ಸಮಗ್ರ ನ್ಯೂಸ್: ಭಾರೀ ವಿವಾದಕ್ಕೆ ಕಾರಣವಾಗಿರುವ ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವ ಪರುಶುರಾಮ ಪ್ರತಿಮೆ ಅರ್ಧ ನಕಲಿ ಅರ್ಧ ಅಸಲಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಪರಶುರಾಮ ಪ್ರತಿಮೆ ಇರುವ ಥೀಂ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಕಾರ್ಕಳದ ಬೈಲೂರಿನ ಸ್ಥಾಪಿಸಲಾಗಿರುವ ‘ಪರಶುರಾಮನ ಪ್ರತಿಮೆಯನ್ನು ಅಸಲಿ ಎಂದೂ ಹೇಳಲಾಗುತ್ತಿಲ್ಲ, ನಕಲಿ ಎಂದೂ ಹೇಳಲಾಗುತ್ತಿಲ್ಲ. ಪ್ರತಿಮೆಯ ಕೈ, ಮುಖ ಸೇರಿದಂತೆ ಪ್ರತಿಮೆಯ ಅರ್ಧ ಭಾಗವನ್ನೇ ಬದಲಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ವಿಧಾನಸಭಾ ಚುನಾವಣೆ ಹತ್ತಿರ ಇರುವಾಗ ರಾಜಕೀಯ ಲಾಭಕ್ಕಾಗಿ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಹೋಗಿ ಹಲವು ತಪ್ಪುಗಳನ್ನು ಎಸಗಿರುವುದು ಕಂಡುಬಂದಿದೆ. ಯಾವ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.
ಪ್ರತಿಮೆ ಎತ್ತರದ ಪ್ರದೇಶದಲ್ಲಿರುವುದರಿಂದ ಮಳೆ ಗಾಳಿಗೆ ಬಿದ್ದು ಅವಘಡಗಳಾದರೆ ಯಾರು ಹೊಣೆ ಎಂಬ ಆತಂಕ ಕಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಮೆ ಸುರಕ್ಷಿತವಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಮೆ ನಿರ್ಮಾಣ ಮಾಡಿರುವ ಬೆಂಗಳೂರಿನ ಕಲಾವಿದರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಫೈಬರ್ ಮಿಶ್ರಿತ ಪರಶುರಾಮ ವಿಗ್ರಹ:
ಮಂಗಳೂರಿನ ಖ್ಯಾತ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಈ ಬಗ್ಗೆ ಮಾಹಿತಿಗಳನ್ನು ಕ್ರೋಡೀಕರಿಸಿ ಫೇಸ್ಬುಕ್ ನಲ್ಲಿ ಬರೆದಿದ್ದಾರೆ. ಆಗಿನ ಡೀಸಿಯವರು ಅಪೂರ್ಣ ಕಾಮಗಾರಿಯನ್ನು ನೇರಾನೇರ ಉದ್ಘಾಟನೆಗೆ ಸಜ್ಜುಗೊಳಿಸಲು ಆಗುವುದಿಲ್ಲ. ಹಾಗೆ ಮಾಡಿದಲ್ಲಿ ಮುಂದೆ ಸಾರ್ವಜನಿಕರ ಜೀವ ಹಾನಿಗೂ ಕಾರಣವಾಗಬಹುದು ಎಂದು ಸಲಹೆ ನೀಡಿದ್ದರಂತೆ. ಆದರೆ ನಿಮ್ಮ ಲೆಕ್ಕಾಚಾರ ಹಾಕಿ ಕುಳಿತುಕೊಳ್ಳಲು ಸಮಯ ಇಲ್ಲ. ಚುನಾವಣೆ ಮೊದಲು ಉದ್ಘಾಟನೆ ಆಗುವಂತಾಗಬೇಕು ಎಂದು ತಾಕೀತು ಮಾಡಿದ್ದರಂತೆ. ಪರಶುರಾಮನ ಮೂರ್ತಿಯಲ್ಲಿ ಕೊಡಲಿ ಬಹುಮುಖ್ಯ ಅಂಗ. ಮೂರ್ತಿಯ ಎತ್ತರಕ್ಕೆ ತಕ್ಕಂತೆ ಕೊಡಲಿ ಮತ್ತು ಅದನ್ನು ಹಿಡಿದುಕೊಂಡ ಕೈ ಒಂದೂವರೆ ಟನ್ ತೂಗಬೇಕು. ಇಷ್ಟು ಭಾರವನ್ನು ತೂಗಲು ಸೂಕ್ತ ಪಿಲ್ಲರ್ ಕೊಡಬೇಕಾಗುತ್ತದೆ. ಸ್ವಲ್ಪ ತಪ್ಪಿದರೂ ಪ್ರವಾಸಿಗರ ಪ್ರಾಣ ಹಾನಿಗೆ ಕಾರಣವಾಗಬಹುದು ಎಂದು ಗುತ್ತಿಗೆದಾರರು ಸಲಹೆ ನೀಡಿದ್ದರಂತೆ.
