ಸಮಗ್ರ ನ್ಯೂಸ್: ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಪ್ರಜಾಪ್ರಭುತ್ವ ವೇದಿಕೆ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕರೆದಿರುವ ಬೃಹತ್ ಸಮಾವೇಶಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಮಹೇಶ್ ಶೆಟ್ಟಿ ತಿಮರೋಡಿಯವರು ನ್ಯಾಯ ಪರ, ಸತ್ಯದ ಪರ, ಮತ್ತು ಧರ್ಮದ ಪರ ನಿಲ್ಲುವ ಎಲ್ಲಾ ಬಾಂಧವರನ್ನು ಆಹ್ವಾನಿಸಿದ್ದು, ಬೆಳ್ತಂಗಡಿಯತ್ತ ಜನಸಾಗರ ಹರಿದು ಬರುವ ನಿರೀಕ್ಷೆಯಿದೆ.
ನಾಳೆ(ಸೆ.3) ನಡೆಯುವ ಐತಿಹಾಸಿಕ ಪ್ರತಿಭಟನೆಗೆ, ಕಂಡು ಕೇಳರಿಯದ ರೀತಿಯಲ್ಲಿ ಜನಪ್ರವಾಹ ಬರಬಹುದಾದ ಸಾಧ್ಯತೆ ಇದ್ದು ಹೋರಾಟಗಾರರಿಗೆ ಸಾಥ್ ನೀಡಲು ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರಾದ ಬಾಲಕೃಷ್ಣರವರು ಆಗಮಿಸಲಿದ್ದಾರೆ. ಆ ಮೂಲಕ ಸೌಜನ್ಯ ಹೋರಾಟಕ್ಕೆ ಬಹುದೊಡ್ಡ, ರಾಜ್ಯ ಮಟ್ಟದ ಬೆಂಬಲ ಸಿಕ್ಕಿದೆ.
ಈಗಾಗಲೇ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಭಾಗವಹಿಸಲು ನಿರ್ಧರಿಸಿದ್ದು, ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಕುಮಾರಿ ಸೌಜನ್ಯ ಗೌಡಳ ಸಾವಿಗೆ ಕಾರಣವಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಅವರನ್ನು ರಕ್ಷಿಸುತ್ತ ಬಂದ ಪ್ರಭಾವಿಗಳಿಗೆ ಕೂಡಾ ಶಿಕ್ಷೆ ವಿಧಿಸಬೇಕು ಎನ್ನುವ ಬೇಡಿಕೆಯಲ್ಲಿ ನಾಳಿನ ಸಮಾವೇಶ ನಡೆಯಲಿದೆ.
ರಾಜ್ಯದ ಒಕ್ಕಲಿಗ ಸ್ವಾಮೀಜಿಯವರ ಸ್ಪಷ್ಟ ನಿರ್ದೇಶನದಂತೆ ಒಕ್ಕಲಿಗ ಗೌಡ ಸಂಘಟನೆಗಳ ಸ್ಥಳೀಯ ಶಾಖಾ ಮಠದ ಸ್ವಾಮೀಜಿಯವರು ಹೋರಾಟಕ್ಕೆ ಬೆಂಬಲ ಸೂಚಿಸಿ ತಮ್ಮ ಆಗಮನದ ವಿಷಯವನ್ನು ತಿಳಿಸಿದ್ದರು. ಇದೀಗ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರ ಆಗಮನದ ಸುದ್ದಿ ಬಂದಿದೆ. ರಾಜ್ಯದ ಅತ್ಯಂತ ಪ್ರಬಲ ಸಮುದಾಯದ ನಾಯಕನ ಬೆಂಬಲದಿಂದ ಹೋರಾಟಕ್ಕೆ ಭಾರೀ ಶಕ್ತಿ ದೊರೆತಿದ್ದು, ಹೋರಾಟ ಶಕ್ತಿ ಪಡೆದುಕೊಳ್ಳಲಿದೆ.
ಬೃಹತ್ ಪ್ರತಿಭಟನಾ ಸಭೆಗೆ ಈಗಾಗಲೇ ಈ ನಿಟ್ಟಿನಲ್ಲಿ ಸಕಲ ತಯಾರು ನಡೆದಿದೆ. ನಾಳೆಯ ಸಮಾವೇಶಕ್ಕಾಗಿ 1 ಲಕ್ಷ ಜನಕ್ಕಿಂತ ಜಾಸ್ತಿ ಜನ ಸೇರುವ ನಿರೀಕ್ಷೆಯಿದೆ. ಸ್ವಪ್ರೇರಿತವಾಗಿ ಜನರು ನಾಳಿನ ಸಮಾರಂಭಕ್ಕೆ ಬರಲಿದ್ದು, ಹೋಗಿ ಬರುವವರಿಗೆ ಯಾವುದೇ ವಾಹನದ ವ್ಯವಸ್ಥೆ ಮಾಡಲ್ಲ ಎಂದು ಶ್ರಿ ಮಹೇಶ್ ಶೆಟ್ಟಿ ತಿಮರೋಡಿಯವರು ಈಗಾಗಲೇ ಹೇಳಿದ್ದಾರೆ. ಆದರೆ ನಾಳೆ ಸಮಾರಂಭಕ್ಕೆ ಬರುವವರಿಗೆ ನೀರಿನ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.