ಸಮಗ್ರ ನ್ಯೂಸ್: 11ವರ್ಷಗಳ ಹಿಂದೆ ಧರ್ಮಸ್ಥಳದ ಮಣ್ಣಸಂಕದಲ್ಲಿ ಅಮಾನುಷವಾಗಿ ಹತ್ಯೆಗೊಳಗಾದ ಸೌಜನ್ಯಳ ಸಾವಿನ ನ್ಯಾಯಕ್ಕಾಗಿ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರದಿಂದ ಬೃಹತ್ ಪ್ರತಿಭಟನಾ ಜಾಥಾ ಹಾಗೂ ಸಭೆ ನಡೆಯಿತು.
ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅರುಣ್ ಪುತ್ತಿಲ, ”ಸರಕಾರ ಉದಾಸೀನ ಮಾಡದೇ ಸೌಜನ್ಯಳಿಗೆ ನ್ಯಾಯ ಒದಗಿಸಿ ಕೊಡಬೇಕು. ಪ್ರಕರಣವನ್ನು ಬಳಸಿಕೊಂಡು ಸರಕಾರ ತನ್ನ ಬೇಳೆ ಬೇಯಿಸಲು ನೋಡಿದರೇ ಸೌಜನ್ಯಳ ಹೆಸರಿನಲ್ಲಿ ಸರಕಾರ ಪತನವಾಗುತ್ತದೆ” ಎಂದು ಹೇಳಿದರು.
ಪುತ್ತಿಲ ಪರಿವಾರ ಬೃಹತ್ ಪ್ರತಿಭಟನಾ ಜಾಥ ಹಮ್ಮಿ ಕೊಂಡಿತ್ತು. ಪುತ್ತೂರಿನ ದರ್ಭೆ ವೃತ್ತದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಪುತ್ತೂರು ಬಸ್ಸು ನಿಲ್ದಾಣದ ಬಳಿಯ ವೃತ್ತದಲ್ಲಿ ಜಾಥ ಸಮಾವೇಶಗೊಂಡಿತ್ತು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
“ 10 ವರ್ಷಗಳ ಹಿಂದೆ ಅತ್ಯಾಚಾರವಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಳ ಸಾವಿಗೆ ನ್ಯಾಯವನ್ನು ನಾವು ಒದಗಿಸಿ ಕೊಟ್ಟೆ ಕೊಡುತ್ತೇವೆ ಹಾಗೂ ಕೃತ್ಯ ಎಸಗಿದ ಪಾತಕಿಗಳಿಗೆ ಕಠಿಣ ಶಿಕ್ಷೆಯನ್ನು ಕೊಡಿಸಿಯೇ ತೀರುತ್ತೇವೆ ಎಂದು ಅವರು ಈ ವೇಳೆ ತಿಳಿಸಿದರು.
ಸಭೆಯ ಬಳಿಕ ಪುತ್ತಿಲ ಪರಿವಾರದ ಮುಖಂಡರು ಪುತ್ತೂರು ಮಿನಿ ವಿಧಾನ ಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.