ಸಮಗ್ರ ನ್ಯೂಸ್: ಕಳೆದ ಬಾರಿ ಸಂಸತ್ತು ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿದಿದೆ.
ಜೆಡಿಎಸ್‌ನ ಏಕೈಕ ಸಂಸದ, ಹಾಸನ ಲೋಕಸಭಾ ಕ್ಷೇತ್ರದ ಎಂ.ಪಿ. ಪ್ರಜ್ವಲ್ ರೇವಣ್ಣ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಆಸ್ತಿ ಘೋಷಣೆ ವಿವರ, ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು 2019ರಲ್ಲಿ ಹೈಕೋರ್ಟ್ ನಲ್ಲಿ ಅವರ ವಿರುದ್ಧ ಅರ್ಜಿ ಸಲ್ಲಿಕೆಯಾಗಿತ್ತು.
ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದ ಪ್ರಜ್ವಲ್ ರೇವಣ್ಣ ಅವರು ಚೊಚ್ಚಲ ಪ್ರಯತ್ನದಲ್ಲೇ ಜಯ ಗಳಿಸಿದ್ದರು. ಆದರೆ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರಜ್ವಲ್ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಸೋಲು ಕಂಡ ಬಿಜೆಪಿ ಅಭ್ಯರ್ಥಿ ಅರಕಲಗೂಡು ಮಂಜು ಅವರು 2019ರ ಜೂನ್ 26ರಂದು ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದರು.