Ad Widget .

ಮೂರು ಉಪಮುಖ್ಯಮಂತ್ರಿಗಳೆಂಬ ಗದ್ದಲ/ಸಾಂವಿಧಾನಿಕ ಮಾನ್ಯತೆಯಿಲ್ಲದ ಹುದ್ದೆಗಾಗಿ ಯಾಕೀ ಗೊಂದಲ

ಸಮಗ್ರ ನ್ಯೂಸ್: ಮೂರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಬೇಕು ಎಂಬ ವಿಚಾರವೊಂದು ಕರ್ನಾಟಕ ರಾಜಕಾರಣದಲ್ಲಿ ಹೊಸ ಗಾಳಿಯೊಂದನ್ನು ಸೃಷ್ಟಿಸಿದೆ. ಈ ಗಾಳಿ ಬಿರುಗಾಳಿಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಸಿದ್ದರಾಮಯ್ಯರ ಪರೋಕ್ಷ ಬೆಂಬಲ, ಹಲವಾರು ಸಚಿವರ ಅಪೇಕ್ಷೆ ರಾಜ್ಯ ಸರ್ಕಾರದಲ್ಲಿ ಹೊಸ ಗೊಂದಲವೊಂದನ್ನು ಸೃಷ್ಟಿಸಿದೆ. ಆದರೆ ಸಾಂವಿಧಾನಿಕ ಮಾನ್ಯತೆಯಿಲ್ಲದ ಈ ಹುದ್ದೆಗಾಗಿ ಯಾಕೀ ಪೈಪೋಟಿ ಎಂಬುದೇ ಅಚ್ಚರಿಯ ವಿಚಾರ. ಈ ಕುರಿತು ಸಣ್ಣದೊಂದು ಅವಲೋಕನ

Ad Widget . Ad Widget .

ಉಪಮುಖ್ಯಮಂತ್ರಿ ಅಥವಾ ಉಪ ಪ್ರಧಾನಿ ಹುದ್ದೆಯ ಕುರಿತು ಸಂವಿಧಾನದಲ್ಲಿ ಯಾವುದೇ ಉಲ್ಲೇಖ ಇಲ್ಲ. ಸಂವಿಧಾನದ 163ನೇ ವಿಧಿಯ ಪ್ರಕಾರ ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಸಂಪುಟ ರಚನೆಯಾಗಿ, ರಾಜ್ಯಪಾಲರಿಗೆ ತಮ್ಮ ಕರ್ತವ್ಯವನ್ನು ಪಾಲಿಸಲು ನೆರವು ನೀಡುತ್ತದೆ. 164ನೇ ವಿಧಿಯ ಪ್ರಕಾರ ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ. ಹಾಗೆಯೇ ಮುಖ್ಯಮಂತ್ರಿಯ ಸಲಹೆ ಮೇರೆಗೆ ಇತರ ಸಚಿವರನ್ನು ನೇಮಕ ಮಾಡುತ್ತಾರೆ. ಉಪಮುಖ್ಯಮಂತ್ರಿ ಅಥವಾ ಇಲಾಖೆಯ ಸಚಿವ ಎಂಬ ನೇಮಕಾತಿ ಇರುವುದಿಲ್ಲ.

Ad Widget . Ad Widget .

