ಸಮಗ್ರ ನ್ಯೂಸ್: ಲಿಬಿಯಾದಲ್ಲಿ ಕಳೆದ ಸೋಮವಾರ ಬೀಸಿದ ಭಾರಿ ಚಂಡಮಾರುತದ ಪರಿಣಾಮ ಎರಡು ಅಣೆಕಟ್ಟು ಒಡೆದು ಸಂಭವಿಸಿದ ಅನಾಹುತಕ್ಕೆ ಸಾವಿರಾರು ಜನ ಬಲಿಯಾಗಿದ್ದು 5,000ಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ. ಈ ಪೈಕಿ ಪ್ರವಾಹದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಡೆರ್ನಾ ನಗರವೊಂದರಲ್ಲೇ 5,000 ಶವಗಳು ಪತ್ತೆಯಾಗಿದ್ದು, ಇನ್ನೂ 10,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಹೀಗಾಗಿ ಮೃತರ ಸಂಖ್ಯೆ 15,000 ದಾಟುವ ಆತಂಕ ಉಂಟಾಗಿದೆ.

ಘಟನೆಯಲ್ಲಿ 10,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭಾರಿ ಪ್ರವಾಹದ ಪರಿಣಾಮ ರಕ್ಷಣಾ ಸಿಬ್ಬಂದಿಗೆ ಪೂರ್ಣ ಪ್ರಮಾಣದಲ್ಲಿ ಡೆರ್ನಾ ನಗರವನ್ನು ತಲುಪುವುದೇ ಸಾಧ್ಯವಾಗಿಲ್ಲ. ಉರುಳಿಬಿದ್ದ ಕಟ್ಟಡದೊಳಗೆ ಸಿಕ್ಕಿಬಿದ್ದವರು ರಕ್ಷಣೆಯಾಗುವ ನಿರೀಕ್ಷೆ ಕೂಡಾ ದೂರವಾಗಿದೆ. ನಗರದಲ್ಲಿ ಎಲ್ಲಿ ಹೋದರೂ ಶವಗಳೇ ಕಾಣುತ್ತಿವೆ. ರಸ್ತೆ, ಮನೆ, ಉರುಳಿಬಿದ್ದ ಕಟ್ಟಡ, ನದಿ ಪಾತ್ರ, ಸಮುದ್ರ ಎಲ್ಲಿ ನೋಡಿದರೂ ಪುರುಷರು, ಮಹಿಳೆಯರು ಮತ್ತು ಮಕ್ಕಳ ಸಾಲುಸಾಲು ಶವಗಳು ಕಾಣುತ್ತಿದ್ದು, ಪರಿಸ್ಥಿತಿಯನ್ನು ವರ್ಣಿಸಲು ಅಸಾಧ್ಯ ಎಂದು ರಕ್ಷಣಾ ಸಿಬ್ಬಂದಿ ನೋವು ತೋಡಿಕೊಂಡಿದ್ದಾರೆ.

ಡೆರ್ನಾ ನಗರ ಬಹುಪಾಲು ಕೊಚ್ಚಿ ಹೋಗಿದ್ದು, ಹೊರಗಿನ ಸಂಪರ್ಕವನ್ನು ಕಳೆದುಕೊಂಡಿದೆ. ರಕ್ಷಣಾ ಕಾರ್ಯಾಚರಣೆ ಬೃಹತ್ ಯಂತ್ರಗಳ ಅವಶ್ಯಕತೆ ಇದ್ದು, ರಸ್ತೆ ಸಂಪರ್ಕ ಕಡಿದು ಹೋದ ಕಾರಣ ಪರಿಹಾರ ಕಾರ್ಯ ನಿಧಾನಗೊಂಡಿದೆ.
ಪ್ರವಾಹದಿಂದಾಗಿ ಡೆರ್ನಾ ಪಟ್ಟಣವೊಂದರಲ್ಲೇ 30,000ಕ್ಕೂ ಹೆಚ್ಚು ಜನರು ನಿರ್ವಸಿತರಾಗಿದ್ದಾರೆ. ನೆರೆಯ ಹಲವು ನಗರಗಳಲ್ಲಿ ಇದೇ ರೀತಿಯಲ್ಲಿ ಸಾಕಷ್ಟು ಪ್ರಮಾಣದ ಜನರು ನಿರ್ವಸಿತರಾಗಿದ್ದಾರೆ ಎಂದು ಅಧಿಕಾರಗಳು ಹೇಳಿದ್ದಾರೆ. ಲಿಬಿಯಾದ ನೆರೆಯ ದೇಶಗಳಾದ ಈಜಿಪ್ಟ್ , ಟರ್ಕಿ, ಅಲ್ಜೀರಿಯಾ, ಟ್ಯುನಿಶಿಯಾ ಮತ್ತು ಯುಎಇ ದೇಶಗಳು ರಕ್ಷಣೆಗಾಗಿ ಪಡೆಗಳನ್ನು ರವಾನಿಸಿವೆ.

ಅಮೆರಿಕ ಸಹ ತನ್ನ ವಿಪತ್ತು ನಿರ್ವಹಣಾ ಪಡೆಯನ್ನು ರವಾನಿಸಿದ್ದು, ಪರಿಹಾರ ಸಾಮಗ್ರಿಗಳನ್ನು ಒದಗಿಸುವ ಭರವಸೆ ನೀಡಿದೆ.
ಸೋಮವಾರ ರಾತ್ರಿ ಅಣೆಕಟ್ಟು ಒಡೆದು ನೀರು ನಗರಕ್ಕೆ ನುಗ್ಗಿ 20 ಅಡಿಗೂ ಹೆಚ್ಚು ಎತ್ತರದಲ್ಲಿ ನೀರು ಹರಿದ ಪರಿಣಾಮ ತನ್ನ ಹಾದಿಯಲ್ಲಿ ಸಿಕ್ಕ ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು ಎಂದು ಬದುಕುಳಿದ ನಿವಾಸಿಗಳು ಭೀಕರ ಘಟನೆಯನ್ನು ವರ್ಣಿಸಿದ್ದಾರೆ.