ಸಮಗ್ರ ನ್ಯೂಸ್: ಬಾಳೂರಿನಿಂದ ಕೊಟ್ಟಿಗೆಹಾರಕ್ಕೆ ಬರುವ ರಾಜ್ಯ ಹೆದ್ದಾರಿಯ ರಸ್ತೆಯಲ್ಲಿ ಬೃಹತ್ ಕಂದಕ ನಿರ್ಮಾಣವಾಗಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷವೂ ಮಹಾಮನೆ ಎಸ್ಟೇಟ್ ಸಮೀಪದ ರಸ್ತೆಯಲ್ಲಿ ಬೃಹತ್ ಕಂದಕ ನಿರ್ಮಾಣವಾಗುತ್ತಿದ್ದು, ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಘನ ವಾಹನ ಸವಾರರಿಗೆ ವಾಹನ ಚಲಾಯಿಸಲು ಈ ಕಂದಕ ಅಡ್ಡಿಯಾಗುತ್ತಿದೆ. ಇದು ಅಪಾಯಕ್ಕೂ ಕಾರಣವಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಬರುವುದರಿಂದ ಈ ಜಾಗದಲ್ಲಿ ಹಿಂದೆ ಮೋರಿ ಅಥವಾ ಅಡಿಯಲ್ಲಿ ಜಲ ಕೀಳುವ ಸ್ಥಳವಾಗಿದ್ದು ಹೊಸ ಡಾಂಬರೀಕರಣ ಮಾಡುವಾಗ ಈ ಕಂದಕವನ್ನು ಹಾಗೆಯೇ ಮುಚ್ಚಿದ್ದರು. ಮಳೆಗಾಲದ ಸಮಯವಾದ್ದರಿಂದ ಮತ್ತೆ ತೆರೆದುಕೊಂಡು ಅಪಾಯಕ್ಕೆ ಅನುವುಮಾಡಿ ಕೊಡುತ್ತಿದೆ. ರಸ್ತೆಯ ಆಸುಪಾಸಿನಲ್ಲಿ ಗಿಡಗಂಟಿಗಳು ಬೆಳೆದಿದ್ದು ಮುಂದೆ ಬರುವ ವಾಹನಗಳಿಗೆ ರಸ್ತೆಯು ಕಾಣದೇ ಅಪಾಯದ ಸ್ಥಿತಿ ಉಂಟಾಗಿದೆ.
ವಾಹನಗಳು ವೇಗವಾಗಿ ಬಂದಾಗ ಸೈಡ್ ಕೊಡಲು ಹೋಗುವಾಗ ಕಂದಕಕ್ಕೆ ಬಿದ್ದು ಅವಘಡ ಸಂಭವಿಸುವ ಮೊದಲು ಸಂಬಂಧಿಸಿದ ಲೋಕೋಪಯೋಗಿ ಅಧಿಕಾರಿಗಳು ರಾಜ್ಯ ಹೆದ್ದಾರಿಯ ಕೊಟ್ಟಿಗೆಹಾರ ಬಾಳೂರು ನಡುವಿನಲ್ಲಿ ಇರುವ ರಸ್ತೆಯ ಕಂದಕವನ್ನು ಮುಚ್ಚಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.