್ಸೆ ದೊರೆತಲ್ಲಿ ಹೆಚ್ಚಿನ ಪ್ರಾಣಹಾನಿಯನ್ನು ತಡೆಗಟ್ಟಬಹುದು. ಕಚ್ಚಿದ ನಾಯಿಯ ಎಂಜಲಿನ ಮುಖಾಂತರ ರೋಗಿಯ ದೇಹವನ್ನು ಸೇರುವ ವೈರಸ್ ಸಾಮಾನ್ಯವಾಗಿ ನರಮಂಡಲವನ್ನು ಕ್ಷೀಣಗೊಳಿಸುತ್ತದೆ. ಹೆಚ್ಚಾಗಿ ನೀರನ್ನು ಕಂಡರೆ ಭಯಪಡುವ ವಿಚಿತ್ರ ಸ್ಥಿತಿಯು ರೇಬಿಸ್ ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ. ಹೆಚ್ಚಾಗಿ 15 ವರ್ಷಗಳಿಗಿಂತ ಚಿಕ್ಕ ಮಕ್ಕಳು ನಾಯಿ ಕಡಿತಕ್ಕೆ ಒಳಗಾಗುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು 3 ವಿಂಗಡಣೆಯನ್ನು ಮಾಡಿದೆ.

ಮೊದಲ ಗುಂಪಿನಲ್ಲಿ ರೋಗಿ ರೇಬಿಸ್‍ನಿಂದ ಬಳಲುತ್ತಿದ್ದ ಪ್ರಾಣಿಯ ಸಂಪರ್ಕಕ್ಕೆ ಬಂದಿರುತ್ತಾನೆ. ಆದರೆ ದೇಹದಲ್ಲಿ ಯಾವುದೇ ರೀತಿಯ ಗಾಯವಿರುವುದಿಲ್ಲ

ಎರಡನೇ ಗುಂಪಿನಲ್ಲಿ ಸಣ್ಣ ಮಟ್ಟದ ತರಚಿದ ಗಾಯ (ರಕ್ತ ಸೋರದೆ) ಅಥವಾ ಗಾಯಗೊಂಡ ರೋಗಿಯ ಭಾಗವನ್ನು ರೇಬಿಸ್ ಸಂಶಯಿತ ನಾಯಿ ನೆಕ್ಕಿದಲ್ಲಿ ರೇಬಿಸ್‍ನ ಸಾದ್ಯತೆ ಇರಬಹುದು.

ಮೂರನೇ ಗುಂಪಿನಲ್ಲಿ ರೋಗಿಗಳು ರೇಬಿಸ್ ಸಂಶಯದ ಪ್ರಾಣಿಯಿಂದ ಕಡಿತಕೊಳ್ಳಗಾಗಿರುತ್ತಾರೆ. ಅಥವಾ ಎಂಜಲು ಗಾಯಗೊಂಡ ದೇಹದ ಭಾಗಕ್ಕೆ ಸ್ಪರ್ಶವಾಗಿರುತ್ತದೆ. ಎರಡನೇ ಮತ್ತು ಮೂರನೇ ಗುಂಪಿನ ರೋಗಿಗಳಿಗೆ ರೇಬಿಸ್ ಲಸಿಕೆ ಹಾಕಲೇಬೇಕು.

