ಸಮಗ್ರ ನ್ಯೂಸ್: ಸುಮಾರು ಒಂದೂವರೆ ಎರಡು ತಿಂಗಳು 100ರಿಂದ 150ರವರೆಗೆ ಇದ್ದ ಕೇಜಿ ಟೊಮೆಟೋ ಬೆಲೆ ಇದೀಗ 20ಕ್ಕೆ ಕುಸಿದಿದೆ. ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿದ್ದು, ದರ ಇಳಿಕೆಯಾಗಿದೆ.
ಆಂಧ್ರಪ್ರದೇಶದ ಮಾರುಕಟ್ಟೆಯಿಂದ ಯಥೇಚ್ಛವಾಗಿ ಟೊಮೆಟೋ ಪೂರೈಕೆಯಾಗುತ್ತಿದೆ. ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಆಗಿರುವ ಕೋಲಾರದ ಸಿಎಂಆರ್ ಮಾರುಕಟ್ಟೆಯಲ್ಲಿ 15 ಕೇಜಿ ನಾಟಿ ಟೊಮೆಟೋ ಬಾಕ್ಸ್ 250- 400, ಹೈಬ್ರಿಡ್ ಟೊಮೆಟೋ 250- 450ಕ್ಕೆ ಇಳಿದಿದೆ. ಇದಲ್ಲದೆ, ಸುತ್ತಲಿನ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಿಂದ ಬರುವ ಟೊಮೆಟೋ ಪ್ರಮಾಣವೂ ಹೆಚ್ಚಾಗಿರುವುದರಿಂದ ಬೆಲೆಯೂ ಕಡಿಮೆಯಾಗಿದೆ.
ಟೊಮೆಟೋ ಬೆಲೆ ನಗರದಲ್ಲಿ ಕೇಜಿಗೆ ಗರಿಷ್ಠ 100- 160 ವರೆಗೆ ತಲುಪಿದ್ದಾಗ ಬಹುತೇಕರು ಖರೀದಿ ಬಿಟ್ಟಿದ್ದರು, ಇಲ್ಲವೇ ಕಡಿಮೆ ಖರೀದಿ ಮಾಡುತ್ತಿದ್ದರು. ಅಡುಗೆಯಲ್ಲಿ ಹುಣಸೆಹಣ್ಣಿನಂತಹ ಪರ್ಯಾಯಕ್ಕೆ ಮೊರೆ ಹೋಗಿದ್ದರು. ಆದರೆ, ಇದೀಗ ಸಹಜ ಬೆಲೆಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಸಂತಸಗೊಂಡಿದ್ದಾರೆ. ಸಹಜವಾಗಿ ಟೊಮೆಟೋ ಖರೀದಿ ಮಾಡುತ್ತಿದ್ದು, ಅಡುಗೆ ಮನೆ ಟೊಮೆಟೋ ಕಾಣುತ್ತಿದೆ.