ಹಾಗೆಯೇ ಪ್ರಮಾಣ ವಚನ ಬೋಧಿಸುವ ಸಂದರ್ಭದಲ್ಲಿ ಕೂಡ ಸಚಿವರು ಎಂದು ಸ್ವೀಕರಿಸಬೇಕು ಹೊರತು, ಇಂತಿಂಥ ಇಲಾಖೆಯ ಸಚಿವ ಎಂದು ಸ್ವೀಕರಿಸುವ ಹಾಗೇ ಇಲ್ಲ. ಉದಾಹರಣೆಗೆ 1989ರಲ್ಲಿ ವಿ. ಪಿ. ಸಿಂಗ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ, ದೇವಿಲಾಲ್ ಅವರು ಉಪಪ್ರಧಾನಿ ಆಗಿದ್ದರು. ಪ್ರಮಾಣ ವಚನ ಸಂದರ್ಭದಲ್ಲಿ ಉಪಪ್ರಧಾನಿಯಾಗಿ ಎಂದು ಓದಿದಾಗ, ಅಂದಿನ ರಾಷ್ಟ್ರಪತಿಗಳು ಅದನ್ನು ತಿದ್ದಿ, ಸಚಿವರು ಎಂದು ಪ್ರಮಾಣ ವಚನ ಬೋಧಿಸಿದ್ದರು. ನಂತರವೂ ದೇವಿಲಾಲ್ ಉಪಪ್ರಧಾನಿ ಎಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಹೀಗೆ ಯಾವುದೇ ಸಾಂವಿಧಾನಿಕ ಮಾನ್ಯತೆಗಳು ಉಪ ಪ್ರಧಾನಿ ಮತ್ತು ಉಪಮುಖ್ಯಮಂತ್ರಿ ಹುದ್ದೆಗೆ ಇರುವುದಿಲ್ಲ.

ಮುಖ್ಯಮಂತ್ರಿಯ ಅಸಮರ್ಥತೆ, ರಾಜಕೀಯ ಕಾರಣಕ್ಕೆ ಮುಖ್ಯಮಂತ್ರಿಯನ್ನು ನಿಯಂತ್ರಿಸಲು, ಸಮ್ಮಿಶ್ರ ಸರಕಾರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು, ಆಯಾ ಜಾತಿ, ಪ್ರಾಂತ್ರ್ಯದ ಜನರನ್ನು ಸಂತುಷ್ಠಗೊಳಿಸಲು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಲಾಗುತ್ತದೆ. ಯಾವುದೇ ವಿಶೇಷ ಅಧಿಕಾರ ಇಲ್ಲದಿದ್ದರೂ, ಮುಖ್ಯಮಂತ್ರಿಗೆ ಸಿಗುವ ಕೆಲವೊಂದು ಸೌಲಭ್ಯಗಳನ್ನು ಇವರು ಬಳಸಿಕೊಳ್ಳುತ್ತಾರೆ. ಉದಾಹರಣೆಗೆ 2006ರಲ್ಲಿ ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದಾಗ ಮುಖ್ಯಮಂತ್ರಿಗಳಿಗೆ ಸಿಗುವ ಝೀರೋ ಟ್ರಾಫಿಕ್ ಸೌಲಭ್ಯವನ್ನು ಬಳಸಿಕೊಂಡಿದ್ದರು. 2018ರಲ್ಲಿ ಡಾ. ಜಿ. ಪರಮೇಶ್ವರ್ ಅವರಿಗೂ ನೀಡಲಾಗಿತ್ತು.

ರಾಜ್ಯದಲ್ಲಿ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾದದ್ದು 1992ರಲ್ಲಿ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದಾಗ ಎಸ್. ಎಂ. ಕೃಷ್ಣ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿತ್ತು. ಕಳೆದ ಬಾರಿ ಯುಡಿಯೂರಪ್ಪ ಸರ್ಕಾರದಲ್ಲಿ ಅತ್ಯಧಿಕ ಮೂರು ಉಪಮುಖ್ಯಮಂತ್ರಿಗಳನ್ನು ಕರ್ನಾಟಕ ರಾಜ್ಯ ಕಂಡಿತ್ತು. ಹಾಗಾಗಿ ಈ ಬಾರಿಯು ಜಾತಿಯ ಆಧಾರವಾಗಿಟ್ಟುಕೊಂಡು ಮೂರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಬೇಕು ಎಂಬ ಒತ್ತಡ ಕೇಳಿಬರುತ್ತಿದೆ. ಇದು ಡಿ. ಕೆ. ಶಿವಕುಮಾರ್ ಅವರನ್ನು ನಿಯಂತ್ರಿಸಲು ಎಂಬ ಮಾತು ಕೂಡ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಮುಂದೇನಾಗುತ್ತದೋ ಕಾದು ನೋಡಬೇಕಷ್ಟೇ.

Leave a Comment

Your email address will not be published. Required fields are marked *