ಸಮಗ್ರ ನ್ಯೂಸ್: ಚೈತ್ರಾ ಕುಂದಾಪುರ ವಂಚನೆ ಆರೋಪ ಪ್ರಕರಣದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ತಾನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಜೊತೆಗೆ, ಇದೊಂದು ಷಡ್ಯಂತ್ರದ ಭಾಗವಾಗಿ ಕಂಡು ಬರುತ್ತಿದ್ದು, ಆದರಿಂದ ಸಿಸಿಬಿ ಅಧಿಕಾರಿಗಳು ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಏನಾಗಿದೆ ಎಂದು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ “ಮಾಜಿ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಅವರು ಜುಲೈ ತಿಂಗಳಲ್ಲಿ ಫೋನ್ ಮಾಡಿ ಈ ಪ್ರಕರಣದಲ್ಲಿ ನಿಮ್ಮ ಹೆಸರು ಇದೆ. ಗೋವಿಂದ ಬಾಬು ಪೂಜಾರಿ ಅವರು ನಿಮಗೆ ಒಂದೂವರೆ ಕೋಟಿ ನೀಡಿದ್ದಾರೆ ಎಂದು ಕೇಳಿಬರುತ್ತಿದೆ. ನೀವು ಆ ಹಣವನ್ನು ವಾಪಸ್ ನೀಡಿ ಎಂದು ಹೇಳಿದ್ದರು”.
ಆಗ ನಾನು ಉತ್ತರಿಸಿ, “ಈ ಪ್ರಕರಣದಲ್ಲಿ ನಾನಿಲ್ಲ ಎಂದು ಆಕ್ರೋಶವಾಗಿ ಹೇಳಿದ್ದು ಆ ಬಳಿಕ ಫೋನ್ ಕಟ್ ಮಾಡಿದ್ದರು. ಆನಂತರ ಈ ವಿಚಾರದಲ್ಲಿ ನಾನು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಮತ್ತು ಬಜರಂಗದಳದ ಮುಖಂಡರಿಗೆ ಫೋನ್ ಮಾಡಿ ಈ ಬಗ್ಗೆ ವಿಚಾರಿಸಿದ್ದೇವೆ. ಆಗ ಅವರು ಈ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಕೋಪ ಮಾಡಿಕೊಳ್ಳುವುದು ಬೇಡ ಎಂದು ಸಮಾಧಾನಪಡಿಸಿದ್ದರು. ಇದಾದ ಬಳಿಕ ಮತ್ತೆ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿ ನಾನು ತಪ್ಪಿ ನಿಮ್ಮ ಹೆಸರು ಹೇಳಿದ್ದೇನೆ. ಅದು ಅಭಿನವ ಸ್ವಾಮೀಜಿ ಎಂದು ಗೊತ್ತಾಗಿದೆ ಎಂದು ಮಾತನಾಡಿದರು”.
“ಆ ಬಳಿಕ ನಾನು ಅಭಿನವ ಸ್ವಾಮೀಜಿ ಅವರಿಗೆ ಕೂಡ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದೆ. ಬಳಿಕ ಅಭಿನವ ಸ್ವಾಮೀಜಿ ಅವರ ಆಪ್ತರಾಗಿರುವ ಸೂಲಿಬೆಲೆ ಚಕ್ರವರ್ತಿ ಅವರ ಜೊತೆಯೂ ಮಾತನಾಡಿದೆ. ಆಗ ಸೂಲಿಬೆಲೆ ಚಕ್ರವರ್ತಿ ಅವರು ಈ ಪ್ರಕರಣದಲ್ಲಿ ನನ್ನ ಹೆಸರು ಕೂಡ ಇದೆಯಾ ಎಂದು ತಮಾಷೆಯಾಗಿ ಕೇಳಿದ್ದರು. ಈ ವಿಚಾರದಲ್ಲಿ ತಾನು ಮಾಜಿ ಸಚಿವ ಸಿ ಟಿ ರವಿ ಅವರ ಜೊತೆಗೆ ಮಾತನಾಡಿರುವುದಾಗಿಯೂ ಹೇಳಿದ್ದರು. ಆ ಬಳಿಕ ನಾನು ಚೈತ್ರಾ ಕುಂದಾಪುರ ಅವರಿಗೆ ಫೋನ್ ಮಾಡಿ ವಿಚಾರಿಸಿದ್ದೆ. ಚೈತ್ರಾ ಕುಂದಾಪುರ ಬರೆದ ಪ್ರೇಮ ಪಾಷಾ ಎಂಬ ಕೃತಿಗೆ ಬೆನ್ನುಡಿಯನ್ನು ನಾನು ಬರೆದಿದ್ದು, ಅವರ ಪರಿಚಯವಿತ್ತು”.
“ಅವರಲ್ಲಿ ವಿಚಾರಿಸಿದಾಗ ಅವರು ಈ ಪ್ರಕರಣದಲ್ಲಿ ತಾನು ಇಲ್ಲ ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಬಂತು. ಇದೀಗ ನನ್ನ ಹೆಸರು ಕೇಳಿ ಬರುತ್ತಿದೆ. ನಿನ್ನೆ ಸಚಿವರೊಬ್ಬರು ಹೇಳಿಕೆಯನ್ನು ನೀಡಿ ಈ ಪ್ರಕರಣದಲ್ಲಿ ಬಿಜೆಪಿಯ ದೊಡ್ಡ ಮುಖಂಡರೊಬ್ಬರ ಹೆಸರು ಇದೆ ಎಂದು ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಸಿಸಿಬಿ ಅಧಿಕಾರಿಗಳಿಗೆ ಮನವಿ ಮಾಡುವುದೇನೆಂದರೆ, ಈ ಪ್ರಕರಣದ ತನಿಖೆಯನ್ನು ಒಂದು ವಾರದಿಂದ ಮಾಡುತ್ತಿದ್ದೀರಿ. ಮೇಲ್ನೋಟಕ್ಕೆ ಕಂಡುಬಂದಿರುವ ಅಂಶಗಳ ಬಗ್ಗೆ ಪ್ರಕಟಣೆಯನ್ನು ನೀಡಿ ಎಂದು ಆಗ್ರಹಿಸುತ್ತೇನೆ” ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ.