ಸಮಗ್ರ ನ್ಯೂಸ್: ಹಂಗೇರಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜಾವೆಲಿನ್ ಥ್ರೋ ಫೈನಲ್ನಲ್ಲಿ ಗೆದ್ದು ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. 12 ಆಟಗಾರರನ್ನು ಒಳಗೊಂಡ ಅಂತಿಮ ಹಣಾಹಣಿಯಲ್ಲಿ 88.17 ಮೀಟರ್ ದೂರಕ್ಕೆ ಭರ್ಜಿ ಎಸೆದು ಚೋಪ್ರಾ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು.
ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟು ಹೊಸ ಇತಿಹಾಸ ನಿರ್ಮಿಸಿದರು.
6 ಸುತ್ತಿನ ಈ ಸ್ಪರ್ಧೆಯ ಮೊದಲ ರೌಂಡ್ನಲ್ಲೇ ನೀರಜ್ ಚೋಪ್ರಾ ಫೌಲ್ ಮಾಡಿದ್ದರು. ಆದರೆ ಅತ್ತ ಎಲ್ಲರೂ ಮೊದಲ ಎಸೆತದಲ್ಲೇ ಖಾತೆ ತೆರೆದಿದ್ದರು. ಇತ್ತ ನೀರಜ್ ಚೋಪ್ರಾ 12ನೇ ಸ್ಥಾನದಲ್ಲಿ ಕಾಣಿಸಿಕೊಂಡರು.
ಇನ್ನು ದ್ವಿತೀಯ ಸುತ್ತಿನಲ್ಲಿ ತಪ್ಪಾಗದಂತೆ ಎಚ್ಚರಿಕೆಯೊಂದಿಗೆ ಕಣಕ್ಕಿಳಿದ ನೀರಜ್ ಚೋಪ್ರಾ ಬರೋಬ್ಬರಿ 88.17 ಮೀಟರ್ ದೂರಕ್ಕೆ ಭರ್ಜಿ ಎಸೆದರು. ಇದಾದ ಬಳಿಕ 86.32 ಮೀ, 84.64 ಮೀ, 87.73 ಮೀ, 83.98 ಮೀಟರ್ವರೆಗೆ ಎಸೆದರೂ 2ನೇ ಸುತ್ತಿನ ದೂರವನ್ನು ಕ್ರಮಿಸಲು ಸಾಧ್ಯವಾಗಲಿಲ್ಲ.
ಮತ್ತೊಂದೆಡೆ ಉಳಿದ ಸ್ಪರ್ಧಿಗಳು ನೀರಜ್ ಚೋಪ್ರಾ ಅವರ 88.17 ಮೀಟರ್ ದೂರವನ್ನು ಹಿಂದಿಕ್ಕಲು ಸಫಲರಾಗಲಿಲ್ಲ. ಇದರೊಂದಿಗೆ ಭಾರತದ ಚಿನ್ನದ ಹುಡುಗನ ಪಾಲಿಗೆ ಮತ್ತೊಂದು ಚಿನ್ನದ ಪದಕ ಸೇರ್ಪಡೆಯಾಯಿತು.