ಸಮಗ್ರ ನ್ಯೂಸ್: ಹುಟ್ಟುತ್ತಲೇ ಶ್ರವಣ ಮತ್ತು ವಾಕ್ ದೋಷ ಇದ್ದ ಜೋಡಿ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಇದೀಗ ಈ ಜೋಡಿಯನ್ನು ಗ್ರಾಮದಿಂದಲೇ ಬಹಿಷ್ಕರಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಬಾಣಂತಿ ಎನ್ನುವುದನ್ನು ಲೆಕ್ಕಿಸದೇ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದು, ಇದೀಗ ಈ ಜೋಡಿ 1 ತಿಂಗಳ ಪುಟ್ಟ ಮಗುವಿನೊಂದಿಗೆ ಚಳ್ಳಕೆರೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದೆ.
ಅಂತರ್ಜಾತಿ ವಿವಾಹವಾಗಿದ್ದಕ್ಕೆ ಗ್ರಾಮಸ್ಥರು ದಂಪತಿಯನ್ನು ಬಹಿಷ್ಕರಿಸಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಎನ್.ದೇವರಹಳ್ಳಿಯ ಸಾವಿತ್ರಮ್ಮ, ಆಂಧ್ರ ಮೂಲದ ಮಣಿಕಂಠನನ್ನು ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಜೋಡಿ ಹುಟ್ಟುತ್ತಲೇ ಶ್ರವಣ ಮತ್ತು ವಾಕ್ ದೋಷ ಹೊಂದಿದ್ದಾರೆ. ಆದ್ರೆ, ಇದೀಗ ತವರು ಮನೆಗೆ ಬಂದಿರುವ ಸಾವಿತ್ರಮ್ಮಳನ್ನು ಬಾಣಂತಿ ಎನ್ನುವುದನ್ನೂ ಲೆಕ್ಕಿಸದೇ ಮುಖಂಡರು ಊರಿನಿಂದ ಬಹಿಷ್ಕರಿಸಿದ್ದಾರೆ.
ಸಾವಿತ್ರಮ್ಮ ದೇವರಹಳ್ಳಿ ಗ್ರಾಂದ ಜೋಗಿ ಸಮುದಾಯಕ್ಕೆ ಸೇರಿದ್ದರೆ, ಮಣಿಕಂಠ ರೆಡ್ಡಿ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಗಳಾಗಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮವಾಗಿದೆ, 2021 ಏಪ್ರಿಲ್ 7ರಂದು ವಾಕ್-ಶ್ರವಣ ದೋಷದ ಜೋಡಿ ಮದುವೆಯಾಗಿತ್ತು. ಬಳಿಕ ಸಾವಿತ್ರಮ್ಮ ಗಂಡನನ್ನು ತನ್ನ ತವರಿಗೆ ಕರೆತಂದಿದ್ದರು. ಆಗಲೂ ಗ್ರಾಮದ ಜೋಗಿ ಸಮುದಾಯದ ಮುಖಂಡರು, ಅನ್ಯಜಾತಿ ಯುವಕನನ್ನು ಮದುವೆಯಾಗಿರುವುದು ಸಂಪ್ರದಾಯಕ್ಕೆ ವಿರುದ್ಧದ ನಡೆ ಎಂದಿದ್ದರು. ಅಲ್ಲದೇ ಯುವತಿಯ ಪಾಲಕರಿಗೆ 30,000 ರೂ. ದಂಡ ಕಟ್ಟಿಸಿಕೊಂಡು ದಂಪತಿಯನ್ನು ಗ್ರಾಮದಿಂದ ಆಚೆ ಹೋಗುವಂತೆ ಬಹಿಷ್ಕರಿಸಿದ್ದರು. ಬಳಿಕ ದಂಪತಿ ವಿಧಿ ಇಲ್ಲದೇ ಬೆಂಗಳೂರಿಗೆ ವಾಪಸ್ ಆಗಿತ್ತು.
ನಂತರ ಸಾವಿತ್ರಮ್ಮ ಇತ್ತೀಚೆಗೆ ಹೆರಿಗೆಂದು ತವರಿಗೆ ಬಂದ ವಿಷಯ ತಿಳಿದ ಜೋಗಿ ಜನಾಂಗದ ಮುಖಂಡರು ಮತ್ತೆ ಆಕೆಯ ಪಾಲಕರನ್ನು ಕರೆಸಿ ಗಲಾಟೆ ಮಾಡಿದ್ದಾರೆ. ಮಗಳು ಹಾಗೂ ಅಳಿಯನನ್ನು ಗ್ರಾಮದಿಂದ ಹೊರ ಕಳುಹಿಸುವಂತೆ ಸೂಚಿಸಿದ್ದಾರೆ. ಇಲ್ಲದಿದ್ದರೆ ನಿಮ್ಮನ್ನೂ ಸಹ ಗ್ರಾಮದಿಂದ ಶಾಶ್ವತವಾಗಿ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬೇಸತ್ತ ಸಾವಿತ್ರಮ್ಮ ಮತ್ತು ಆಕೆ ಪತಿ ಒಂದು ತಿಂಗಳ ಮಗುವಿನೊಂದಿಗೆ ಚಳ್ಳಕೆರೆಯ ಮೂಗ ಮತ್ತು ಕಿವುಡರ ಶಾಲೆ ತೆರಳಿ ಅಲ್ಲಿನ ಸಿಬ್ಬಂದಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ. ಬಳಿಕ ಅಲ್ಲಿನ ಶಿಕ್ಷಕರು ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆತಂದು ತಹಶೀಲ್ದಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಚೆಳ್ಳಿಕೆರೆ ತಹಶೀಲ್ದಾರ್ ರಹಾನ್ ಪಾಷ ಸಾವಿತ್ರಮ್ಮ ಇರುವ ಸಾಂತ್ವನ ಕೇಂದ್ರ ಭೇಟಿ ನೀಡಿ ಸಾವಿತ್ರಮ್ಮ ಮತ್ತು ಆಕೆಯ ಗಂಡನಿಂದ ಮಾಹಿತಿ ಪಡೆದುಕೊಂಡು ಧೈರ್ಯ ಹೇಳಿದ್ದಾರೆ. ಇದೀಗ ಸಂತ್ರಸ್ತ ಜೋಡಿಯ ಪರ ನಿಂತ ಸಾಮಾಜಿಕ ಹೋರಾಟಗಾರರು ಪ್ರತಿಭಟನೆಗೆ ಮುಂದಾಗಿದ್ದು, ಬಹಿಷ್ಕಾರ ಹಾಕಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಆಗ್ರಹಿಸಿದ್ದಾರೆ