Ad Widget .

ಕೃಷ್ಣಂ ವಂದೇ ಜಗದ್ಗುರುಂ| ಕೃಷ್ಣನ ಜೀವನ ದರ್ಶನವೇ ಪ್ರತಿದಿನದ ಹಬ್ಬ

ಸಮಗ್ರ ವಿಶೇಷ: ಜೀವನವನ್ನು ಪರಿಪೂರ್ಣವಾಗಿ ಕಾಣಿಸಿದವನು ಶ್ರೀಕೃಷ್ಣ. ಇದನ್ನು ನಾವು ಅವನು ಹಾಡಿನಲ್ಲಿ, ಎಂದರೆ ‘ಭಗವದ್ಗೀತೆ’ಯಲ್ಲಿ ಕಾಣಬಹುದು. ಜೀವನದ ಸಾಕ್ಷಾತ್ಕಾರದ ಹಾದಿಯಲ್ಲಿ ಎರಡು ಧರ್ಮಗಳು ಒದಗುತ್ತವೆ; ಒಂದು: ಪ್ರವೃತ್ತಿಧರ್ಮ; ಇನ್ನೊಂದು: ನಿವೃತ್ತಿಧರ್ಮ. ಪ್ರವೃತ್ತಿಧರ್ಮದ ಗತಿಯೇ ಕ್ರಿಯಾಶೀಲತೆ; ಕರ್ಮಮಾರ್ಗ. ನಿವೃತ್ತಿಧರ್ಮದ ಗತಿ ಎಂದರೆ ಕರ್ಮಸನ್ಯಾಸ; ಅದುವೇ ತ್ಯಾಗಮಾರ್ಗ. ಈ ಎರಡರ ಸಮನ್ವಯವನ್ನು ನಾವು ಭಗವದ್ಗೀತೆಯಲ್ಲಿ ಕಾಣುತ್ತೇವೆ. ಇದನ್ನು ಶಂಕರಾಚಾರ್ಯರು ಗೀತಾಭಾಷ್ಯದ ಆರಂಭದಲ್ಲಿಯೇ ಧ್ವನಿಸಿದ್ದಾರೆ ಕೂಡ.

Ad Widget . Ad Widget .

ಸಂಸಾರಿಯಾದವನು ಹೇಗಿರಬೇಕು ಎಂಬುದಕ್ಕೂ ಗೀತೆಯಲ್ಲಿ ಮಾರ್ಗದರ್ಶನ ಸಿಗುತ್ತದೆ; ಸನ್ಯಾಸಿಗಳಿಗೂ ಉಪದೇಶ ದೊರೆಯುತ್ತದೆ. ಹೀಗಾಗಿ ಕೃಷ್ಣತತ್ತ್ವ ಎಂಬುದು ಕೇವಲ ಜೀವನದ ಯಾವುದೋ ಒಂದು ಮುಖಕ್ಕೆ ಒದಗುವ ಬೆಳಕು ಅಲ್ಲ; ಅದು ಸಮಗ್ರಜೀವನಕ್ಕೂ ಒದಗುವ ದರ್ಶನ. ಧರ್ಮದ ಸೊಗಸಿಗೂ ಸಂತಸಕ್ಕೂ ಸಂಭ್ರಮಕ್ಕೂ ಕರ್ತವ್ಯಕ್ಕೂ ಒಳಿತಿಗೂ ಒದಗಿದ ಮೂರ್ತರೂಪವೇ ಶ್ರೀಕೃಷ್ಣ.

Ad Widget . Ad Widget .

