ಸಮಗ್ರ ನ್ಯೂಸ್: ಹಳ್ಳಿಗಳಿಂದ ಆರಂಭವಾಗಿ ನಗರದ ಸೂಪರ್ ಮಾರ್ಕೆಟ್ ಗಳಲ್ಲಿ ಇನ್ನು ಮುಂದೆ ಮದ್ಯೆ ಸಿಗುವ ಖಾತರಿ ಆಗುತ್ತಿದೆ. ಸಣ್ಣ ಗ್ರಾಮ ಪಂಚಾಯತಿಗಳು ಮತ್ತು ನಗರದ ಸೂಪರ್ ಮಾರುಕಟ್ಟೆಯಲ್ಲಿ ಮದ್ಯದಂಗಡಿ ತೆರೆಯಲು ಹೊಸ ಪರವಾನಗಿ ವಿತರಣೆ ಮತ್ತು ಬಳಕೆಯಲ್ಲಿ ಇಲ್ಲದ ಪರವಾನಗಿಗಳಿಗೆ ಮತ್ತೆ ಜೀವ ನೀಡುವ ಕುರಿತು ಅಬಕಾರಿ ಇಲಾಖೆ ಯೋಜನೆ ಸಿದ್ದಪಡಿಸಿದೆ.
2023-24ನೇ ಸಾಲಿನ ಬಜೆಟ್‌ನಲ್ಲಿ ನಿಗದಿಪಡಿಸಿರುವ ಆದಾಯದ ಗುರಿಯನ್ನು ತಲುಪಲು, ತೆರಿಗೆ ಸಂಗ್ರಹಕ್ಕೆ ಅಬಕಾರಿ ಇಲಾಖೆ ಯೋಜನೆ ಸಿದ್ದಪಡಿಸಿದೆ. ಮದ್ಯದಂಗಡಿಗಳೇ ಇಲ್ಲದ 600ಕ್ಕೂ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೂತನ ಮದ್ಯದಂಗಡಿ ತೆರೆಯುವ ಕುರಿತು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಇಲಾಖೆಯ ಅಧಿಕಾರಿಗಳ ಜೊತೆ ಮೊದಲ ಹಂತದ ಸಭೆ ನಡೆಸಿದ್ದಾರೆ.
ಸದ್ಯಕ್ಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಹಾದು ಹೋಗಿರುವ ಪ್ರದೇಶಗಳು ಮತ್ತು 5000ಕ್ಕಿಂತ ಕಡಿಮೆ ಜನಸಂಖ್ಯೆ ಇರುವಲ್ಲಿ ಮದ್ಯದಂಗಡಿ ಪರವಾನಗಿ ನೀಡುವುದಕ್ಕೆ ನಿರ್ಬಂಧ ಇದೆ. ಈಗ ಅದನ್ನು ತೆಗೆದುಹಾಕಿ ಈ ಪ್ರದೇಶಗಳಲ್ಲಿ ಮದ್ಯದಂಗಡಿ ಪರವಾನಗಿ ನೀಡುವ ಪ್ರಸ್ತಾಪ ಇಲಾಖೆಯ ಮುಂದಿದೆ.