ಗುತ್ತಿಗೆದಾರರ ಮಾತಿನಿಂದ ಸಿಟ್ಟುಗೊಂಡ ಸುನಿಲ್ ಕುಮಾರ್ ಒಟ್ಟು ಯೋಜನೆಯ ಕಾಮಗಾರಿಯನ್ನು ತನ್ನ ಸುಪರ್ದಿಗೆ ಪಡೆದು ಬೇರೊಬ್ಬ ಆಪ್ತ ಗುತ್ತಿಗೆದಾರರಿಗೆ ನೀಡುತ್ತಾರೆ. ಮೂರ್ತಿಯ ಕೈ ಮತ್ತು ಕೊಡಲಿಯ ಭಾಗವನ್ನು ಫೈಬರ್ ನಿಂದ ನಿರ್ಮಿಸಿದ್ದಾರೆಂದು ವಕೀಲ ದಿನೇಶ್ ಹೆಗ್ಡೆ ಬರೆದುಕೊಂಡಿದ್ದಾರೆ. ಫೈಬರ್ ನಲ್ಲಿ ಮಾಡಲಾದ ಮೂರ್ತಿಯನ್ನು ಕಂಚಿನಿಂದ ಮಾಡಿದ್ದಾಗಿ ತೋರಿಸಿ ಜನರ ಧಾರ್ಮಿಕ ನಂಬಿಕೆಗೆ ಘಾಸಿಗೊಳಿಸಿದ್ದಾರೆ. ಅಲ್ಲದೆ, ಒಟ್ಟು 14 ಕೋಟಿ ವೆಚ್ಚದಲ್ಲಿ ಕಾಮಗಾರಿ ಆಗಿದೆಯೆಂದು ಸಚಿವ ಸುನಿಲ್ ಕುಮಾರ್ ಸುಳ್ಳು ಹೇಳಿದ್ದರು ಎಂದು ತಿಳಿಸಿದ್ದಾರೆ. ಕೆಲವರ ಪ್ರಕಾರ, ಇಡೀ ಮೂರ್ತಿಯಲ್ಲಿ ಸೊಂಟದ ವರೆಗೆ ಮಾತ್ರ ಕಂಚಿನದ್ದಂತೆ. ಮೇಲಿನದ್ದು ನಕಲಿಯಂತೆ.
ಪರಶುರಾಮ ಥೀಮ್ ಪಾರ್ಕನ್ನು 2023ರ ಜನವರಿ 27ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು. ಉದ್ಘಾಟನೆ ವೇಳೆ ಪರಶುರಾಮನ ಮೂರ್ತಿ 33 ಅಡಿ ಎತ್ತರ ಮತ್ತು 15 ಟನ್ ಭಾರ ಹೊಂದಿದೆ. ಸಂಪೂರ್ಣ ಕಂಚಿನಿಂದಲೇ ನಿರ್ಮಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ಏನಾದ್ರೂ ಅನಾಹುತ ಆಗಬಹುದು ಅನ್ನುವ ಆತಂಕದಿಂದಲೋ ಏನೋ ಉಡುಪಿ ಜಿಲ್ಲಾಡಳಿತವೇ ಜೂನ್ 26ರಿಂದ ಸೆಪ್ಟಂಬರ್ ಅಂತ್ಯದ ವರೆಗೆ ಪ್ರವಾಸಿಗರ ಭೇಟಿಗೆ ನಿಷೇಧ ವಿಧಿಸಿತ್ತು. ಈಗ ಪರಶುರಾಮನ ವಿಗ್ರಹ ಅರ್ಧ ನಕಲಿ ಎನ್ನುವ ಮಾತು ಅಧಿಕೃತ ವ್ಯಕ್ತಿಗಳ ಬಾಯಿಂದಲೇ ಬಂದಿದ್ದು ಆರೋಪದ ಬೊಟ್ಟು ನೇರವಾಗಿ ಆಗಿನ ಪ್ರಭಾವಿ ಸಚಿವರಾಗಿದ್ದ ಸುನಿಲ್ ಕುಮಾರ್ ಮೇಲೆ ಅಂಟಿಕೊಂಡಿದೆ. ಎಷ್ಟು ಕೋಟಿ ಖರ್ಚಾಗಿದೆ, ಮೂರ್ತಿ ನಕಲಿಯೇ ಎನ್ನುವ ಬಗ್ಗೆ ತನಿಖೆಯಿಂದಷ್ಟೇ ಉತ್ತರ ಸಿಗಬೇಕಾಗಿದೆ.