ಭಾರತ ದೇಶವೊಂದರಲ್ಲಿ ಸುಮಾರು 20,000 ಮರಣ (ವಿಶ್ವದೆಲ್ಲೆಡೆ 55,000) ವರುಷದಲ್ಲಿ ನಾಯಿ ಕಡಿತದಿಂದ ಆಗುತ್ತಿದೆ. ಹೆಚ್ಚಿನ ಸಂಖ್ಯೆ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಆಗುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತ ದೇಶವೊಂದರಲ್ಲಿ 25 ಮಿಲಿಯನ್ ನಾಯಿಗಳಿವೆ ಎಂದು ಅಂಕಿ ಅಂಶಗಳು ಸಾರಿ ಹೇಳುತ್ತದೆ. ಇವುಗಳಲ್ಲಿ 50 ಶೇಕಡಾ ನಾಯಿಗಳಿಗೂ ಲಸಿಕೆ ಹಾಕಲಾಗುವುದಿಲ್ಲ ಎಂಬದೇ ಗಮನಾರ್ಹ ಅಂಶವಾಗಿದೆ. ರೇಬಿಸ್ ನಾಯಿ ಅಲ್ಲದೇ ಬೆಕ್ಕು, ತೋಳ, ಕತ್ತೆ, ಮಂಗ, ಮುಂಗುಸಿ, ದನ, ಬಾವಲಿ ಮುಂತಾದ ಪ್ರಾಣಿಗಳಿಂದಲೂ ಹರಡುವ ಸಾಧ್ಯತೆ ಇದೆ. ಆದರೆ ಮುಖ್ಯವಾಗಿ ಶೇಖಡಾ 90ಭಾಗದಷ್ಟು ನಾಯಿ ಕಡಿತದಿಂದಲೇ ರೇಬಿಸ್ ಉಂಟಾಗುತ್ತದೆ. ನಾಯಿ ಸಾಕಲು ಲೈಸನ್ಸ್, ಬೀದಿನಾಯಿಗಳ ಕೊಲ್ಲುವಿಕೆ ಮತ್ತು ಖಡ್ಡಾಯ ಲಸಿಕೆ ಇತ್ಯಾದಿ ಕಾರ್ಯಗಳಿಂದ ಮುಂದುವರಿದ ರಾಷ್ಟ್ರಗಳಲ್ಲಿ ರೇಬಿಸ್ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಬ್ರಿಟನ್ ಮತ್ತು ಆಸ್ಟ್ರೇಲಿಯಾದಲ್ಲಿ ರೇಬಿಸ್ ಪ್ರಮಾಣ ಬಹಳ ಕಡಿಮೆ. ಭಾರತ ಮತ್ತು ಏಷ್ಯಾಖಂಡದ ಪಾಕಿಸ್ತಾನ, ಬಾಂಗ್ಲಾ ಮತ್ತು ಶ್ರೀಲಂಕಾಗಳಲ್ಲಿ ಅತೀ ಹೆಚ್ಚು ಕಾಣಸಿಗುತ್ತದೆ. ಆಫ್ರಿಕಾ ಖಂಡದ ದೇಶದಲ್ಲೂ ಹೆಚ್ಚು ರೇಬಿಸ್ ಕಾಣಸಿಗುತ್ತದೆ. ವಿಷಾದನೀಯ ವಿಚಾರವೆಂದರೆ ರೇಬಿಸ್ ರೋಗಕ್ಕೆ ಚಿಕಿತ್ಸೆ ಇಲ್ಲ. ಆದರೆ ರೇಬಿಸ್ ತಡೆಯಲು ಲಸಿಕೆಯಂತೂ ಲಭ್ಯವಿದೆ. ಈ ಕಾರಣಕ್ಕಾಗಿಯೇ ನಾಯಿ ಕಡಿದ ಕೂಡಲೇ ಲಸಿಕೆ ಹಾಕಿಸಿಕೊಳ್ಳುವುದರಲ್ಲಿಯೇ ಜಾಣತನ ಅಡಗಿದೆ.

ಪ್ರಥಮ ಚಿಕಿತ್ಸೆ ಹೇಗೆ ?

