ಸಮಗ್ರ ನ್ಯೂಸ್: ಕಾವೇರಿ ನದಿ ನೀರು ಹಂಚಿಕೆ ವಿವಾದ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದ್ದು, ಈ ಕುರಿತು ಇಂದು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರು ಮತ್ತು ಸರ್ವಪಕ್ಷ ಸಂಸದರ ಸಭೆ ನಡೆಯುತ್ತಿದೆ.
ಸೆಪ್ಟೆಂಬರ್ 15ರಂದು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿತ್ತು. ಆದರೆ ತಮಿಳುನಾಡು ಸರ್ಕಾರ ತಮ್ಮ ಭತ್ತದ ಬೆಳೆಗೆ ನೀರು ಸಾಕಾಗುತ್ತಿಲ್ಲ ಎಂದು ಮನವಿ ಮಾಡಿದ ಕಾರಣದಿಂದಾಗಿ, ಮತ್ತೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಮಿತಿ ಆದೇಶ ನೀಡಿತ್ತು.
ಆದರೆ ಕರ್ನಾಟಕದಲ್ಲಿ ಇದಕ್ಕೆ ವಿರುದ್ಧವಾಗಿ ಪ್ರತಿಭಟನೆಗಳು ನಡೆದಿದ್ದವು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಮೇಲಿಂದ ಮೇಲೆ ಸಭೆಗಳನ್ನು ನಡೆಸುತ್ತಿದೆ.
ಇದರ ನಡುವೆ ರಾಜ್ಯ ಸಭೆಯಲ್ಲಿ ಪ್ರಶ್ನೆ ಮಾಡಿದ್ದ ಹೆಚ್ ಡಿ ದೇವೇಗೌಡರು, ಕರ್ನಾಟಕದ ಸಂಸದರ ವಿರುದ್ಧ ನೇರ ವಾಗ್ದಾಳಿ ಮಾಡಿದ್ದರು.
ಇದೆಲ್ಲದರ ಪರಿಣಾಮವಾಗಿ ಇಂದು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ನಿರ್ಣಯವೊಂದನ್ನು ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.