ಸಮಗ್ರ ನ್ಯೂಸ್: ವಾಹನ ಚಲಿಸ ಬಲ್ಲ ಹಾಗೂ ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ರಸ್ತೆ ಎಂದರೆ ಅದು ಉಮ್ಲಿಂಗ್ ಲಾ. 19 ದಿನಗಳ ಕಾಲ ಓಡಿಯೇ ಈ ಸ್ಥಳವನ್ನು ಬಿಹಾರದ ಒಬ್ಬ ಮಹಿಳೆ ತಲುಪಿದ್ದಾರೆ. ಈ ಮೂಲಕ ವಿಶ್ವದ ವಿಶ್ವದ ಅತಿ ಎತ್ತರದ ರಸ್ತೆಯಲ್ಲಿ ಓಡಿದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿಗೆ ಸಬಿತಾ ಮಹತೋ ಭಾಜನರಾಗಿದ್ದಾರೆ.
ಪರ್ವತಾರೋಹಿ, ಸೈಕ್ಲಿಸ್ಟ್ ಮತ್ತು ಅಲ್ಟ್ರಾ ರನ್ನರ್ ಸಬಿತಾ ಮಹತೋ ಸಪ್ಟೆಂಬರ್ 5 ರಂದು ಉಮ್ಲಿಂಗ್ ಲಾ ತಲುಪಿ ಈ ಸಾಧನೆ ಮಾಡಿದ್ದಾರೆ.
ಚಾಪ್ರಾದ ಪಾನಾಪುರ ಗ್ರಾಮದ ನಿವಾಸಿ ಸಬಿತಾ ಮಹತೋ ಅವರು ವಿಶ್ವದ ಅತಿ ಎತ್ತರದ ವಾಹನ ಸಂಚಾರ ರಸ್ತೆ ಆದ ಉಮ್ಲಿಂಗ್ ಲಾದಲ್ಲಿ ಓಡಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಸಬಿತಾ ಇಲ್ಲಿಗೆ ತಲುಪಲು 19 ದಿನ ರಸ್ತೆಯಲ್ಲಿ ಓಟವನ್ನು ಮಾಡಿದ್ದಾರೆ. ಅವರು ಆಗಸ್ಟ್ 19 ರಂದು ಮನಾಲಿಯಿಂದ ತಮ್ಮ ಓಟವನ್ನು ಪ್ರಾರಂಭಿಸಿದರು ಮತ್ತು ಸೆಪ್ಟೆಂಬರ್ 5 ರಂದು ವಿಶ್ವದ ಅತಿ ಎತ್ತರದ ರಸ್ತೆ ಉಮ್ಲಿಂಗ್ ಲಾ ತಲುಪುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಸಬಿತಾ ಮನಾಲಿಯಿಂದ 570 ಕಿಲೋಮೀಟರ್ ಓಡಿ ಸಮುದ್ರ ಮಟ್ಟದಿಂದ 19024 ಅಡಿ ಎತ್ತರದಲ್ಲಿರುವ ಉಮ್ಲಿಂಗ ಲಾ ತಲುಪಿದರು. ಮನಾಲಿಯಿಂದಲೇ ರಸ್ತೆ ಏರುಮುಖವಾಗಿರುವುದರಿಂದ ಓಡುವುದು ಸುಲಭವಾಗಿರಲಿಲ್ಲ. ಕೇವಲ 100 ಮೀಟರ್ ತಲುಪುವಷ್ಟರಲ್ಲಿ ಉಸಿರಾಟದ ಸಮಸ್ಯೆ ಆಗುತ್ತದೆ. ಇದಕ್ಕೆ ಕಾರಣ ಎತ್ತರಕ್ಕೆ ಹೋದಂತೆಲ್ಲ ಗಾಳಿಯ ಪ್ರಮಾಣ ಕಡಿಮೆ ಇರುತ್ತದೆ. ಇದಲ್ಲದೇ ಬಿಸಿಲು, ಗಾಳಿಯ ಜೊತೆಗೆ ಆಗಾಗ ಸುರಿಯುತ್ತಿದ್ದ ಮಳೆಯ ಎದುರಿಸಿ ರಸ್ತೆ ಏರಿದ್ದಾರೆ.