ನಾಯಿ ಕಡಿತದ ಬಳಿಕ ನೀಡುವ ಪ್ರಥಮ ಚಿಕಿತ್ಸೆಯ ಮೂಲ ಉದ್ದೇಶವೇನೆಂದರೆ ರೇಬಿಸ್ ತಡೆಗಟ್ಟುವುದು. ಇದರ ಜೊತೆಗೆ ಕೀವು ಮತ್ತು ಸೋಂಕು ತಗಲದಂತೆ ನೋಡಿಕೊಳ್ಳಬೇಕು ಮತ್ತು ಆದಷ್ಟು ಬೇಗ ವೈದ್ಯಕೀಯ ನೆರವು ದೊರಕುವಂತೆ ಮಾಡಬೇಕು. ಮೊದಲು ಗಾಯಗೊಂಡ ವ್ಯಕ್ತಿಯ ದೇಹದ ಭಾಗವನ್ನು ಶುಭ್ರವಾದ ಕರವಸ್ತ್ರ ಅಥವಾ ಬಟ್ಟೆಯಿಂದ ಒರಸಬೇಕು. ನಾಯಿಯ ಎಂಜಲನ್ನು ಸಾಧ್ಯವಾದಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ದಯವಿಟ್ಟು ಖಾಲಿ ಕೈಯಿಂದ ಎಂಜಲನ್ನು ಸ್ಪರ್ಶಿಸಬೇಡಿ. ಗಾಯವನ್ನು ಚೆನ್ನಾಗಿ ಸೋಪಿನ ದ್ರಾವಣ ಮತ್ತು ಶುದ್ಧ ನಳ್ಳಿಯ ನೀರಿನಲ್ಲಿ ಶುಚಿಗೊಳಿಸಬೇಕು. ಗಾಯಗೊಂಡ ಭಾಗವನ್ನು ಒಣಗಿದ, ಕಲ್ಮಶ ರಹಿತ ಬಟ್ಟೆಯಿಂದ ಅಥವಾ ಹತ್ತಿಯಿಂದ ಮುಚ್ಚಬೇಕು. ಕಾರ್ಬೋಲಿಕ್ ಆಸಿಡ್, ನೈಡ್ರಿಕ್ ಆಸಿಡ್ ಬಳಕೆ ಮಾಡಬಾರದು. ಹೈಡ್ರೋಜನ್ ಪೆರಾಕ್ಸೈಡ್, ಆಲ್ಕೋಹಾಲ್ ಮಿಶ್ರಿತ ಸ್ಪಿರಿಟ್ ಬಳಕೆ ಮಾಡಬಹುದು ಆದಷ್ಟು ಬೇಗ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸಬೇಕು.
ಕಚ್ಚಿದ ನಾಯಿಯನ್ನು ಯಾವುದೇ ಕಾರಣಕ್ಕೂ ಕೊಲ್ಲಬಾರದು. ಹತ್ತು ದಿನಗಳ ಕಾಲ ಕಚ್ಚಿದ ನಾಯಿಯ ಆರೋಗ್ಯವನ್ನು ಅಭ್ಯಸಿಸಬೇಕು. ನಾಯಿಗೆ ರೇಬಿಸ್ ಇದ್ದಲ್ಲಿ ನೀರು ಕಂಡಾಗ ನಾಯಿ ಬೆದರುತ್ತದೆ. 10 ದಿನಗಳ ಬಳಿಕವೂ ನಾಯಿ ಆರೋಗ್ಯವಾಗಿದ್ದಲ್ಲಿ ಕಚ್ಚಿಸಿಕೊಂಡ ವ್ಯಕ್ತಿಗೆ ರೇಬಿಸ್ ಬರುವ ಸಾಧ್ಯತೆ ಕಡಿಮೆ. ಆದರೆ ತಿಂಗಳುಗಳ ಬಳಿಕ ಅಥವಾ ವರುಷಗಳ ಬಳಿಕ ಬಂದರೂ ಬರಬಹುದು. ಒಟ್ಟಿನಲ್ಲಿ ಲಸಿಕೆ ಹಾಕಿಸಿಕೊಂಡಲ್ಲಿ ರೇಬಿಸನ್ನು ತಡೆಗಟ್ಟಬಹುದು. ಆಲಕ್ಷ ಮಾಡಿದಲ್ಲಿ ಜೀವಕ್ಕೆ ಸಂಚಕಾರ ಬರಬಹುದು. ನಾಯಿಯಿಂದ ಕಚ್ಚಿಸಿಕೊಂಡ ವ್ಯಕ್ತಿಗೆ ಸಮಾಧಾನ ಮಾಡಿ ಮನಸ್ಸಿಗೆ ಧೈರ್ಯ ತುಂಬಿ ಗಾಯಕ್ಕೆ ರೋಗ ನಿರೋಧಕ ಮುಲಾಮನ್ನು ಹಚ್ಚಬೇಕು. ವೈದ್ಯರ ಸಲಹೆಯಂತೆ ಟೆಟನಸ್ ಲಸಿಕೆಯನ್ನು ಖಡ್ಡಾಯವಾಗಿ ಹಾಕಿಸತಕ್ಕದ್ದು.

ತಡೆಗಟ್ಟುವುದು ಹೇಗೆ?

