ಸಮಗ್ರ ನ್ಯೂಸ್: ತಮಿಳು ಮೂಲದ ನಟ ಸಿದ್ಧಾರ್ಥ್ ಬೆಂಗಳೂರಿನಲ್ಲಿ ಮಾಡುತ್ತಿದ್ದ ಸುದ್ದಿಗೋಷ್ಠಿಯನ್ನು ಕರವೇ ಕಾರ್ಯಕರ್ತರು ತಡೆದಿದ್ದಾರೆ. ಸಿದ್ಧಾರ್ಥ್ ನಟನೆಯ ‘ಚಿತ್ತ’ ಸಿನಿಮಾ ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಈ ಕುರಿತು ಬೆಂಗಳೂರಿನ ಮಲ್ಲೇಶ್ವರದ ಎಸ್ಆರ್ವಿಯಲ್ಲಿ ನಟ ಸಿದ್ಧಾರ್ಥ್ ಸುದ್ದಿಗೋಷ್ಠಿ ನಡೆಸುತ್ತಿದ್ದರು, ಸುದ್ದಿಗೋಷ್ಠಿಗೆ ನುಗ್ಗಿದ ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಸದಸ್ಯರು ಸುದ್ದಿಗೋಷ್ಠಿಯನ್ನು ತಡೆದಿದ್ದಾರೆ.
ವೇದಿಕೆ ಮೇಲೆ ನಟ ಸಿದ್ಧಾರ್ಥ್ ತಮ್ಮ ಸಿನಿಮಾ ಕುರಿತಾಗಿ ಮಾತನಾಡುತ್ತಿರುವ ಸಂದರ್ಭದಲ್ಲಿ ನುಗ್ಗಿದ ಕಾರ್ಯಕರ್ತರು, ‘ಕಾವೇರಿ ವಿವಾದ ಕಾವೇರಿರುವ ಸಂದರ್ಭದಲ್ಲಿ ತಮಿಳು ಸಿನಿಮಾದ ಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಆರ್ಡರ್ ಅಲ್ಲ ಬದಲಿಗೆ ಮನವಿ. ಕೂಡಲೇ ಸಿನಿಮಾದ ಪ್ರಚಾರ ನಿಲ್ಲಿಸಿ ಎಂದರು. ಕರವೇ ಕಾರ್ಯಕರ್ತರು ನುಗ್ಗಿದ ಸಂದರ್ಭದಲ್ಲಿ ನಟ ಸಿದ್ಧಾರ್ಥ್, ಕನ್ನಡದಲ್ಲಿಯೇ ಸಿನಿಮಾದ ಕುರಿತು ಮಾತನಾಡಲು ಪ್ರಯತ್ನಿಸಿದರು. ಆದರೆ ಕರವೇ ಕಾರ್ಯಕರ್ತರು ಸಿದ್ಧಾರ್ಥ್ ಮಾತನ್ನು ತಡೆದು, ಯಾರೂ ಸಹ ತಮಿಳು ಸಿನಿಮಾಕ್ಕೆ ಪ್ರಚಾರ ನೀಡಬಾರದೆಂದು ಆಗ್ರಹಿಸಿದರು.
ಸಿದ್ಧಾರ್ಥ್ ಬಳಿಯೂ ಕರವೇ ಕಾರ್ಯಕರ್ತರು ಮನವಿ ಮಾಡಿ, ದಯವಿಟ್ಟು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಮತ್ತೆ ಎಂದಾದರೂ ಕಾರ್ಯಕ್ರಮ ಮಾಡಿಕೊಳ್ಳಿ ಆದರೆ ಈಗ ಬೇಡ. ಇದು ಸೂಕ್ಷ್ಮ ಸಮಯ. ಈ ಸಮಯದಲ್ಲಿ ಎಲ್ಲರೂ ಕಾವೇರಿಗಾಗಿ ಒಗ್ಗೂಡಬೇಕಿದೆ. ಕಾರ್ಯಕ್ರಮವನ್ನು ಈ ಕೂಡಲೇ ಅಂತ್ಯಗೊಳಿಸಿ ಎಂದು ಹೇಳಿದರು. ಸಿದ್ಧಾರ್ಥ್ ಸಹ ಕೂಡಲೇ ಎದ್ದು ದಯವಿಟ್ಟು ಎಲ್ಲರೂ ನನ್ನ ಸಿನಿಮಾ ನೋಡಿ ಎಂದು ಹೇಳಿ ಕೈಮುಗಿದು ವೇದಿಕೆ ಬಿಟ್ಟು ಹೊರಟರು.