ಸಮಗ್ರ ನ್ಯೂಸ್: ನಮ್ಮಲ್ಲಿ ಸರ್ಪಗಳು ಧಾರ್ಮಿಕ ನಂಬಿಕೆಗೆ ಹೆಸರುವಾಸಿ ಮತ್ತು ಅವುಗಳನ್ನು ವಿವಿಧ ದಿನಾಂಕಗಳು ಮತ್ತು ಹಬ್ಬಗಳಲ್ಲಿ ಪೂಜಿಸಲಾಗುತ್ತದೆ. ಪ್ರತಿ ವರ್ಷ ನಾಗರ ಪಂಚಮಿಯಂದು ಹಾವಿಗೆ ಪೂಜೆ ಸಲ್ಲಿಸುವ ವೇಳೆ ಹಾಲೆರೆಯಲಾಗುತ್ತದೆ. ಇದರಿಂದ ನಾಗ ದೇವತೆಯ ಕೃಪೆಯು ನಮ್ಮೆಲ್ಲರ ಮೇಲೆ ಉಳಿಯುತ್ತದೆ ಮತ್ತು ನಮ್ಮ ಕುಟುಂಬವನ್ನು ಹಾವು ಕಡಿತದಿಂದ ರಕ್ಷಿಸಬಹುದು ಎಂಬ ನಂಬಿಕೆ.
ಹಾಗೆಯೇ ನಾಗರಪಂಚಮಿ ಹಬ್ಬಕ್ಕೆ ವಿಶೇಷ ತಿನಿಸುಗಳನ್ನ ಮಾಡಿ ಮನೆಮಂದಿಗೆಲ್ಲಾ ನೀಡಿ ನಾಗರ ಪಂಚಮಿಗೊಂದು ಅರ್ಥಕೊಡುತ್ತಾರೆ. ಹಾಗಾದ್ರೆ ಏನೇನು ವಿಶೇಷ ತಿನಿಸುಗಳನ್ನ ಮಾಡುತ್ತಾರೆ .
ಅಳ್ಳಿಟ್ಟು
ನಾಗರಪಂಚಮಿ ಹಬ್ಬಕ್ಕೆ ಅಳ್ಳಿಟ್ಟು ಬಹಳ ಫೇಮಸ್. ಅದರಲ್ಲೂ ಉತ್ತರ ಕರ್ನಾಟಕದ ಮಂದಿಗೆ ಅಳ್ಳಿಟ್ಟು ಇಲ್ಲದ ನಾಗರಪಂಚಮಿಯನ್ನ ಊಹಿಸೋದೂ ಸಾಧ್ಯವಿಲ್ಲ.
ಬೇಕಾಗುವ ಸಾಮಗ್ರಿಗಳು
ಜೋಳದ ಅರಳು – 1 ಕಪ್, ಗೋದಿ ಹಿಟ್ಟು – 1 ಕಪ್, ಬೆಲ್ಲದ ಪುಡಿ – 1 ಕಪ್, ತುಪ್ಪ – 2 ರಿಂದ 3 ಚಮಚ, ಅಕ್ಕಿ – 1 ಚಮಚ, ಗಸಗಸೆ – 1/4 ಸ್ಪೂನ್, ಏಲಕ್ಕಿ, ಲವಂಗ, ಚಿಟಿಕೆ ಜಾಯಿಕಾಯಿ ಪುಡಿ, ನೀರು 2 ಕಪ್.
ಮಾಡುವ ವಿಧಾನ
ಮೊದಲು ಒಂದು ಚಮಚದಷ್ಟು ಅಕ್ಕಿಯನ್ನ ಹುರಿಯಿರಿ. ಹದವಾಗಿ ಹುರಿದ ಬಳಿಕ ತೆಗೆದು ಪಕ್ಕಕ್ಕಿಡಿ. ಅದು ತಣ್ಣಗಾಗಲಿ. ಈಗ ಜೋಳದ ಅರಳು, ಹುರಿದಿಟ್ಟ ಅಕ್ಕಿ ಸೇರಿಸಿ ಮಿಕ್ಸರ್ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಮತ್ತೆ ಗೋಧಿ ಹಿಟ್ಟು, ತುಪ್ಪ ಸೇರಿಸಿ ಚೆನ್ನಾಗಿ ಹುರಿಯಿರಿ. ಚೆನ್ನಾಗಿ ಘಮಲು ಬರುತ್ತೆ. ಈಗ ಸ್ವಲ್ಪ ನೀರು ಕಾಯಿಸಿ, ಆ ನೀರಿಗೆ ಬೆಲ್ಲದ ಪುಡಿ ಹಾಕಿ ಬೆಲ್ಲ ಕರಗಿಸಿ. ಹುರಿದ ಅರಳು ಮತ್ತು ಅಕ್ಕಿ ಹಿಟ್ಟಿನ ಮಿಶ್ರಣ ಹಾಕಿ ಚೆನ್ನಾಗಿ ತಿರುವಿ.
