ಸಮಗ್ರ ನ್ಯೂಸ್:ನಿಫಾ ವೈರಸ್, ಆರ್.ಯನ್.ಎ(RNA) ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇಧಕ್ಕೆ ಸೇರಿದ ವೈರಾಣು ಆಗಿರುತ್ತದೆ. 1999ರಲ್ಲಿ ಮಲೇಷಿಯಾದ ಒಂದು ಸಣ್ಣ ಹಳ್ಳಿಯಾದ ಸಂಗೈ ನಿಫಾ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ “ನಿಫಾ ವೈರಸ್” ಎಂದು ಕರೆಯಲ್ಪಡುತ್ತದೆ. ಈ ಹಳ್ಳಿಯ ಹಂದಿ ಸಾಕುವ ರೈತರಲ್ಲಿ ಮೊದಲು ಈ ಜ್ವರ ಕಾಣಿಸಿಕೊಂಡು ಮೆದುಳಿನ ಊರಿಯೂತ ಮತ್ತು ಉಸಿರಾಟದ ತೊಂದರೆ ಉಂಟುಮಾಡಿ, ನೂರಾರು ಮಂದಿ ಅಸುನೀಗಿದ್ದರು. 300 ಮಂದಿಗೆ ರೋಗ ತಗುಲಿ 100 ಮಂದಿ ಅಸುನೀಗಿದ್ದರು.

ರೋಗ ಪೀಡಿತ ಲಕ್ಷಾಂತರ ಹಂದಿಗಳನ್ನು ನಿರ್ಮೂಲನ ಮಾಡಿ ರೋಗವನ್ನು ಹತೋಟಿಗೆ ತರಲಾಗಿತ್ತು. 2001ರಲ್ಲಿ ಭಾರತ ದೇಶದ ಸಿಲಿಗುರಿಯಲ್ಲಿ 66 ಮಂದಿಗೆ ಈ ರೋಗ ತಗುಲಿತ್ತು ಮತ್ತು 45 ಮಂದಿ ಸಾವನ್ನಪ್ಪಿದರು. ಇದೇ ವರ್ಷ ಬಾಂಗ್ಲಾ ದೇಶದಲ್ಲಿಯ ಈ ರೋಗ ಉಲ್ಘಣಿಸಿ 56ರಲ್ಲಿ 50 ಮಂದಿ ಸಾವನ್ನಪ್ಪಿದರು. ಹೀಗೆ ಮಲೇಷಿಯಾ, ಬಾಂಗ್ಲಾ ದೇಶ, ಸಿಂಗಾಪುರ ಮತ್ತು ಭಾರತದಲ್ಲಿ ಕಳೆದ 20 ವರ್ಷಗಳಿಂದಲೂ ಈ ವೈರಾಣು ತೊಂದರೆ ನೀಡುತ್ತಲೇ ಇದೆ. ಇದೀಗ ಕೇರಳ ರಾಜ್ಯದ ಕೊಯಿಕ್ಕೋಡುನಲ್ಲಿ ತನ್ನ ರುದ್ರನರ್ತನ ಆರಂಭಿಸಿ, 2 ಮಂದಿಯನ್ನು ಆ ಪೋಷನ ತೆಗೆದುಕೊಂಡಿದೆ. ಸಾಕಷ್ಟು ಮುಂಜಾಗೂರೂಕತೆ ತೆಗೆದುಕೊಳ್ಳದಿದ್ದಲ್ಲಿ ಬಹುಬೇಗ ಎಲ್ಲೆಡೆ ಪಸರಿಸುವ ಸಾಧ್ಯತೆ ಇರುವುದರಿಂದ ತಕ್ಷಣವೇ ಜನರು ಮತ್ತು ಸರಕಾರ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ.

