ಸಮಗ್ರ ನ್ಯೂಸ್:ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚೊಕಂಡಳ್ಳಿಯಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರ ಬಂಧನ.
ಆ. 31ರ ಸಂಜೆ 6 ಗಂಟೆ ಸಮಯದಲ್ಲಿ ಚೋಕಂಡಳ್ಳಿ ಅಂಗಡಿಯೊಂದರ ಸಮೀಪ ಹೊರ ರಾಜ್ಯದ ಲಾಟರಿ ಫಲಿತಾಂಶಕ್ಕೆ ಚೀಟಿ ಕೊಡುವ ಮೂಲಕ ಮಟ್ಕಾ ದಂಧೆ ನಡೆಸುತ್ತಿದ್ದ ಖಚಿತ ವರ್ತಮಾನದ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳಾದ ಆಟೋ ಚಾಲಕ ಕಿರಣ್ ಲೋಬೊ ಮತ್ತು ಅಝೀಜ್ ಎಂಬುವವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಮಟ್ಕಾ ದಂಧೆಗೆ ಬಳಸಲಾದ 2140 ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ವಿರಾಜಪೇಟೆ ಡಿವೈ ಎಸ್ ಪಿ ಹಾಗೂ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.
ಕಳೆದೆರಡು ತಿಂಗಳ ಹಿಂದೆ ನಿರಂತರವಾಗಿ ವಿರಾಜಪೇಟೆ ಪಟ್ಟಣದ ಕೆಲವು ಅಂಗಡಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ ಆರು ಗಂಟೆ ತನಕ, ಮಣಿಪುರ, ಮಿಝೋರಾಂ, ಕೇರಳ, ನಾಗಾಲ್ಯಾಂಡ್ ರಾಜ್ಯಗಳ ಲಾಟರಿ ಟಿಕೆಟುಗಳ ಕೊನೆಯ ಮೂರು ಸಂಖ್ಯೆಗೆ 100 ರೂಪಾಯಿಯನ್ನು ಪಡೆದುಕೊಂಡು ಹೆಸರು ಹಾಗೂ ಚೀಟಿ ಬರೆದಿಟ್ಟು ಫಲಿತಾಂಶ ಗಂಟೆಗೊಂದು ಬಾರಿ ಹೊರಬಿದ್ದ ತಕ್ಷಣ ಕಟ್ಟಿರುವ ಸಂಖ್ಯೆ ಸರಿ ಇದ್ದರೆ 20 ಸಾವಿರ ನೀಡುವ ದಂಧೆ ನಿರಂತರವಾಗಿ ನಡೆಯುತ್ತಿತ್ತು. ಇದರಿಂದ ಕಾರ್ಮಿಕರು, ಆಟೋ ಚಾಲಕರು, ಸರಕಾರಿ ನೌಕರರು, ಕೆಲವು ಸಣ್ಣ ವ್ಯಾಪಾರಿಗಳು ಇದರ ಗೀಳಿಗೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡಿದ್ದರು ಎಂಬ ಮಾಹಿತಿಯನ್ನು ಕಲೆಹಾಕಲಾಗಿದೆ.