ಸಮಗ್ರ ನ್ಯೂಸ್: ಕೆಲವೊಂದು ದೊಡ್ಡ ಹೋಟೆಲ್ಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ ಮೆನ್ಯೂ ನೋಡಿದರೆ ತಲೆ ಸುತ್ತಿ ಬರುತ್ತದೆ. ಸಾಮಾನ್ಯ ಜನರು ಆ ಮೆನ್ಯೂನಲ್ಲಿರುವ ಕೆಲವೊಂದು ತಿನಿಸುಗಳ ಹೆಸರುಗಳನ್ನು ಹಿಂದೆಲ್ಲೂ ಕೇಳಿಯೇ ಇರುವುದಿಲ್ಲ, ಓದಲೂ ಬರುವುದಿಲ್ಲ. ಕೆಲವೊಂದು ಖಾದ್ಯಗಳು ನಮ್ಮ ಮನೆಯಲ್ಲಿ ಮಾಡುವ ಪದಾರ್ಥಗಳೇ ಆಗಿದ್ದರೂ ಮೆನ್ಯೂನಲ್ಲಿ ಚಿತ್ರವಿಚಿತ್ರ ಹೆಸರಟ್ಟು ಅದನ್ನ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ.
ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿಯೇ ಅರ್ಧ ಸಮಯ ಕಳೆದು ಹೋಗಿರುತ್ತದೆ. ಕೊನೆಯಲ್ಲಿ ನಮಗೆ ತಿಳಿದ ತಿನಿಸಿನ ಹೆಸರು ಹುಡುಕಿ ಆಯ್ಕೆ ಮಾಡುವುದುಂಟು.
ಆದರೆ ಇಲ್ಲೀಗ ನಾವು ಹೇಳಲು ಹೊರಟಿರುವುದು ಮದುವೆಯ ಭಕ್ಷ್ಯ ಭೋಜನದ ಮೆನ್ಯೂ ಬಗ್ಗೆ. ಮೊದಲೆಲ್ಲ ಮದುವೆ ಆಮಂತ್ರಣದಲ್ಲಿ ಹುಡುಗ-ಹುಡುಗಿ, ಅವರ ಪೋಷಕರ ಹೆಸರು ವಿಳಾಸ, ದಿನಾಂಕ, ಮುಹೂರ್ತ, ಸ್ಥಳ, ವಿಳಾಸ ಇರುತ್ತಿತ್ತು. ಮದುಮಕ್ಕಳ ಫೋಟೋ ಕೂಡ ಇರುವುದು ಕಾಮನ್ ಬಿಡಿ. ಆದರೆ ಈಗ ಮದುವೆಯಲ್ಲಿ ಏನೇನು ಅಡುಗೆ ಮಾಡಿಸಲಾಗುತ್ತದೆ ಎಂಬ ಲಿಸ್ಟ್ ಕೂಡ ಇರುತ್ತದೆ.
ಬೆಂಗಳೂರಿನಲ್ಲಿ ಸೆ. 9, ಶನಿವಾರ ನಡೆದ ವಿವಾಹ ಸಮಾರಂಭಕ್ಕೆ ಕೂಡ ಮೆನ್ಯೂ ಕಾರ್ಡ್ ಮಾಡಿಸಲಾಗಿತ್ತು. ಪ್ರೀತಿಕಾ ಮತ್ತು ಆಶಿಶ್ ಎಂಬವರ ಮದುವೆ ಇದಾಗಿತ್ತು.
ಈ ಮೆನ್ಯೂ ಕಾರ್ಡ್ ನೋಡಿದವರಿಗೆ ಬಾಯಲ್ಲಿ ನೀರು ಬರುವಂತಿದೆ. 60 ಕ್ಕೂ ಹೆಚ್ಚು ಬಗೆಯ ಖಾದ್ಯಗಳ ಹೆಸರು ಈ ಲಿಸ್ಟ್ನಲ್ಲಿದೆ. ಸಿಹಿ ತಿಂಡಿಗಳೇ 14 ಬಗೆಯದ್ದು ಇದೆ. ಬೆಂಗಳೂರಿನ ಗಿರಿನಗರದಲ್ಲಿರುವ ಧಕ್ಷ ಸೆಲೆಬ್ರೇಷನ್ಸ್ ಎಂಬ ಕ್ಯಾಟರಿಂಗ್ನವರು ಈ ಅಡುಗೆಗಳನ್ನು ಮಾಡಿಸಿದ್ದಾರೆ. ಬನ್ನಿ ಈ ಮೆನ್ಯೂ ಲಿಸ್ಟ್ನಲ್ಲಿ ಏನೇನಿದೆ ನೋಡೋಣ..
ವೆಲ್ಕಮ್ ಡ್ರಿಂಕ್ಸ್
ಎಳನೀರಿನ ಜ್ಯೂಸ್
B.B.Q. ವಿತ್ ಪೈನಾಪಲ್
ಕ್ಯಾಪ್ಸಿಕಂ ಚಟ್ನಿ
ಸ್ಪಿನಾಚ್ ಟಿಕ್ಕಿ ಬೈಟ್ಸ್, ಸಾಸ್
ದೆಹಲಿ ಚಾಟ್ಸ್
ಪನೀರ್ ಶವರ್ಮಾ
ರಗಡ ಪ್ಯಾಟೀಸ್
ಸೂಜಿ ಪಾನಿ ಪುರಿ (3 ಫ್ಲೇವರ್ಡ್ ಪಾನಿ)
ಡಿನ್ನರ್
ಬ್ರೊಕೊಲಿ ಬಾದಾಮಿ ಸೂಪ್
ಕೊತ್ತಂಬರಿ ಲೈಮ್ ಸೂಪ್
ಗೀ ಫುಲ್ಕಾ
ಆಲೂ ಸ್ವೀಟ್‌ಕಾರ್ನ್ ಸ್ಟಫ್ಡ್ ಪರೋಟಾ
ಮೇತಿ ಮುಟ್ಟರ್ ಮಲೈ
ವೆಜ್ ಧೋ ಪ್ಯಾಜಾ
ಮಸಾಲೆ ಮುಳಬಾಗಲು ದೋಸೆ
ಚಟ್ನಿ ತವಾ ವೆಜ್ ದಮ್ ಬಿರಿಯಾನಿ
ಶಾಂಘೈ ಫ್ರೈಡ್ ರೈಸ್ ಗಾರ್ಲಿಕ್ ಸಾಸ್
ಸ್ಟಾರ್ಟರ್ಸ್
ಫೈರ್ ಪಿಜ್ಜಾ
ಸೀಸನಿಂಗ್ + ಸಾಸ್
ಪನೀರ್ ಸಿಗಾರ್
ಮೇಯನೇಸ್
ಇವುಗಳ ಹೊರತಾಗಿ ದಕ್ಷಿಣ ಭಾರತದ ಖಾದ್ಯಗಳು, ಸಲಾಡ್, ಐಸ್ ಕ್ರೀಂ, ಪಾನ್, ಹರ್ಬಲ್ ಟೀ ಕೌಂಟರ್ ಇದ್ದು, ಇವುಗಳಲ್ಲಿಯೂ ವೆರೈಟಿ ಇದ್ದವು. ಈ ಮದುವೆ ಊಟದ ಮೆನ್ಯೂ ಕಾರ್ಡ್ ಅನ್ನು ಮದುವೆಗೆ ಹೋಗಿ ಬಂದ ಕಲಗುಂದಿ ನವೀನ್ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಇದು ಮೆನ್ಯೂಗಳ ಕಾಲ! ನಾವೂ ಒಂದ್ಹಾಕಣ ಅಂತ! ನಿನ್ನೆಯ ದಿನ ಆಪ್ತರೊಬ್ಬರ ಮಗನ ಮದುವೆ… ನಾನು ಬರಿ ಕಲಸನ್ನ, ಅನ್ನ ಸಾರು ಮೊಸರು ಇಷ್ಟೇರೀ ತಿಂದದ್ದು! ” ಎಂದು ಕ್ಯಾಪ್ಶನ್ ನೀಡಿದ್ದಾರೆ.