ಸಮಗ್ರ ನ್ಯೂಸ್: ಪ್ರಜಾಪ್ರಭುತ್ವ ವೇದಿಕೆ ಮತ್ತು ರಾಷ್ಟ್ರೀಯ ಹಿಂ.ಜಾ ವೇದಿಕೆ ವತಿಯಿಂದ ನಡೆದ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟದ ಪ್ರತಿಭಟನಾ ಸಭೆಯಲ್ಲಿ ಲಕ್ಷಕ್ಕೂ ಮಿಕ್ಕಿ ಜನಸಾಗರ ಬೆಳ್ತಂಗಡಿಯತ್ತ ಹರಿದು ಬಂದಿದ್ದು ಅತ್ಯಾಚಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ರಾಷ್ಟ್ರೀಯ ಹಿಂ.ಜಾ.ವೇ ಸಂಚಾಲಕ ಹಾಗೂ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಯ ವಿರುದ್ಧದ ನ್ಯಾಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಕರೆನೀಡಿದ ಪ್ರತಿಭಟನಾ ಸಭೆಗೆ ಬೆಳ್ತಂಗಡಿ ತಾಲೂಕಿನ ನಾಲ್ಕೂ ಪ್ರಮುಖ ಹೆದ್ದಾರಿಗಳಲ್ಲಿ ಜನಸಾಗರವೇ ಹರಿದುಬಂದಿತ್ತು.
ಸಭೆಗೆ ದ.ಕ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆಗಳಿಂ ಹೋರಾಟಗಾರರು ಹಾಗೂ ಜನರು ಸ್ವಯಂಪ್ರೇರಿತವಾಗಿ ಸಾಗಿ ಬಂದರು.
ಸಭಾ ಕಾರ್ಯಕ್ರಮ ಮುಂಜಾನೆಯಿಂದ ಸಂಜೆವರೆಗೂ ನಿರಂತರವಾಗಿ ನಡೆಯಿತು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ನ್ಯಾಯವಾದಿ ಮೋಹಿತ್, ಒಡನಾಡಿ ಸಂಘದ ಪರಶುರಾಮ್, ಜಾನಪದ ವಿದ್ವಾಂಸ ತಮ್ಮಣ್ಣ ಶೆಟ್ಟಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ಸೇರಿದಂತೆ ಹಲವು ಮಂದಿ ಭಾಗವಹಿಸಿ ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸಿದರು.
‘ಸೌಜನ್ಯ ಸೇರಿದಂತೆ ಯಾವುದೇ ಹೆಣ್ಣುಮಕ್ಕಳಿಗೂ ಈ ರೀತಿಯ ಅನ್ಯಾಯ ಆಗಬಾರದು. ಸೌಜನ್ಯಳ ಹೋರಾಟದಲ್ಲಿ ಆದಿಚುಂಚನಗಿರಿ ಮಠ ಯಾವಾಗಲೂ ಜೊತೆಗಿದೆ’ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಬೆಂಬಲ ಸೂಚಿಸಿದರು.
ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನರವಿ ಮಾತನಾಡಿ, ಸೌಜನ್ಯ ಪ್ರಕರಣದಲ್ಲಿ ಅನುಮಾನಗಳು ರಾಜ್ಯ ಸಭಾ ಸದಸ್ಯ ವೀರೇಂದ್ರ ಹೆಗ್ಗಡೆಯವರ ಸುತ್ತಲೂ ಗಿರಕಿ ಹೊಡೆಯುತ್ತಿರುವುದರಿಂದ ನಿಮ್ಮ ಮೇಲೆ ಯಾಕೆ ಅನುಮಾನ ಪಡಬಾರದು? ಎಂದು ನೇರ ಸವಾಲು ಹಾಕಿದರು.
ಜಾನಪದ ವಿದ್ವಾಂಸ ತಮ್ಮಣ್ಣ ಶೆಟ್ಟಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ತಾವೇ ನೇರವಾಗಿ ಅಣ್ಣಪ್ಪನ ಮುಂದೆ ಪ್ರಕರಣದಲ್ಲಿ ನಮ್ಮ ಕುಟುಂಬದ ಯಾವುದೇ ಸದಸ್ಯರ ಪಾಲು ಇಲ್ಲ ಎಂದು ಪ್ರಮಾಣ ಮಾಡಿ ಎಂದು ಆಗ್ರಹಿಸಿದರು.
‘ಸೌಜನ್ಯ ಓರ್ವ ಶಕ್ತಿಯಾಗಿ ಪರಿಣಮಿಸಿದ್ದು ಮುಂದೊಮ್ಮೆ ರಾಜ್ಯಾದ್ಯಂತ ಈ ಪ್ರತಿಭಟನೆ ಕಿಚ್ಚು ಹಚ್ಚುತ್ತದೆ. ಯಾರೋ ಮಾಡಿದ ಕೆಲಸಕ್ಕೆ ನಾವು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ತನಿಖಾಧಿಕಾರಿಯನ್ನು ಒಂದು ದಿನ ನಮಗೆ ಕೊಡಿ, ನಾವೇ ಸತ್ಯ ಕಕ್ಕಿಸುತ್ತೇವೆ ಎಂದು ವಾಕ್ಪ್ರಹಾರ ನಡೆಸಿದರು.
ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಸಿಬಿಐ ತನಿಖೆಯಲ್ಲಿ ಮಾಡಿದ ಎಡವಟ್ಟುಗಳ ಮೇಲೆ ಪ್ರಶ್ನೆಗಳ ಸುರಿಮಳೆಗೈದರು.
ಒಟ್ಟಾರೆ ಇಡೀ ದಿನ ನಡೆದ ಸಭೆಯಲ್ಲಿ ಜನಸಾಗರವೇ ಹರಿದು ಬಂದಿದ್ದು, ಎಲ್ಲರೂ ಶಾಂತತೆ ಕಾಪಾಡಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇಡೀ ಬೆಳ್ತಂಗಡಿ ತಾಲೂಕು ಸೌಜನ್ಯಳಿಗಾಗಿ ಒಂದಾಗಿತ್ತು.