ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಒಂದು ತಾರ್ಕಿಕ ಅಂತ್ಯ ಕೊಡುತ್ತದೆ ಎನ್ನುವ ವಿಶ್ವಾಸವಿದೆ. ಹೀಗಾಗಿ ಈ ಬಗ್ಗೆ ಯಾರ ವೈಯಕ್ತಿಕ ಅಭಿಪ್ರಾಯಗಳಿಗೂ ಪ್ರತಿಕ್ರಿಯೆ ನೀಡಲ್ಲ ಎಂದು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಕುಂದಾಪುರದಲ್ಲಿ ನಡೆದ ಜನಾಗ್ರಹ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸರಕಾರ ಮಾಡಿರುವ ತಪ್ಪನ್ನು ಈಗಿನ ಸರ್ಕಾರ ಮಾಡಲ್ಲ ಎನ್ನುವ ಭರವಸೆ ಇದೆ. ಅಧಿಕಾರಿಗಳು ಹಾಗೂ ಕಾನೂನು ಹಂತದಲ್ಲಿ ಆಗಿರುವ ತಪ್ಪುಗಳಿಗೆ ಕಾರಣರು ಯಾರು? ಇದರ ಹಿಂದೆ ಇದ್ದವರು ಯಾರು ಎನ್ನುವುದು ಸರಿಯಾದ ತನಿಖೆಯಿಂದ ಬಯಲಿಗೆ ಬರಬೇಕಾಗಿದೆ ಎಂದರು.
ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯದಲ್ಲಿಯೂ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ. ಕಾನೂನು ರೀತಿಯ ಹೋರಾಟದ ಬಗ್ಗೆಯೂ ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತಿದೆ. ಕಾನೂನಿಗಿಂತ ಜನಶಕ್ತಿಯ ಹೋರಾಟದಲ್ಲಿ ನಂಬಿಕೆ ಇರುವುದರಿಂದ ಜನಾಗ್ರಹ ಸಭೆಯ ಮೂಲಕ ನ್ಯಾಯಕ್ಕಾಗಿ ಒತ್ತಡ ಹಾಕುತ್ತಿದ್ದೇವೆ ಎಂದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಾಜಕೀಯ ಪಕ್ಷಗಳು ಎಲ್ಲವೂ ಒಂದೇ. ಆದರೆ ನ್ಯಾಯಪೀಠ ಹಾಗೂ ಧರ್ಮದ ವ್ಯವಸ್ಥೆಯ ಬಗ್ಗೆ ರಾಜಕಾರಣಿಗಳು ನಂಬಿಕೆ ಇರಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಮಾತನಾಡಿದ ಸೌಜನ್ಯ ಅವರ ತಾಯಿ ಕುಸುಮಾವತಿ, ನನ್ನ ಪುತ್ರಿಯನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಇದಕ್ಕೆ ಕಾರಣರಾದವರು ಯಾರು ಎಂದು ಹೇಳಿರುವ ಆರೋಪಿಗಳ ತನಿಖೆ ನಡೆಸಿ ಅವರಿಗೆ ಶಿಕ್ಷೆ ಕೊಡಿಸುವ ಕೆಲಸ ಆಗಬೇಕು. ಆ.27 ರಂದು ಧರ್ಮಸ್ಥಳದಲ್ಲಿ ನಡೆಯುವ ಹೋರಾಟಕ್ಕೆ ನಮ್ಮನ್ನು ಕರೆದಿದ್ದು, ಕೆಲವರು ಅವರನ್ನು ಕಾಲಿಡಲು ಬಿಡುವುದಿಲ್ಲ ಎಂದು ಬೆದರಿಕೆಯನ್ನು ನೀಡುತ್ತಿದ್ದಾರೆ. ಯಾರು ಏನೇ ಹೇಳಲಿ ನಾವಂತೂ ಆ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ನ್ಯಾಯಕ್ಕಾಗಿ ನಾವು ನಂಬಿದ ದೇವರ ಬಳಿ ಹೋಗುತ್ತಿದ್ದೇನೆ ಎಂದ ಅವರು, ನನ್ನ ತಂದೆಯ ದಾರಿ ತಪ್ಪಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಮುನ್ನ ನೆಹರೂ ಮೈದಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಜನರ ಒಕ್ಕೊರಳ ಘೋಷಣೆ ಯೊಂದಿಗೆ, ನ್ಯಾಯಕ್ಕೆ ಆಗ್ರಹಿಸಿ ಮೆರವಣಿಗೆ ನಡೆಸಲಾಯಿತು.
ಸಭೆಯ ಆರಂಭಕ್ಕೆ ಮುನ್ನ ಸೌಜನ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಹೋರಾಟದ ಯಶಸ್ಸಿಗಾಗಿ ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನದಿಂದ ತಂದ ಪ್ರಸಾದವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ್ ಶೆಟ್ಟಿ ಮಹೇಶ್ ಶೆಟ್ಟಿ ತಿಮರೋಡಿಗೆ ಹಸ್ತಾಂತರಿಸಿದರು. ಪ್ರತಾಪ್ ಶೆಟ್ಟಿ ಉಳ್ತೂರು ನಿರೂಪಿಸಿದರು.
ಕುಂದಾಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ, ತರಬೇತಿ ಡಿವೈಎಸ್ಪಿ ರವಿ, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ನಂದಕುಮಾರ್, ಪವಿತ್ರತೇಜ್, ದಿವಾಕರ್ ಪಿಎಂ, ಮಂಜಪ್ಪ, ಎಸ್‌ಐಗಳಾದ ವಿನಯ್ ಕೊರ್ಲಹಳ್ಳಿ, ಪ್ರಸಾದ್, ವಿವಿಧ ಠಾಣೆ ಪಿಎಸ್‌ಐ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು