ಸಮಗ್ರ ನ್ಯೂಸ್: ಕಳೆದ ಮೂರು ತಿಂಗಳಿನಿಂದ ರಾಕೆಟ್ ವೇಗದಲ್ಲಿ ಬೆಲೆ ಏರಿಕೆಯಾಗಿದ್ದ ಟೊಮ್ಯಾಟೊ ಬೆಲೆ ಇದೀಗ ದಿಢೀರ್ ಕುಸಿಯುತ್ತಿದ್ದಂತೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಣ್ಣಲ್ಲಿ ನೀರು ಬರಿಸುತ್ತಿದೆ. ಟೊಮ್ಯಾಟೊ ಬೆಲೆ ಇಳಿಮುಖವಾಗುತ್ತಿದ್ದಂತೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಗ್ರಾಹಕರಿಗೆ ಇದೀಗ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ.
ಮೂಲಗಳ ಪ್ರಕಾರ ದೇಶದ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಮತ್ತಿತರ ಕಡೆ ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವುದರಿಂದ ಈರುಳ್ಳಿ ಬೆಳೆಯು ಬಹುತೇಕ ಹಾನಿಯಾಗಿದೆ. ಪರಿಣಾಮ ಈರುಳ್ಳಿ ಬೆಳೆದವರು ಬರುವ ದಿನಗಳಲ್ಲಿ ದುಪ್ಪಟ್ಟು ದರ ಸಿಗಬಹುದು ಎಂಬ ಆಸೆಯಿಂದ ಕೃತಕ ಅಭಾವವನ್ನು ಸೃಷ್ಟಿಸುತ್ತಿದ್ದಾರೆ.
200 ರೂ. ಗಡಿ ದಾಟಿ ಗ್ರಾಹಕರ ಆತಂಕಕ್ಕೆ ಕಾರಣವಾಗಿದ್ದ ಟೊಮೆಟೋ ಬೆಲೆ ಈಗ ಏಕಾಏಕಿ ಕುಸಿದಿದೆ. ಸದ್ಯ ಕೆ.ಜಿ ಟೊಮೆಟೋ ಬೆಲೆ 30-40ರೂ.ಗೆ ಕುಸಿತ ಕಂಡಿದೆ. ಪ್ರತಿ ಕೆಜಿಗೆ 20-25 ರೂಪಾಯಿ ದರವಿದ್ದ ಈರುಳ್ಳಿ ಈಗ 30-35 ರೂಪಾಯಿ ತಲುಪಿದೆ. ಆಗಸ್ಟ್ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನಷ್ಟು ಹೆಚ್ಚಳ ಕಂಡು, ಸೆಪ್ಟೆಂಬರ್ ತಿಂಗಳಲ್ಲಿ 70-80 ರೂಪಾಯಿವರೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.