ಸ್ವಲ್ಪ ಗಟ್ಟಿಯಾಗುತ್ತಾ ಬಂದ ಹಾಗೆ ಇದು ತಳಬಿಟ್ಟು ಮೇಲಕ್ಕೆ ಏಳತೊಡಗುತ್ತದೆ. ಆಗ ಸ್ಟೌ ಆಫ್ ಮಾಡಿ. ಇನ್ನೊಂದು ಕಡೆ ಏಲಕ್ಕಿ, ಲವಂಗ ಮತ್ತು ಗಸಗಸೆ, ಜಾಯಿಕಾಯಿ ಎಲ್ಲ ಸೇರಿಸಿ ಪುಡಿ ಮಾಡಿ ಹಾಕಿ. ಇದನ್ನ ರೆಡಿ ಆಗಿರುವ ಹಿಟ್ಟಿಗೆ ಸೇರಿಸಿ, ಇನ್ನೊಮ್ಮೆ ಬೆರೆಸಿ. ಈಗ ಕೈಗೆ ತುಪ್ಪ ಹಚ್ಚಿ ಬಟ್ಟಲಿನ ಆಕಾರ ಕೊಟ್ಟು ಅಳ್ಳಿಟ್ಟು ಮಾಡಿ. ತಿನ್ನಲು ಬಹಳ ರುಚಿ. ನಾಗರ ಪಂಚಮಿ ಹಬ್ಬದ ದಿನ ಅಳ್ಳಿಟ್ಟು ಸೇವೆ ಬಹಳ ವಿಶೇಷ. ಈ ಅಳ್ಳಿಟ್ಟು ಬಿಸಿ ಬಿಸಿ ತಿನ್ನೋದಕ್ಕೆ ಬಹಳ ರುಚಿ.
ಅರಿಶಿನ ಎಲೆ ಕಡುಬು
ಇದು ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಬಹಳ ಜನಪ್ರಿಯವಾದ ಅಡುಗೆ. ಅದರಲ್ಲೂ ನಾಗರಪಂಚಮಿ ಹಬ್ಬದಂದು ವಿಶೇಷವಾಗಿ ಈ ಖಾದ್ಯಗಳನ್ನ ಮಾಡೇ ಮಾಡುತ್ತಾರೆ. ಅರಶಿನದ ಘಮದೊಂದಿಗೆ ಬಾಯಿಗೆ ಸಖತ್ ರುಚಿ ಅನಿಸೋ ಈ ತಿಂಡಿಯನ್ನು ಬೆಳಗಿನ ಉಪಹಾರಕ್ಕೆ, ಸಂಜೆಯ ತಿಂಡಿಗೆ, ಕೆಲವೊಮ್ಮೆ ರಾತ್ರಿಯ ಊಟದ ಬದಲಿಗೆ ಬಳಸೋದೂ ಇದೆ. ಅರಿಶಿನ ಎಲೆಯ ಸತ್ವವನ್ನು ಹೀರಿಕೊಂಡು ತಯಾರಾಗುವ ಈ ಕಡುಬು ಆರೋಗ್ಯಕ್ಕೂ ಬಹಳ ಒಳ್ಳೆಯದು. ತಯಾರಿಕೆ ಸ್ವಲ್ಪ ಹೆಚ್ಚು ಹೊತ್ತು ತೆಗೆದುಕೊಂಡರೂ, ಆರೋಗ್ಯಕರವಾದ ಸಾಂಪ್ರದಾಯಿಕ ಅಡುಗೆಯೊಂದನ್ನು ಮಾಡಿ ತಿನ್ನುವ ಮಜವೇ ಬೇರೆ.
ಬೇಕಾಗುವ ಸಾಮಗ್ರಿಗಳು
ಕಪ್ ಅಕ್ಕಿ ಹಿಟ್ಟು, 1.5 – 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿರುತ್ತದೆ), 1 ಕಪ್ ತುರಿದ ತೆಂಗಿನಕಾಯಿ, 1/2 ಕಪ್ ಪುಡಿ ಮಾಡಿದ ಬೆಲ್ಲ, 2 ಚಮಚ ತುಪ್ಪ, ಒಂದು ದೊಡ್ಡ ಚಿಟಿಕೆ ಏಲಕ್ಕಿ, 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ), 12 ಅರಿಶಿನ ಎಲೆಗಳು.
ಮಾಡುವ ವಿಧಾನ
ಎಲೆ ಕಡುಬು ಮಾಡಲು ಮೊದಲು ಅಕ್ಕಿ ನೆನೆಸಬೇಕು. ಹಿಂದಿನ ದಿನ ರಾತ್ರಿಯೇ ಅಕ್ಕಿ ನೆನೆಹಾಕಿದರೆ ಒಳ್ಳೆಯದು. ದೋಸೆ ಅಕ್ಕಿಯಾದರೆ ಮೂರು ಗಂಟೆ ನೆನೆದರೂ ಸಾಕು. ಆದರೆ ಮಂಗಳೂರು ರೈಸ್ನಲ್ಲಿ ಈ ತಿಂಡಿ ತಯಾರಿಸೋದಾದರೆ ಹಿಂದಿನ ರಾತ್ರಿ ನೆನೆಸಿಡೋದು ಕಡ್ಡಾಯ.
ನೆನೆಸಿಟ್ಟ ಅಕ್ಕಿಯನ್ನು ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಕೊನೆಯಲ್ಲಿ ಉಪ್ಪು ಹಾಕಿ ಮತ್ತೊಮ್ಮೆ ರುಬ್ಬಿ. ಇದಕ್ಕೆ ಹೆಚ್ಚು ನೀರು ಹಾಕಬಾರದು. ಆದರೆ ನುಣ್ಣಗೆ ರುಬ್ಬಬೇಕು. ಈಗ ಬೌಲ್ನಲ್ಲಿ ತೆಗೆದಿಟ್ಟ ಬೆಲ್ಲವನ್ನು ಹಾಕಿ. ಬೆಲ್ಲದ ಪುಡಿ ಇದ್ದರೆ ಒಳ್ಳೆಯದು. ಇಲ್ಲವಾದರೆ ಬೆಲ್ಲ ತುರಿದು ಹಾಕಿದರೂ ನಡೆಯುತ್ತೆ. ಹೀಗೆ ತುರಿದ ಬೆಲ್ಲಕ್ಕೆ ಅದಕ್ಕೆ 1 ಕಪ್ ಕಾಯಿತುರಿ ಸೇರಿಸಿ ಮಿಕ್ಸ್ ಮಾಡಬೇಕು.