ರೋಗದ ಲಕ್ಷಣಗಳು:
ಎಲ್ಲಾ ವೈರಲ್ ಜ್ವರಗಳಲ್ಲಿ ಇರುವಂತೆ ಈ ಜ್ವರದಲ್ಲಿಯೂ ತ್ರೀವ್ರತರವಾದ ಜ್ವರ, ವಿಪರೀತ ತಲೆನೋವು, ವಾಂತಿ, ತಲೆಸುತ್ತು, ಮೈಕೈ ನೋವು ಇರುತ್ತದೆ. ರೋಗದ ತೀವ್ರತೆ ಜಾಸ್ತಿಯಾದಾಗ ಪ್ರಜ್ಞಾಹೀನತೆ ಮತ್ತು ಅಪಸ್ಮಾರದ ಅನುಭವ ಉಂಟಾಗುತ್ತದೆ. ಸುಮಾರು 6ರಿಂದ 12 ದಿವಸಗಳ ಕಾಲ ಈ ರೋಗದ ಲಕ್ಷಣ ಇರುತ್ತದೆ. ಕೊನೆಹಂತದಲ್ಲಿ ತಲೆ, ಮೆದುಳಿಗೂ ಹರಡುತ್ತದೆ ಮತ್ತು ಹೃದಯದ ಸ್ನಾಯುಗಳಿಗೆ ಹರಡಿ ಸ್ನಾಯುಗಳನ್ನು ಹಾಳುಗೆಡುವುತ್ತದೆ. ಮೆದುಳಿನ ಉರಿಯೂತ ಉಂಟಾಗುತ್ತದೆ. ವೈರಾಣು ದೇಹಕ್ಕೆ ಸೇರಿದ ಬಳಿಕ 5 ರಿಂದ 14 ದಿನಗಳ ಮೇಲೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಜ್ವರದ ತೀವ್ರತೆ ಜಾಸ್ತಿಯಾಗಿ 24 ರಿಂದ 48 ಗಂಟೆಗಳ ಒಳಗೆ ಕೋಮವಾಸ್ಥೆಗೆ ತಲುಪಬಹುದು. ಜ್ವರದ ತೀವ್ರತೆ ಜಾಸ್ತಿಯಾದಂತೆಲ್ಲ ವ್ಯಕ್ತಿ ತಾನು ಎಲ್ಲಿದ್ದೇನೆ ಏನು ಮಾಡುತ್ತಿದ್ದೇನೆ ಎನ್ನುದರ ಪರಿವೇ ಇಲ್ಲದಾಗಿ ವಾಸಸ್ಥಳ ಮತ್ತು ವ್ಯಕ್ತಿಯನ್ನು ಗುರುತು ಹಿಡಿಯದಿರಲೂ ಬಹುದು. ಮತ್ತು ಮತಿ ಭ್ರಮಣೆಗೊಳಗಾದಂತೆ ವರ್ತಿಸಲೂಬಹುದು. ಸಾಮಾನ್ಯ ಜ್ವರ ಎಂದು ಕಡೆಗಣಿಸಿದ್ದಲ್ಲಿ ಜೀವಕ್ಕೇ ಕುತ್ತು ತರಬಹುದು.
ಹೇಗೆ ಹರಡುತ್ತದೆ?
- ರೋಗ ಸೋಂಕಿತ ವ್ಯಕ್ತಿಯ ದೈಹಿಕ ಸಂಪರ್ಕ, ಸ್ಪರ್ಶದಿಂದ ವೈರಾಣು ಹರಡುತ್ತದೆ.
- ವೈರಾಣು ಹೊಂದಿರುವ ಬಾವಲಿಗಳು ಸ್ಪರ್ಶಿಸಿದ ಹಣ್ಣು ಹಂಪಲು ನಿಂದಲೂ ಹರಡುತ್ತದೆ.
- ವೈರಾಣು ಸೋಂಕಿತ ಹಂದಿಯಿಂದಲೂ ವೈರಾಣು ಹರಡುತ್ತದೆ.
