ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣದಲ್ಲಿ ಉನ್ನತ ಮಟ್ಟದ
ತನಿಖೆಗಳು ವಿಫಲವಾಗಿದ್ದು ದೇಶದ ದೊಡ್ಡ ದುರಂತ. ಮನೆಯೊಳಗೇ ಕಳ್ಳಬೆಕ್ಕು ಅಡಗಿರುವಾಗ ಅದನ್ನು ಹಿಡಿಯಲೇಬೇಕಿದೆ. ಸತ್ಯ, ನ್ಯಾಯ ನೀತಿ ಧರ್ಮದ ಹೋರಾಟದಲ್ಲಿ ಆದಿಚುಂಚನಗಿರಿ ಮಠ ಜೊತೆಗಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಗುಡುಗಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂ.ಜಾ.ವೇದಿಕೆ ವತಿಯಿಂದ ನಡೆಸುತ್ತಿರುವ ಬೃಹತ್ ಹೋರಾಟದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
‘ಯಾವುದೇ ಹೆಣ್ಮಕ್ಕಳಿಗೂ ಈ ರೀತಿಯ ಅನ್ಯಾಯ ಆಗಬಾರದು. ಸಂತೋಷ್ ಅಪರಾಧಿ ಅಲ್ಲವೆಂದರೆ ಇನ್ನೊಬ್ಬ ಅಪರಾದಿ ಇರೋದು ಸೂರ್ಯ ಚಂದ್ರರಷ್ಟೇ ಸತ್ಯ. ನಿರಪರಾಧಿ ಸಂತೋಷ್ ಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸೌಜನ್ಯ ತಾಯಿ ಕುಸುಮಾವತಿ ಹಾಗೂ ಅವರ ಕುಟುಂಬಕ್ಕೆ ರಕ್ಷಣೆ ಬೇಕು. ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿದ್ದ ವ್ಯಕ್ತಿಗಳನ್ನು, ವೈದ್ಯರನ್ನು ಮಂಪರು ಪರೀಕ್ಷೆ ಮಾಡಬೇಕು. ತಿಮರೋಡಿ ಹೋರಾಟ ಶ್ಲಾಘನೀಯ. ಅವರ ಹೋರಾಟಕ್ಕೆ ಸ್ವಾಮೀಜಿ ಹಾಗೂ ಮಠ ಜೊತೆಗಿದೆ. ಸೌಜನ್ಯ ಕಾಳಿ ಶಕ್ತಿಯಾಗಿ ಆವೀರ್ಭವಿಸಿದ್ದಾಳೆ. ಸರ್ಕಾರ ನ್ಯಾಯಯುತ ತನಿಖೆ ನಡೆಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.
ಸಭೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದು, ಸಭಾ ಕಾರ್ಯಕ್ರಮ ಬೆಳ್ತಂಗಡಿ ಮಿನಿ ವಿಧಾನಸೌದ ಮುಂಭಾಗ ನಡೆಯುತ್ತಿದೆ.