ಶೇಕಡಾ 60ರಷ್ಟು ಬೀದಿ ನಾಯಿಗಳು ಮತ್ತು 40 ಶೇಕಡಾ ಸಾಕು ನಾಯಿಗಳು ನಾಯಿ ಕಡಿತಕ್ಕೆ ಕಾರಣವಾಗುತ್ತದೆ. ಸಾಕು ನಾಯಿಗಳನ್ನು ಆಯ್ಕೆ ಮಾಡುವಾಗ ಹುಷಾರಾಗಿರಬೇಕು. ಪರಿಚಯವಿಲ್ಲದ ನಾಯಿಗಳಿಂದ ದೂರವಿರಬೇಕು. ಸಣ್ಣ ಮಕ್ಕಳನ್ನು ನಾಯಿಗಳ ಜೊತೆ ಏಕಾಂಗಿಯಾಗಿ ಬಿಡಬಾರದು. ನಾಯಿ ತಿನ್ನುತ್ತಿರುವಾಗ ಅಥವಾ ತನ್ನ ಮರಿಗಳಿಗೆ ಹಾಲೂಡಿಸುವಾಗ ನಾಯಿಯ ತಂಟೆಗೆ ಹೋಗಲೇಬಾರದು. ಅಪರಿಚಿತ ನಾಯಿಯ ಬಳಿ ಎಚ್ಚರದಿಂದಿರಬೇಕು. ನಾಯಿಯನ್ನು ಮುದ್ದಿಸಬೇಕೆಂದಿದಲ್ಲಿ ನಿಧಾನವಾಗಿ ನಾಯಿಯ ಬಳಿ ಸಾಗಬೇಕು. ನಾಯಿಯು ನಮ್ಮ ಬಳಿ ಬರುವಂತೆ ಆಕರ್ಷಿಸಬೇಕು. ಅಪರಿಚಿತ ಅಥವಾ ಪರಿಚಿತ ನಾಯಿ ಕ್ರೂರವಾಗಿ ವರ್ತಿಸಿದಲ್ಲಿ ನಾಯಿಯಿಂದ ತಪ್ಪಿಸಿಕೊಳ್ಳುವಂತೆ ಓಡಬಾರದು ಮತ್ತು ಕಿರುಚಬಾರದು ಧೈರ್ಯದಿಂದ ಶಾಂತಿಯಿಂದ ವರ್ತಿಸಬೇಕು. ಯಾವತ್ತೂ ನಾಯಿಯನ್ನು ದುರುಗುಟ್ಟಬಾರದು. ನಾವು ಓಡಿದಲ್ಲಿ ನಾಯಿ ಮತ್ತಷ್ಟು ಉದ್ರೇಕಗೊಳ್ಳುತ್ತದೆ. ಸಾಕುನಾಯಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು. ಜಗಳವಾಡುತ್ತಿರುವ ಎರಡು ನಾಯಿಗಳ ಮಧ್ಯೆ ಯಾವತ್ತೂ ತಲೆಹಾಕಬಾರದು. ನೀವು ನಾಯಿ ಪ್ರಿಯರಾಗಿದ್ದರೂ ಸಿಟ್ಟಿನಲ್ಲಿರುವ ನಾಯಿಗಳ ತಂಟೆಗೆ ಹೋಗಬಾರದು. ಮಲಗಿರುವ ನಾಯಿಯ ಜೊತೆ ಸಲ್ಲಾಪ ಆಟ ಒಳ್ಳೆಯದಲ್ಲ. ನಾಯಿಯ ಜೊತೆ ಸರಸವಾಡುವಾಗ ನಿಧಾನವಾಗಿ ನಾಯಿಯ ಬೆನ್ನನ್ನು ಸವರಬೇಕು ತಲೆಯ ಮೇಲೆ ಬಡಿಯಬಾರದು ಅದೇ ರೀತಿ ನಾಯಿಯನ್ನು ಅಪ್ಪಿಕೊಳ್ಳುವುದು ಮತ್ತು ಕಿಸ್ ನೀಡುವುದು ಬಹಳ ಅಪಾಯಕಾರಿಯಾದ ಪ್ರಕ್ರಿಯೆ.
