ಸಮಗ್ರ ನ್ಯೂಸ್: 11 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯಳಿಗೆ ನ್ಯಾಯಕ್ಕಾಗಿ ರಾಜ್ಯವ್ಯಾಪಿ ಹೋರಾಟಗಳು ನಡೆಯುತ್ತಿವೆ. ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ಬಂದ ಬಳಿಕ ಈ ಕುಕೃತ್ಯ ನಡೆಸಿದ ನಿಜವಾದ ಪಾತಕಿಗಳು ಯಾರು? ಎಂಬುದು ಬಹುಚರ್ಚಿತ ವಿಷಯ.
ಮೊದಮೊದಲು ಏಕಮುಖವಾಗಿದ್ದ ಹೋರಾಟ ಈಗೀಗ ದಿಕ್ಕು ತಪ್ಪುವ ಲಕ್ಷಣಗಳು ಕಾಣುತ್ತಿವೆ. ಕಳೆದ ಸೆ.27 ಮತ್ತು 28ರಂದು ನಡೆದ ಎರಡು ಹಕ್ಕೊತ್ತಾಯ ಸಭೆಗಳು ಹೋರಾಟದ ಹಾದಿಯನ್ನೇ ಬದಲಿಸಿಬಿಟ್ಟಿವೆ. ಸೌಜನ್ಯಳ ನ್ಯಾಯದ ಹೋರಾಟದ ಬದಲು ಪಕ್ಷಕೇಂದ್ರಿತ ಹೋರಾಟವಾಗಿ ಪರಿವರ್ತನೆಯಾಗಿದ್ದು ವೈಯಕ್ತಿಕ ಹಿತಾಸಕ್ತಿಗಳು ಚರ್ಚೆಗೊಳಗಾಗಿರುವುದು ವಿಪರ್ಯಾಸ.
ಒಂದೆಡೆ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಬಳಗ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದರೆ ಇತ್ತ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟಕ್ಕೆ ಇಳಿದಿವೆ. ಬೆಳ್ತಂಗಡಿ ಹಾಲಿ ಶಾಸಕ ಹರೀಶ್ ಪೂಂಜಾ ಹಾಗೂ ಮಾಜಿ ಶಾಸಕ ವಸಂತ ಬಂಗೇರರ ನಡವಳಿಕೆಗಳೇ ಇದಕ್ಕೆ ಸಾಕ್ಷಿ.
ನತದೃಷ್ಟ ಸೌಜನ್ಯಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ತಾವಿಬ್ಬರೂ ಪರಸ್ಪರ ಆಣೆ ಪ್ರಮಾಣದ ವಾದ ವಿವಾದ ಮುಂದಿಟ್ಟಿರುವುದು ಹಾಸ್ಯಾಸ್ಪದ. ಇನ್ನು ಸೌಜನ್ಯಳ ತಾಯಿ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಆದೇಶವಿದ್ದರೂ ನಿರ್ಧಿಷ್ಟ ವ್ಯಕ್ತಿಗಳ ಮೇಲೆ ಆರೋಪ ಮಾಡುತ್ತಿರುವುದು ಕೂಡಾ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ಕೆಲವು ಪರಾವಲಂಬಿ(!) ಶಕ್ತಿಗಳು ಕೋರ್ಟ್ ಮೆಟ್ಟಿಲೇರಿ ವಿಶೇಷ ಆದೇಶಗಳನ್ನು ತರುತ್ತಿರುವುದು ಹೋರಾಟದ ವೇಗಕ್ಕೆ ಅಂಕುಶ ಹಾಕುವ ಪ್ರಯತ್ನವೆಂದೇ ಹೇಳಬಹುದು.
ಒಬ್ಬ ವ್ಯಕ್ತಿಯಿಂದ ಈ ಕೃತ್ಯ ಸಾಧ್ಯವಿಲ್ಲ ಎಂದು ವರದಿಗಳೇ ತಿಳಿಸಿರುವಾಗ ನೊಂದ ಕುಟುಂಬ ಹೇಳುತ್ತಿರುವ ಆಕ್ರೋಶದ ನುಡಿಗಳಲ್ಲಿ ಸತ್ಯವಿಲ್ಲದೇ ಇರಬಹುದೇ? ಅವರು ಆರೋಪಿಸುತ್ತಿರುವ ಎಲ್ಲಾ ಆರೋಪಗಳು ಸುಳ್ಳಾಗಲು ಸಾಧ್ಯವೇ? ಹಾಗಿದ್ದಾಗ ನಿರ್ದಿಷ್ಟ ರೂಪದಲ್ಲಿ ಹೋರಾಟಗಳು ನಡೆಯಬೇಕಿದೆ. ಜೊತೆಗೆ ಸೌಜನ್ಯ ಕುಟುಂಬವೂ ಸಂಯಮ ಕಳೆದುಕೊಳ್ಳದೆ ವರ್ತಿಸಬೇಕಿದೆ.
ಮನೆಮಗಳನ್ನು ಕಳೆದುಕೊಂಡ ಯಾರಿಗೂ ಈ ರೀತಿಯ ವ್ಯವಸ್ಥೆಗಳ ಮೇಲೆ ಜಿಗುಪ್ಸೆ ಬರುವುದು ಸರಿಯೇ ಆದರೂ ಹೋರಾಟಗಳು ಒಟ್ಟಾರೆಯಾಗಬಾರದಲ್ಲವೇ. ಸೌಜನ್ಯಳ ನ್ಯಾಯಕ್ಕಾಗಿ ನಾಡೇ ಒಂದಾಗಿರುವಾಗ ಆ ಕುಟುಂಬದ ಹಾಗೂ ಹೋರಾಟಗಾರರ ಹೋರಾಟ ಹಾದಿ ರಂಪಾಟವಾಗಬಾರದು. ಉದ್ದೇಶ ಈಡೇರುವ ತನಕ ಬಿಡಲೂಬಾರದು. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಪ್ರಕರಣವನ್ನು ಬಳಸಿಕೊಳ್ಳುವ ಮೊದಲು ಹೋರಾಟಗಾರರು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ನಮ್ಮ ಮೂಗುದಾರವನ್ನು ಇನ್ನೊಬ್ಬರ ಕೈಯಲ್ಲಿ ಕೊಟ್ಟಂತಾಗುವುದು.