ರೋಗ ಪೀಡಿತ ವ್ಯಕ್ತಿಯನ್ನು ವಿಶೇಷವಾದ ಕೋಣೆಗಳಲ್ಲಿರಿಸಿ ಬೇರೆ ಯಾರಿಗೂ ಸಂಪರ್ಕಕ್ಕೆ ಬರದಂತೆ ತಡೆಯುವುದು ಅತೀ ಅವಶ್ಯಕ. ರೋಗಿಯಿಂದ ವೈದ್ಯರಿಗೆ ಮತ್ತೂ ದಾದಿಯರಿಗೂ ಈ ರೋಗ ಹರಡುವ ಸಾದ್ಯತೆ ಇದೆ.
ಪತ್ತೆ ಹಚ್ಚುವುದು ಹೇಗೆ?
ರೋಗ ಪೀಡಿತ ವ್ಯಕ್ತಿಯ ಮೂಗಿನ ಮತ್ತು ಗಂಟಲಿನಲ್ಲಿ ಸ್ರವಿಸಿದ ದ್ರವ್ಯವನ್ನು PCR ಪರೀಕ್ಷೆ ಮುಖಾಂತರ ವೈರಾಣು ಪತ್ತೆಯನ್ನು ಮಾಡುತ್ತಾರೆ. ಮೆದುಳಿನ ದ್ರವ(CSF) ರಕ್ತ, ಮೂತ್ರದಿಂದಲೂ ವೈರಾಣುವನ್ನು ಪತ್ತೆ ಹಚ್ಚಬಹುದು. ಕೊನೆ ಹಂತದಲ್ಲೂ ELISA ಪರೀಕ್ಷೆ ಮತ್ತು IgG ಮತ್ತು IgM ಎಂಬ ಆಂಟಿಬಾಡಿಗಳನ್ನು (ನಿಫಾ ವೈರಾಣುಗಳ ವಿರುದ್ಧ ಉತ್ಪತ್ತಿಯಾದ) ಪತ್ತೆ ಹಚ್ಚಿ ರೋಗ ಪತ್ತೆ ಹಚ್ಚಲಾಗುತ್ತದೆ.
ಚಿಕಿತ್ಸೆ ಹೇಗೆ?
ಎಲ್ಲಾ ಜ್ವರಗಳಿಗೆ ಚಿಕಿತ್ಸೆ ನೀಡಿದಂತೆ, ಜ್ವರವನ್ನು ನಿಯಂತ್ರಿಸಲಾಗುತ್ತದೆ. ಹೆಚ್ಚು ದ್ರವಾಹಾರ ನೀಡಿ ರೋಗಿಗೆ ನಿರ್ಜಲೀಕರಣವಾಗದಂತೆ ತಡೆಯಲಾಗುತ್ತದೆ. ರೋಗ ಬಹುಬೇಗನೆ ಇತರರಿಗೆ ಹರಡುವುದರಿಂದ ರೋಗಿಯನ್ನು ಬೇರೆಯೇ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಯಾರ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತದೆ. ವೈದ್ಯರು ಮತ್ತು ದಾದಿಯರು ವಿಶೇಷ ಮತುವರ್ಜಿ ವಹಿಸಬೇಕು ಇಲ್ಲವಾದ್ದಲ್ಲಿ ವೈದ್ಯರಿಗೂ ರೋಗ ಹರಡಬಹುದು. ಕೈ ಚೀಲ, ಮುಖದ ಮಾಸ್ಕ್ ಮತ್ತು ತಲೆಗವಚ ಧರಿಸಿಯೇ ರೋಗಿಯನ್ನು ಸ್ಪರ್ಶಿಸತಕ್ಕದ್ದು “ರಿಬಾವಿರಿನ್” ಎಂಬ ಔಷದಿಯನ್ನು ವೈರಾಣುವಿನ ವಿರುದ್ದ ಉಪಯೋಗಿಸಲಾಗಿದ್ದು, ಹೆಚ್ಚಿನ ಅನೂಕೂಲವಾಗಿಲ್ಲ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಅದಷ್ಟು ಬೇಗ ರೋಗವನ್ನು ಪತ್ತೆ ಹಚ್ಚಿ, ರೋಗಿಯನ್ನು ತೀವ್ರ ನಿಗಾಘಟಕದಲ್ಲಿರಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಜೀವಕ್ಕೆ ಬರುವ ಕುತ್ತನ್ನು ತಪ್ಪಿಸಬಹುದು. ಆದಾಗ್ಯೂ 50ಶೇಕಡಾ ಮಂದಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ.
ತಡೆಗಟ್ಟುವುದು ಹೇಗೆ?
- ನಿಫಾ ವೈರಾಣು ಸೋಂಕಿತ ವ್ಯಕ್ತಿಯಿಂದ ದೂರವಿರಬೇಕು. ಸ್ಪರ್ಶ, ದೈಹಿಕ ಸಂಪರ್ಕ ಮಾಡಬಾರದು.
- ರೋಗ ಪೀಡಿತ ಪ್ರದೇಶಕ್ಕೆ ಪ್ರಯಾಣ ಮಾಡುವುದು ಒಳ್ಳೆಯದಲ್ಲ.
- ರೋಗ ಪೀಡಿತ ವ್ಯಕ್ತಿಯನ್ನು ಬೇರೆಯಾದ ಕೋಣೆಯಲ್ಲಿರಿಸಿ ಬೇರೆಯವರ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು.
- ಶಂಕಿತ ರೋಗಪೀಡಿತ ಹಂದಿಗಳ ನಿರ್ಮೂಲನ ಮಾಡಬೇಕು.
- ಜ್ವರ ಬಂದಾಗ ನಿರ್ಲಕ್ಷಿಸದೆ ಕೂಡಲೇ ವೈದ್ಯರ ಬಳಿ ಸೇರಿಸಿ ಚಿಕಿತ್ಸೆ ಪಡೆಯತಕ್ಕದ್ದು.
- ಹಣ್ಣನ್ನೂ ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ತಿನ್ನಬೇಕು.
- ಪಾಮ್ ಆಯಿಲ್ ಬಳಸುವವರು ಚೆನ್ನಾಗಿ ಕುದಿಸತಕ್ಕದ್ದು.
- ನಿಫಾ ವೈರಾಣುವನ್ನು ತುಂಬಾ ಸುಲಭವಾಗಿ ಬ್ಲೀಚಿಂಗ್ ಮತ್ತು ಸೋಡಿಯಂ ಹೈಪೋಕ್ಸೊರೈಟ್ ದ್ರಾವಣದಿಂದ ನಾಶಪಡಿಸಬಹುದು. ಈ ರೋಗ ತಡೆಗಟ್ಟಲು ಯಾವುದೇ ಲಸಿಕೆ ಇಲ್ಲದ ಕಾರಣ ರೋಗ ಬರದಂತೆ ಮುಂಜಾಗೂರಕತೆ ವಹಿಸುವುದರಲ್ಲಿಯೇ ಜಾಣತನ ಅಡಗಿದೆ.