ರೇಬಿಸ್ ರೋಗದ ಲಕ್ಷಣಗಳು
ರೇಬಿಸ್ ಎಂಬ ವೈರಾಣುವಿನ ಸೋಂಕಿನಿಂದ ಬರುವ ರೇಬಿಸ್ ರೋಗ ಮುಖ್ಯವಾಗಿ ಮೆದುಳಿನ ಜೀವಕೋಶಗಳಿಗೆ ಊತವನ್ನುಂಟುಮಾಡುತ್ತದೆ. ಮೊದಲು ಜ್ವರ ಬರಬಹುದು. ಬಳಿಕ ಗಾಯದ ಬಳಿ ಸಂವೇಧನೆ ಇಲ್ಲದಾಗಬಹುದು. ತಡೆದುಕೊಳ್ಳಲಾಗದ ಉದ್ರೇಕತೆ, ನಿಯಂತ್ರಣವಿಲ್ಲದ ದೇಹದ ಚಲನವಲನ, ನೀರಿನ ಭಯ (ಹೈಡ್ರೋಪೋಬಿಯಾ), ದೇಹದ ಭಾಗಗಳ ಮೇಲಿನ ನಿಯಂತ್ರಣ ತಪ್ಪುವಿಕೆ ಮತ್ತು ನಿಶ್ಚಲಗೊಂಡ ದೇಹದ ಭಾಗಗಳು, ಮನೋ ವ್ಯಾಕುಲತೆ ಮತ್ತು ಪ್ರಜ್ಞೆ ತಪ್ಪುವುದು. ರೇಬಿಸ್ ಲಕ್ಷಣಗಳು ಕಾಣಿಸಿಕೊಂಡ ಬಳಿಕ ನರಮಂಡಲಕ್ಕೆ ವ್ಯಾಪಿಸಿದ ಬಳಿಕ ಚಿಕಿತ್ಸೆ ಪರಿಣಾಮಕಾರಿಯಾಗಲಿಕ್ಕಿಲ್ಲ. ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಲಸಿಕೆ ಹಾಕಿಸಿದಲ್ಲಿ ರೋಗವನ್ನು ತಡೆಗಟ್ಟಬಹುದು. ನಾಯಿ ಕಚ್ಚಿದ ಒಂದು ತಿಂಗಳು ಅಧವಾ 3 ತಿಂಗಳ ಒಳಗೆ ಈ ಚಿಹ್ನೆಗಳು ಕಾಣಿಸಿಕೊಳ್ಳಬಹುದು. (ಲಸಿಕೆ ಹಾಕಿಸದಿದ್ದಲ್ಲಿ) ಕೆಲವೊಮ್ಮೆ ಕಚ್ಚಿದ ವಾರಗಳ ಬಳಿಕವೂ ಅಥವಾ ವರುಷದ ಬಳಿಕವೂ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ನಾಯಿ ಕಚ್ಚಿದ ಬಳಿಕ ವೈರಸ್ ನರಮಂಡಲವನ್ನು ತಲುಪುವ ಸಮಯವನ್ನು ಅಂದಾಜಿಸಲು ಸಾಧ್ಯವಿಲ್ಲ. ನರಮಂಡಲ ತಲುಪಿ ಮೆದುಳಿಗೆ ವ್ಯಾಪಿಸಿ ರೇಬಿಸ್ ಲಕ್ಷಣಗಳು ಕಾಣಿಸಿದ ಬಳಿಕ ವ್ಯಕ್ತಿ ಬದುಕಿ ಉಳಿಯುವ ಸಾಧ್ಯತೆ ಕಡಿಮೆ.


ರೇಬಿಸ್ ಲಸಿಕೆ ಬಗೆಗಿನ ವಿವರಗಳು
ಲಸಿಕೆ ಮುಖಾಂತರ ರೇಬಿಸ್ ರೋಗವನ್ನು ತಡೆಯಬಹುದು. ರೇಬಿಸ್ ಲಸಿಕೆಯನ್ನು ಸತ್ತ ರೇಬಿಸ್‍ನ ವೈರಾಣುವಿನಿಂದ ಮಾಡಲಾಗಿದ್ದು ಲಸಿಕೆಯಿಂದ ರೇಬಿಸ್ ಬರುವ ಸಾಧ್ಯತೆ ಇಲ್ಲ. ರೋಗದ ಲಕ್ಷಣ ಕಾಣಿಸಿಕೊಂಡ ಬಳಿಕ ಈ ಲಸಿಕೆಯ ಉಪಯೋಗವಿಲ್ಲ. ನಾಯಿ ಕಚ್ಚುವ ಮೊದಲು ರೇಬಿಸ್ ತಡೆಗಟ್ಟಲೆಂದು ಹೆಚ್ಚಾಗಿ ಈ ರೀತಿ ನಾಯಿಗಳು ಮತ್ತು ರೇಬಿಸ್ ಹರಡುವ ಪ್ರಾಣಿಗಳ ಜೊತೆ ವ್ಯವಹರಿಸುವವರಿಗೆ 3 ಆಂಟಿ ರೇಬಿಸ್ ಲಸಿಕೆ ನೀಡಲಾಗುತ್ತದೆ. ಮೊದಲ ಲಸಿಕೆಯ ಬಳಿಕ 7 ದಿನಗಳ ನಂತರ 2ನೇ ಲಸಿಕೆ ಮತ್ತು 21 ಅಥವಾ 28 ದಿನಗಳ ಬಳಿಕ 3ನೇ ಲಸಿಕೆ ಹಾಕಲಾಗುತ್ತದೆ. ನಾಯಿ ಕಚ್ಚಿದ ಬಳಿಕ ಲಸಿಕೆ ಹಾಕಿಸುವುದಾದಲ್ಲಿ ( ಈ ಹಿಂದೆ ಲಸಿಕೆ ಹಾಕಿಸಿಕೊಂಡಿಲ್ಲವಾದಲ್ಲಿ) ನಾಲ್ಕು ಲಸಿಕೆಗಳ ಅವಶ್ಯಕತೆ ಇರುತ್ತದೆ. ಮೊದಲನೆ ಲಸಿಕೆಯನ್ನು ನಾಯಿ ಕಚ್ಚಿದ ಕೂಡಲೇ ಹಾಕಿಸಬೇಕು. ಆ ಬಳಿಕ 3ನೇ, 7ನೇ ಮತ್ತು 14ನೇ ದಿನ ಹಾಕಿಸತಕ್ಕದ್ದು. ಇದರ ಜೊತೆಗೆ ಮೊದಲ ಲಸಿಕೆ ಜೊತೆಗೆ ರೇಬಿಸ್ ಇಮ್ಯುನೋಗ್ಲೋಬುಲಿನ್ ಎಂಬ ಇನ್ನೊಂದು ಲಸಿಕೆಯನ್ನು ನೀಡಲಾಗುತ್ತದೆ. ಅದೇ ರೀತಿ ಈ ಹಿಂದೆ ರೇಬಿಸ್ ಲಸಿಕೆ ರಕ್ಷಣೆಗೆಂದು ಹಾಕಿಸಿಕೊಂಡಿದ್ದಲ್ಲಿ ಅಂತಹ ವ್ಯಕ್ತಿಗೆ ನಾಯಿ ಅಥವಾ ಇನ್ನಾವುದೇ ರೇಬಿಸ್ ಶಂಕಿತ ಪ್ರಾಣಿ ಕಚ್ಚಿದಲ್ಲಿ ಎರಡು ಲಸಿಕೆಗಳ ಅವಶ್ಯಕತೆ ಇರುತ್ತದೆ. ಒಂದು ಕಡಿತವಾದ ಕೂಡಲೇ ಮತ್ತೊಂದು 3 ದಿನಗಳ ಬಳಿಕ ಹಾಕಿಸಬೇಕು. ಇವರಿಗೆ ರೇಬಿಸ್ ಇಮ್ಯುನೋಗ್ಲೊಬ್ಯುಲಿನ್ ಎಂಬ ಇನ್ನೊಂದು ಲಸಿಕೆಯ ಅವಶ್ಯಕತೆ ಇಲ್ಲ. ಹಿಂದಿನ ಕಾಲದಲ್ಲಿ ಇದ್ದಂತೆ ಹೊಟ್ಟೆಯ ಸುತ್ತ ಬಹಳ ನೋವುಕಾರಕ ಹಲವಾರು ಇಂಜೆಕ್ಷನ್ ಈಗಿನ ಕಾಲದಲ್ಲಿ ಕೊಡುವ ಅಗತ್ಯ ಇಲ್ಲ. ಸಾಮಾನ್ಯವಾಗಿ ಚರ್ಮದ ಕೆಳಗೆ ಮತ್ತು ತೊಡೆಯ ಒಳಭಾಗದಲ್ಲಿ ಈ ಲಸಿಕೆ ನೀಡಲಾಗುತ್ತದೆ. ಕೇವಲ ಒಂದು ಎಂ.ಎಲ್. ಇರುವ ಈ ಲಸಿಕೆಯನ್ನು ಪೃಷ್ಟ ಬಾಗದ ಸ್ನಾಯುಗಳಿಗೆ ಕೊಡಬಾರದು. ಹಾಗೇ ಕೊಟ್ಟಲ್ಲಿ ರಕ್ತಕ್ಕೆ ಸೇರಿಕೊಳ್ಳದೇ ರೋಗ ನಿರೊಧಕ ಶಕ್ತಿ ಸಂಪೂರ್ಣವಾಗಿ ಸಿಗದೇ ಹೋಗಬಹುದು.

