ಸಮಗ್ರ ವಾರ್ತೆ: ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕು ಪತ್ತೆಯಾಗಿದೆ. ಇಬ್ಬರು ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆಯೇ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಹ ಮುನ್ನೆಚ್ಚರಿಕೆ ಘೋಷಣೆ ಮಾಡಲಾಗಿದೆ. ಕೇರಳ ರಾಜ್ಯದ ಆರೋಗ್ಯ ಇಲಾಖೆ ಮೂರು ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಿದೆ.
ಕಣ್ಣೂರು, ವಯನಾಡು ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಇತ್ತ ಕರ್ನಾಟಕ, ಕೇರಳ ಗಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದ ಆರೋಗ್ಯ ಸಚಿವ ವೀಣಾ ಜಾರ್ಜ್ ಮಾತನಾಡಿ, “ಆರೋಗ್ಯ ಇಲಾಖೆ ಐಸಿಎಂಆರ್ ಸಂಪರ್ಕಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ನಿಫಾ ವೈರಸ್ ಸೋಂಕಿತರಿಗೆ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು ಲಭ್ಯವಿದೆ ಎಂದು ಮಾಹಿತಿ ನೀಡಲಾಗಿದೆ” ಎಂದರು.
ಎರಡು ಪ್ರಕರಣಗಳಲ್ಲಿ ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹ ಮಾಡಿ ಪುಣೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಕೇರಳದ ಆರೋಗ್ಯ ಇಲಾಖೆ ಸೋಂಕು ಪತ್ತೆಯಾದವರ ಜೊತೆ ಸಂಪರ್ಕದಲ್ಲಿ ಇದ್ದವರ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದು, ಅವರ ಆರೋಗ್ಯದ ಮೇಲೆ ಗಮನವಹಿಸಲು ಸೂಚಿಸಿದೆ.
ಕೊಯಿಕ್ಕೋಡ್ ಜಿಲ್ಲೆಗೆ ಕಂದಾಯ ಸಚಿವರು, ಆರೋಗ್ಯ ಸಚಿವರು ಮಂಗಳವಾರ ಭೇಟಿ ನೀಡಿದ್ದರು. ಜಿಲ್ಲಾಡಳಿತದ ಜೊತೆ ಸಚಿವೆ ವೀಣಾ ಜಾರ್ಜ್ ತಡರಾತ್ರಿ ಸಭೆಯನ್ನು ನಡೆಸಿದ್ದು, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.