ಸಮಗ್ರ ನ್ಯೂಸ್: ತುಳುನಾಡಿನಲ್ಲಿ ವಿಶಿಷ್ಟವಾಗಿ ಆಚರಿಸಲಾಗುವ ನಾಗರ ಪಂಚಮಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಜೈ ತುಳುನಾಡ್ ಸಂಘಟನೆ ವತಿಯಿಂದ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ತುಳುನಾಡು “ದೈವಸೃಷ್ಟಿ ನಾಗದೃಷ್ಟಿ’ ಎಂಬ ಪ್ರತೀತಿ ಹೊಂದಿದೆ. ಇಲ್ಲಿ ದೈವಾರಾಧನೆಯಂತೆ ನಾಗರಾಧನೆಯೂ ತುಂಬಾ ಪ್ರಾಮುಖ್ಯ ಪಡೆದಿದೆ. ಕುಟುಂಬದ ಹಿರಿಯರು-ಕಿರಿಯರು ಸೇರಿ ಮೂಲಸ್ಥಳಕ್ಕೆ ಹೋಗಿ ನಾಗರಪಂಚಮಿ ಆಚರಿಸುವುದು ತುಳುನಾಡಿನ ವೈಶಿಷ್ಟ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಮತ್ತು ಶಾಲೆ-ಕಾಲೇಜು, ಕಚೇರಿಗಳಿಗೆ ರಜೆ ಇಲ್ಲದ ಕಾರಣ ಯುವಪೀಳಿಗೆ ಈ ಎಲ್ಲವುಗಳಿಂದ ದೂರ ಉಳಿದು, ತಮ್ಮ ಮೂಲ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಆದ್ದರಿಂದ ನಾಗರಪಂಚಮಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರಿಗೂ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿದ ಶಾಸಕರು ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಬುಶೇಖರ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರಿಗೆ ತುಳು ಲಿಪಿಯಲ್ಲಿ ಬರೆದ ನಾಮಫಲಕ ನೀಡಲಾಯಿತು.