ಕೊನೆಯ ಮಾತು :

ರೇಬಿಸ್ ಎನ್ನುವುದು ಮಾರಣಾಂತಿಕ ರೋಗ. ನರಮಂಡಲವನ್ನು ಕಾಡುವ ಈ ರೋಗಕ್ಕೆ ಇನ್ನೂ ಔಷಧಿ ಕಂಡುಹಿಡಿಯಲಾಗಿಲ್ಲ. ಆದರೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ರೇಬಿಸ್ ಉಂಟುಮಾಡುವ ಪ್ರಾಣಿಗಳು ಕಚ್ಚಿದಾಗ, ಸಾಕಷ್ಟು ಮುಂಜಾಗರೂಕತೆ ವಹಿಸಿ ಪರಿಣಾಮಕಾರಿ ರೇಬಿಸ್ ವಿರೋಧಿ ಲಸಿಕೆಗಳನ್ನು ತಜ್ಞ ವೈದ್ಯರ ಸೂಕ್ತ ಮಾರ್ಗದರ್ಶನದಲ್ಲಿ ಸಕಾಲದಲ್ಲಿ ಹಾಕಿಸಿಕೊಂಡಲ್ಲಿ ಖಂಡಿತವಾಗಿಯೂ ರೇಬಿಸ್ ರೋಗವನ್ನು ಗೆಲ್ಲಬಹುದು. 25 ಮಿಲಿಯನ್‍ಗಳಿಗಿಂತಲೂ ಜಾಸ್ತಿ ನಾಯಿಗಳ ಸಂಖ್ಯೆ ಇರುವ ಭಾರತದಲ್ಲಿ, ವರ್ಷಕ್ಕೆ ಏನಿಲ್ಲವೆಂದರೂ 10 ಲಕ್ಷ ಮಂದಿ ನಾಯಿ ಕಡಿತಕ್ಕೆ ಒಳಗಾಗುತ್ತಾರೆ. ಮತ್ತು 20,000 ಮಂದಿ ಸಾವನ್ನಪ್ಪುತ್ತಾರೆ ಎಂಬುದನ್ನು ನಂಬಲೇಬೇಕು. ಸಕಾಲದಲ್ಲಿ ರೇಬಿಸ್ ಲಸಿಕೆ ಹಾಕಿಸಿಕೊಂಡಲ್ಲಿ ಈ ಸಾವಿನ ಪ್ರಮಾಣವನ್ನು ಖಂಡಿತವಾಗಿಯೂ ಕಡಿಮೆ ಮಾಡಬಹುದು. ಆ ಮೂಲಕ ರಾಷ್ಟ್ರೀಯ ಮಾನವ ಸಂಪನ್ಮೂಲದ ಸೋರಿಕೆಯನ್ನು ಕಡಿಮೆ ಮಾಡಿ ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ನಾವೆಲ್ಲಾ ಕಿರುಕಾಣಿಕೆ ನೀಡಬಹುದು. ಅದರಲ್ಲಿಯೇ ನಮ್ಮೆಲ್ಲರ ಒಳಿತು ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು
BDS,MDS,DNB,MOSRCSEd(U.K),FPFA, M.B.A
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
mobiಟe-9845135787
Show quoted text

Leave a Comment

Your email address will not be published. Required fields are marked *