ಸಮಗ್ರ ನ್ಯೂಸ್: ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ನ ಎನ್.ಎಸ್.ಎಸ್. ಹಿರಿಯ ವಿದ್ಯಾರ್ಥಿಗಳ ಸಂಘ ಎನ್.ಎಸ್.ಎಸ್. ಸೇವಾಸಂಘದ ಟ್ರಸ್ಟ್ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆಯು ಸುಳ್ಯದ ಜ್ಯೋತಿ ವೃತ್ತ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸೇವಾ ಸಂಘದ ಗೌರವಾದ್ಯಕ್ಷ ಬಾಲಕೃಷ್ಣ ಬೊಳ್ಳೂರು ಧ್ವಜಾರೋಹಣ ನೆರವೇರಿಸಿ “ಮಕ್ಕಳಿಗೆ ಸ್ವಾತಂತ್ರ್ಯದ ಮಹತ್ವ, ದೇಶಪ್ರೇಮ, ಸಂಸ್ಕಾರ ಇತ್ಯಾದಿ ವಿಚಾರಗಳನ್ನು ಮನೆಯಿಂದಲೇ ಕಲಿಸುವಂತಾಗಬೇಕು” ಎಂದರು.
ಸೇವಾಸಂಘದ ಸಲಹಾ ಸಮಿತಿಯ ಸದಸ್ಯೆ ಡಾ.ಅನುರಾಧಾ ಕುರುಂಜಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ “ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ ನಮ್ಮ ದೇಶವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ. ಒಂದು ಕಡೆ ದೇಶ ಸ್ವತಂತ್ರಗೊಂಡ ಸಂಭ್ರಮದಲ್ಲಿ ನಾವಿದ್ದರೂ ಇನ್ನೊಂದು ಕಡೆ ಭ್ರಷ್ಟಾಚಾರ, ಭಯೋತ್ಪಾದನೆ, ಅತ್ಯಾಚಾರ, ಕೊಲೆ, ದರೋಡೆ ಸುಲಿಗೆಗಳು ತಾಂಡವವಾಡುತ್ತಿವೆ. ಮತ್ತೊಂದೆಡೆ ಮೌಲ್ಯಗಳ ಕುಸಿತ ದೇಶವನ್ನು ತಲ್ಲಣಗೊಳಿಸುತ್ತಿದೆ. ಹಾಗಾಗಿ ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪಾಲಿಸಿದಾಗ ಸ್ವಸ್ಧ ಹಾಗೂ ಬಲಿಷ್ಠ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದರು. ಸೇವಾಸಂಘದ ಗೌರವ ಸಲಹೆಗಾರ ಚಂದ್ರಶೇಖರ ಬಿಳಿನೆಲೆ ಮಾತನಾಡಿ. “ದೇಶಭಕ್ತಿ ಬೆಳೆಸಿಕೊಳ್ಳುವುದರ ಜೊತೆಗೆ ದೇಶದ ಗೌರವದ ಸಂಖೇತಗಳಾದ ರಾಷ್ಟ್ರಗೀತೆ, ರಾಷ್ಟ್ರ ಧ್ವಜ, ರಾಷ್ಟ್ರ ಲಾಂಛನಗಳಿಗೆ ಗೌರವ ನೀಡಬೇಕು ಎಂದರು.
ಈ ಸಂಧರ್ಭದಲ್ಲಿ ಗೌರವ ಸಲಹೆಗಾರ ಪಾಲಚಂದ್ರ ವೈ.ವಿ., ಅಂಗನವಾಡಿ ಶಿಕ್ಷಕಿ ಚಂದ್ರಾವತಿ, ಹೃತ್ವಿಕ್ ಕುದ್ಕುಳಿ, ಅಂಗನವಾಡಿ ಪುಟಾಣಿಗಳು, ಹಾಗೂ ಪೋಷಕರು ಉಪಸ್ಥಿತರಿದ್ದರು. ಸೇವಾಸಂಘದ ಸದಸ್ಯ ಹೇಮನಾಥ್ ಸ್ವಾಗತಿಸಿ, ವಿಶ್ವಕಿರಣ್ ಕಾರ್ಯಕ್ರಮ ನಿರೂಪಿಸಿ, ಆಕಾಶ್ ಕುದ್ಕುಳಿ ವಂದಿಸಿದರು.