ಕೊನೆ ಮಾತು
ವೈಜ್ಞಾನಿಕತೆ ತಂತ್ರಜ್ಞಾನಗಳು ಬೆಳೆದಂತೆಲ್ಲ ಹೊಸ ಹೊಸ ಅವಿಷ್ಕಾರಗಳು, ಯಂತ್ರಗಳು, ಔಷಧಿಗಳು ಹುಟ್ಟಿಕೊಳ್ಳುತ್ತಿದೆ. ಅದೇ ರೀತಿ ಬದಲಾದ ವಾತಾವರಣದಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಬದುಕಲು ವೈರಾಣುಗಳು ಮತ್ತು ಬ್ಯಾಕ್ಟಿರೀಯಗಳು ತನ್ನ ದೇಹ ರಚನೆಯಲ್ಲಿ ಮಾರ್ಪಾಡು ಮಾಡಿಕೊಂಡು ಔಷಧಿಗಳು ತಮ್ಮ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳುತ್ತದೆ. ಇದರ ಜೊತೆಗೆ ಅತಿಯಾದ ಔಷಧಿ ಸೇವನೆ, ಅನಗತ್ಯ ಔಷಧಿ ಸೇವನೆ ಮತ್ತು ಸ್ವಯಂ ಔಷಧಿ ಸೇವನೆಯಿಂದಾಗಿ ಔಷಧಿಗಳ ಹಿಡಿತ ರೋಗಾಣುಗಳ ಮೇಲೆ ತಪ್ಪಿಹೋಗುತ್ತದೆ. ಇದರ ಪರಿಣಾಮವೇ ದಿನಕ್ಕೊಂದರಂತೆ ಹೊಸ ಹೊಸ ರೋಗಾಣುಗಳು ಹುಟ್ಟಿಕೊಂಡು ಮನುಕುಲವನ್ನು ಇನ್ನಿಲ್ಲದಂತೆ ಕಾಡುತ್ತದೆ. ಎಬೋಲಾ, ಶ್ವಾಸಕೋಶ ವೈಫಲ್ಯಕ್ಕೆ ಕಾರಣವಾಗುವ ಮರ‍್ಸ್ ರೋಗ,ಕಾಲಿಂಗ್ ಜ್ವರ ಹೀಗೆ ಹೊಸದಾಗಿ ಹೊಸ ಹೊಸ ರೋಗಗಳು ಸೇರಿ ಕೊಳ್ಳುತ್ತಲೇ ಇದೆ. ಇದರ ಪಟ್ಟಿಗೆ ಸೇರ್ಪಡೆಯಾದ ಹೊಸತೊಂದು ವೈರಾಣು ಜ್ವರವೇ ನಿಫಾ ವೈರಾಣುವಿನಿಂದ ಹರಡುತ್ತಿರುವ ವೈರಾಣು ಜ್ವರ ಎಂದರೂ ತಪ್ಪಾಗಲಿಕ್ಕಿಲ್ಲ, ಜಗತ್ತು ಎಷ್ಟೇ ವಿಶಾಲವಾದರೂ ಸಾರಿಕೆ ಸಂಪರ್ಕ ಕ್ರಾಂತಿಯಿಂದಾಗಿ, ದಿನ ಬೆಳಗಾಗುವುದರಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಾರಿ ಹೋಗುವ ಕಾರಣದಿಂದಾಗಿ ರೋಗ ಕೂಡಾ ಅಷ್ಟೇ ವೇಗವಾಗಿ ಜಗತ್ತಿನಾದ್ಯಂತ ಹರಡುವ ಸಾದ್ಯತೆ ಇದೆ. ಎಷ್ಟೋ ದೂರದ ಅಮೇರಿಕಾದಲ್ಲಿ ಹುಟ್ಟಿದ ರೋಗ ದಿನಬೆಳಗಾಗುವುದರಲ್ಲಿ ಭಾರತಕ್ಕೂ ಬರಬಹುದು ಸಾಕಷ್ಟು ಮೂಂಜಾಗೂರುಕತೆ ವಹಿಸದಿದ್ದಲ್ಲಿ ಈ ವೈರಾಣು ಜ್ವರವು ಮನುಕುಲವನ್ನು ನುಂಗಿ ನೀರು ಕುಡಿಯಬಹುದು. ಹಾಗಾಗದಿರಲಿ ಎಂದು ತುಂಬು ಹೃದಯದಿಂದ ಹಾರೈಸೋಣ. ಲಸಿಕೆ ಇಲ್ಲದ ರೋಗ ಇದಾದ ಕಾರಣ ರೋಗ ತಡೆಗಟ್ಟುವುದಲ್ಲಿಯೇ ಜಾಣತನ ಅಡಗಿದೆ ಮತ್ತು ಅದರಲ್ಲಿಯೇ ಮನುಕುಲದ ಹಿತ ಅಡಗಿದೆ.

ಡಾ||ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು.
BDS MDS DNB, MBA MOSRCSEd
ಹೊಸಂಗಡಿ