ಸಮಗ್ರ ನ್ಯೂಸ್: ಬಿಜೆಪಿ ಟೆಕೆಟ್ ಹೆಸರಿನಲ್ಲಿ ಉದ್ಯಮಿಗೆ ವಂಚಿಸಿದ ಸಂಪಾದಿಸಿದ ಹಣದಲ್ಲಿ 26 ಲಕ್ಷ ರು. ಮೌಲ್ಯದ ಐಷಾರಾಮಿ ಇನ್ನೋವಾ ಕಾರನ್ನು ಹಾಲವೀರಪ್ಪಜ್ಜ ಸ್ವಾಮೀಜಿ ಅಲಿಯಾಸ್ ಹಾಲಶ್ರೀ ಖರೀದಿಸಿದ್ದರು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಉದ್ಯಮಿ ಗೋವಿಂದ ಪೂಜಾರಿ ಅವರಿಂದ 1.5 ಕೋಟಿ ರು ಹಣವನ್ನು ಹಾಲಶ್ರೀ ಪಡೆದಿದ್ದರು. ಈ ಹಣದಲ್ಲಿ 26 ಲಕ್ಷ ರು. ವ್ಯಯಿಸಿ ಹೊಸ ಇನ್ನೋವಾ ಕಾರನ್ನು ಸ್ವಾಮೀಜಿ ಕೊಂಡಿದ್ದರು. ಆ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉಡುಪಿಯಲ್ಲಿ ಈ ಪ್ರಕರಣದ ಮೊದಲ ಆರೋಪಿ ಚೈತ್ರಾ ಕುಂದಾಪುರ ಸೇರಿದ 81 ಲಕ್ಷ ರು ನಗದು, 23 ಲಕ್ಷ ರು ಮೌಲ್ಯದ ಚಿನ್ನಾಭರಣ, ಸಹಕಾರಿ ಬ್ಯಾಂಕ್‌ನಲ್ಲಿದ್ದ 1.08 ಕೋಟಿ ರು ನಿಶ್ಚಿತ ಠೇವಣಿ (ಎಫ್‌ಡಿ), 12 ಲಕ್ಷ ರು ಬೆಲೆಬಾಳುವ ಕಿಯಾ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇನ್ನುಳಿದಂತೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು, ಧನರಾಜ್ ಹಾಗೂ ರಮೇಶ್ ಬಳಿ 26 ಲಕ್ಷ ರು ಹಣ ಸಿಕ್ಕಿದೆ. ಅದೇ ರೀತಿ ಹಾಲಶ್ರೀ ಬಳಿ 56 ಲಕ್ಷ ರು ನಗದು ಹಾಗೂ 25 ಲಕ್ಷ ರು ಮೌಲ್ಯದ ಕಾರು ಪತ್ತೆಯಾಗಿದೆ. ಅಲ್ಲದೆ ಹಾಲಶ್ರೀ ಆಪ್ತರ ಬಳಿ 44 ಲಕ್ಷ ರು ಇದ್ದು, ಆ ಹಣವನ್ನು ಶನಿವಾರ ಜಪ್ತಿ ಮಾಡುತ್ತೇವೆ. ಹೀಗಾಗಿ ಒಟ್ಟಾರೆ 4.11 ಕೋಟಿ ಹಣ ಜಪ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.