ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಪಕ್ಷ ಸಂಘಟಿಸುವಂತೆ ನೂತನ ಉಸ್ತುವಾರಿಯಾಗಿ ಮಮತಾ ಗಟ್ಟಿಯವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳನ್ನು ತಿಳಿದು ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಈಗಾಗಲೇ ಮಮತಾ ಗಟ್ಟಿಯವರು ಕಡಬ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದ್ದು, ಸುಳ್ಯ ಬ್ಲಾಕ್ ಕಾಂಗ್ರೆಸ್ ನಲ್ಲಿ ಕಾರ್ಯಕರ್ತರ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಮಮತಾ ಗಟ್ಟಿಯವರು ಕಾರ್ಯಕರ್ತರ ಅಮಾನತು ಉಚ್ಚಾಟನೆ ಗೆ ಬ್ಲಾಕ್ ಕಾಂಗ್ರೆಸ್ ಶಿಫಾರಸ್ಸು ನಡೆಸಿಲ್ಲ ಹಾಗೂ ಅಮಾನತು ಉಚ್ಚಾಟನೆ ಮುಂತಾದ ಪ್ರಕ್ರಿಯೆ ನಡೆಯಲಿಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದಂತೆ ಪರಾಜಿತ ಅಭ್ಯರ್ಥಿ ಜಿ.ಕೃಷ್ಣಪ್ಪನವರು ಗದ್ದಲವೆಬ್ಬಿಸಿ ಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದಾಗಿ ತಿಳಿದುಬಂದಿದೆ.
ಬಳಿಕ ಮಮತಾ ಗಟ್ಟಿಯವರು ಕಡಬದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಅಮಾನತು ಪ್ರಕ್ರಿಯೆ ನಡೆದಿಲ್ಲವೆಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದರು.
ಇದೀಗ ಪರಾಜಿತ ಅಭ್ಯರ್ಥಿಯು ಮಮತಾ ಗಟ್ಟಿಯವರ ಹೇಳಿಕೆಯನ್ನು ವಿರೋಧಿಸಿ, ಉಚ್ಚಾಟನೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವ ಇರಾದೆಯೇ ಇಲ್ಲ. ಇರುವ ಕಾರ್ಯಕರ್ತರನ್ನು ಒಡೆದು ಪಕ್ಷ ಹೋಳಾಗುವಂತೆ ಮಾಡುವುದೇ ಈ ಪರಾಜಿತ ಅಭ್ಯರ್ಥಿಯ ಉದ್ದೇಶವಿರಬಹುದೇ? ಅಥವಾ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಒಡೆಸುವ ಬಗ್ಗೆ ಬಿಜೆಪಿಗರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ?? ಎಂಬಿತ್ಯಾದಿ ಹಲವಾರು ಸಂದೇಹಗಳು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದೆ.
ಜಿ.ಕೃಷ್ಣಪ್ಪರ ಈ ನಡೆ ಪಕ್ಷ ವಿರೋಧಿ ಆಗುವುದಿಲ್ಲವೇ? ಸುಳ್ಯ ಕಾಂಗ್ರೆಸ್ ಸರಿಪಡಿಸಲು ಕೆಪಿಸಿಸಿ ಅಧ್ಯಕ್ಷರೇ ನೇಮಕ ಮಾಡಿರುವ ನೂತನ ಉಸ್ತುವಾರಿಗಳ ಬಗ್ಗೆ ಹಾಗೂ ಕಾರ್ಯಕರ್ತರ ಬಗ್ಗೆ ದ್ವೇಷದ ಕಿಡಿ ಕಾರುತ್ತಿರುವ ಜಿ.ಕೃಷ್ಣಪ್ಪರನ್ನು ಸುಳ್ಯದಿಂದ ಓಡಿಸದೇ ಇದ್ದರೆ ಪಕ್ಷ ಸಂಘಟನೆ ಮಾಡುವುದು ಮರೀಚಿಕೆಯಾಗಿ ಉಳಿಯಬಲ್ಲದು ಎಂಬುದು ಹಲವಾರು ಕಾರ್ಯಕರ್ತರ ಅಭಿಪ್ರಾಯವಾಗಿದೆ.