ಸಮಗ್ರ ನ್ಯೂಸ್: ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ 2023 ರಲ್ಲಿ ಭಾರತದ ಶೂಟರ್ ಇಳವೆನ್ನಿಲಾ ವಾಳರಿವನ್, ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಒಲಿಂಪಿಯನ್ ಇಳವೆನ್ನಿಲಾ ವಾಳರಿವನ್ (Elavenil Valarivan) ಫೈನಲ್ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ 252.2 ಪಾಯಿಂಟ್ಸ್‌ಗಳೊಂದಿಗೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಫ್ರಾನ್ಸ್‌ನ ಓಸಿಯಾನ್ ಮುಲ್ಲರ್, 251.9 ಪಾಯಿಂಟ್ಸ್‌ಗಳೊಂದಿಗೆ ಬೆಳ್ಳಿ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜಿಯಾಲೆ ಜಾಂಗ್, 229.0 ಪಾಯಿಂಟ್ಸ್‌ನೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ.
ವಾಳರಿವನ್ ಅವರ ಎರಡನೇ ವೈಯಕ್ತಿಕ ISSF ವಿಶ್ವಕಪ್ ಪದಕ ಇದಾಗಿದೆ. 24 ವರ್ಷದ ಶೂಟರ್ 2019 ರಲ್ಲಿ ರಿಯೋ ವಿಶ್ವಕಪ್ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನವನ್ನು ಗೆದ್ದಿದ್ದರು.
ಇಳವೆನ್ನಿಲಾ 630.5 ಅಂಕಗಳೊಂದಿಗೆ 8ನೇಯವರಾಗಿ ಫೈನಲ್ ಸುತ್ತು ಪ್ರವೇಶಿಸಿದರು. ಪ್ರಶಸ್ತಿ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ ಪ್ರತಿ ಸಲ 10.01 ಕ್ಕೂ ಹೆಚ್ಚು ಪಾಯಿಂಟ್ಸ್ ಗಿಟ್ಟಿಸುವ ಮೂಲಕ ಉತ್ತಮ ಸಾಧನೆ ಮಾಡಿದರು.