‘ಸುಖ-ದುಃಖಗಳನ್ನೂ ಲಾಭ-ನಷ್ಟಗಳನ್ನೂ ಸೋಲು-ಗೆಲುವುಗಳನ್ನೂ ಒಂದೇ ನಿಟ್ಟಿನಿಂದ ಕಂಡು ಮತ್ತೆ ಹೋರಾಡಲು ತೊಡಗು. ಆಗ ನಿನಗೆ ಯಾವ ಪಾಪವೂ ತಟ್ಟದು’ – ಇದು ಅದರ ಸರಳ ತಾತ್ಪರ್ಯ. ಇದು ನಮಗೆ ಎಂದಿಗೂ ಬೇಕಾದ ಉಪದೇಶವೇ ಆಗಿದೆ. ಕೃಷ್ಣ ಕೇವಲ ಉಪದೇಶವನ್ನಷ್ಟೆ ಮಾಡಿದವನಲ್ಲ; ತನ್ನ ಉಪದೇಶಕ್ಕೆ ತಾನೇ ಉದಾಹರಣೆಯೂ ಆದವನು. ಜೀವನದಲ್ಲಿ ಎಷ್ಟೆಲ್ಲ ಕಷ್ಟಗಳನ್ನು, ಅಪಮಾನಗಳನ್ನು ಎದುರಿಸಿದರೂ ಅವನು ತನ್ನ ಕರ್ತವ್ಯಪ್ರಜ್ಞೆಯಿಂದ ದೂರ ಸರಿದವನಲ್ಲ. ಅವನಷ್ಟು ಕಷ್ಟಗಳನ್ನು ಅನುಭವಿಸಿದವರು ಬಹುಶಃ ಇತಿಹಾಸದಲ್ಲಿ ಇನ್ನೊಬ್ಬರು ಇರಲಾರರು.

ಕೃಷ್ಣ ಹುಟ್ಟುವುದಕ್ಕೂ ಮೊದಲೇ ಸಾವಿನ ಮಡಿಲಿನಲ್ಲಿ ಬಿದ್ದಿದ್ದವನು. ಎಷ್ಟೆಲ್ಲ ಬಂಧುಗಳ, ಸ್ನೇಹಿತರ, ರಾಜಮಹಾರಾಜರ ನಡುವೆ ಬದುಕಿದ್ದವನು ಕೊನೆಗೆ ಪ್ರಾಣವನ್ನು ತ್ಯಾಗ ಮಾಡುವಾಗ ಆತ್ಮೀಯರು ಯಾರೂ ಅವನ ಸಮೀಪದಲ್ಲಿ ಇರಲಿಲ್ಲ. ಈ ಹುಟ್ಟು-ಸಾವುಗಳ ನಡುವೆ ಅವನು ನೆಮ್ಮದಿಯಾಗಿ ಇದ್ದ ದಿನಗಳೂ ಕಡಿಮೆಯೇ; ನಿರಂತರವಾಗಿ ಒಂದಲ್ಲ ಒಂದು ಚಟುವಟಿಕೆಯಲ್ಲಿಯೇ ತೊಡಗಿಕೊಂಡಿದ್ದ. ಹೀಗಿದ್ದರೂ ತನ್ನ ವೈಯಕ್ತಿಕ ಸುಖ-ದುಃಖಗಳನ್ನು ಗಣನೆಗೆ ತೆಗೆದುಕೊಳ್ಳದೆ, ಕರ್ತವ್ಯಬುದ್ಧಿಯನ್ನು ಮೆರೆದವನು ಶ್ರೀಕೃಷ್ಣ.

ಕೃಷ್ಣನೊಬ್ಬನು ಇಲ್ಲದೆ ಹೋಗಿದಿದ್ದರೆ ನಮ್ಮ ಸಂಸ್ಕೃತಿ ತುಂಬ ಸಪ್ಪೆಯಾಗಿರುತ್ತಿತ್ತು. ನಮ್ಮ ಸಂಸ್ಕೃತಿಗೆ ರಸಶಕ್ತಿಯನ್ನು ತುಂಬಿದ್ದು ಕೃಷ್ಣತತ್ತ್ವವೇ ಹೌದು. ಈ ತತ್ತ್ವದಲ್ಲಿಯೇ ನಮ್ಮೆಲ್ಲರ ಯೋಗಕ್ಷೇಮಗಳೂ ಅಡಕವಾಗಿವೆ ಎಂಬ ಭರವಸೆಯನ್ನು ಕೊಟ್ಟಿದ್ದು ಅವನ ಜೀವನ. ಹೀಗಾಗಿ ಕೃಷ್ಣನ ಜೀವನ ಮತ್ತು ದರ್ಶನ – ಎರಡೂ ನಮ್ಮ ಪಾಲಿಗೆ ಪ್ರತಿದಿನದ ಹಬ್ಬವೇ ಸರಿ.

Leave a Comment

Your email address will not be published. Required fields are marked *