ಸಮಗ್ರ ನ್ಯೂಸ್: ಇತ್ತೀಚಿಗೆ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ ಜರುಗಿತು.
2022-23ನೆಯ ಸಾಲಿನ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಆನಂದ ಹೆಚ್. ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆಯನ್ನು ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕಿ ಲತಾ ಬಿ.ಟಿ. ಮಂಡಿಸಿದರು. ಸಂಘದ ಕಾರ್ಯಕಾರಿ ಸಮಿತಿಗೆ ತೆರವಾದ ನಾಲ್ಕು ಸ್ಥಾನಗಳಿಗೆ ಹೊಸದಾಗಿ ಸತೀಶ್ ಕೂಜುಗೂಡು, ಶಿವರಾಮ ರೈ, ನೀಲಪ್ಪ ಗೌಡ ಮತ್ತು ಸಾಯಿ ಗೀತ ಕೂಜುಗೋಡು ಸರ್ವಾನುಮತದಿಂದ ಆಯ್ಕೆಯಾದರು.
ಮಹಾಸಭೆಯ ನಂತರ ನಡೆದ 2023-24 ನೆಯ ಸಾಲಿನ ಮೊದಲ ಕಾರ್ಯಕಾರಿ ಸಭೆಯಲ್ಲಿ ಸಂಘದ ಅಧ್ಯಕ್ಷ ಆನಂದ ಹೆಚ್.ಟಿ.ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ತೀರ್ಮಾನಿಸಲಾಯಿತು. ಪ್ರಸ್ತುತ ವರ್ಷ ಕಾಲೇಜಿಗೆ ನ್ಯಾಕ್ ಸಮಿತಿ ಆಗಮಿಸುವ ಹಿನ್ನೆಲೆಯಲ್ಲಿ ನಡೆಯಬೇಕಾದ ತುರ್ತು ಕಾರ್ಯಗಳ ಕುರಿತು ಚರ್ಚಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಆಯ್ಕೆ ಶ್ರೇಣಿ ಅರ್ಥಶಾಸ್ತ್ರ ಉಪನ್ಯಾಸಕಿ ರೇಖಾರಾಣಿ ಪೋಷಕರಿಗೆ ಸಮಯೋಚಿತ ಸಲಹೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ದಿನೇಶ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಕ್ಷಕ ಶಿಕ್ಷಕ ಸಂಘದ ಶಿಕ್ಷಕ ಪ್ರತಿನಿಧಿ ಮತ್ತು ರಕ್ಷಕ ಶಿಕ್ಷಕ ಸಂಘದ ಸಂಯೋಜಕ ಉದಯಕುಮಾರ್ ವಂದನಾರ್ಪಣೆಗೈದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ರಮ್ಯ ಮತ್ತು ಹಿಂದಿಭಾಷಾ ಉಪನ್ಯಾಸಕಿ ಭಕ್ತಿಶ್ರೀ ಕಾರ್ಯಕ್ರಮವನ್ನು ನಿರ್ವಹಿಸಿದರು.