ಸಮಗ್ರ ನ್ಯೂಸ್: ಪಡಿತರ ಚೀಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ವಿಳಾಸ ಬದಲಾವಣೆ ಅವಧಿಯನ್ನು ಮತ್ತಷ್ಟು ವಿಸ್ತರಿಸಿರುವುದಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
ಸೋಮವಾರದವರೆಗೆ ಮಾತ್ರ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಈಗ ಗ್ರಾಹಕರ ಒತ್ತಾಯದ ಮೇರೆಗೆ ತಿದ್ದುಪಡಿ, ಸೇರ್ಪಡೆ ಅವಧಿಯನ್ನು ಮತ್ತಷ್ಟು ದಿನ ವಿಸ್ತರಿಸಲಾಗುವುದು. ಸರ್ವರ್ ಸಮಸ್ಯೆಯನ್ನು ನಿವಾರಿಸುವ ಹಿನ್ನೆಲೆಯಲ್ಲಿ ಹಂತ-ಹಂತವಾಗಿ ಗ್ರಾಹಕರಿಗೆ ಅವಕಾಶ ನೀಡಲಾಗುವುದು. ಆನ್‌ಲೈನ್ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಸೇವೆ ಪಡೆಯಬಹುದು, ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಾರ್ವಜನಿಕ ವಿತರಣೆ (ವಿಜಿಲೆನ್ಸ್) ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರಕುಮಾರ್ ಗಂಗ್ವಾರ್ ತಿಳಿಸಿದರು.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಹೊಸದಾಗಿ ಎಪಿಎಲ್, ಬಿಪಿಎಲ್ ಕಾರ್ಡ್ ಮಾಡಿಸುವುದು, ಹೆಸರು ತಿದ್ದುಪಡಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಹೊಸ ಸರಕಾರ ಅಧಿಕಾರಕ್ಕೆ ಬಂದರೂ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಗಳ ಹಿನ್ನೆಲೆಯಲ್ಲಿ ತಾತ್ಕಾಲಿಕ ಸ್ಥಗಿತವನ್ನು ಸುಮಾರು ನಾಲ್ಕೂವರೆ ತಿಂಗಳ ಕಾಲ ಮುಂದುವರಿಸಲಾಗಿತ್ತು. ಈಗ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಬಯೊಮೆಟ್ರಿಕ್ಸ್ ಮಾಡಿಸುವುದು, ಯಜಮಾನನ ಹೆಸರಿನಲ್ಲಿರುವ ಪಡಿತರ ಚೀಟಿ ಯಜಮಾನಿಗೆ ವರ್ಗಾಯಿಸುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಹೊಸದಾಗಿ ಕಾರ್ಡ್ ಮಾಡಿಸಲು ಇನ್ನೂ ಅವಕಾಶ ನೀಡಿಲ್ಲ ಎಂದು ಇಲಾಖೆ ತಿಳಿಸಿದೆ.