ಸಮಗ್ರ ನ್ಯೂಸ್: ಅತ್ಯಾಚಾರ, ಗ್ಯಾಂಗ್ ರೇಪ್ ನಡುಸುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕಾನೂನು ಕ್ರಮ ಜಾರಿಗೆ ತರಲು ಮುಂದಾಗಿದ್ದು, ಅಪರಾಧ ಕಾನೂನುಗಳಲ್ಲಿ ತಿದ್ದುಪಡಿ ಮಾಡಿದೆ.
1860ರ ಭಾರತೀಯ ದಂಡ ಸಂಹಿತೆ (IPC) ಬದಲು ಭಾರತೀಯ ನ್ಯಾಯ ಸಂಹಿತೆ, ಕ್ರಿಮಿನಲ್ ಪ್ರೊಸಿಸರ್ ಕೋಡ್ (CrPC) ಬದಲಿಗೆ ಭಾರತೀಯ ನಾಗರಿಕ ಸುರಕ್ಷತೆ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯಧಾರ ಕಾಯ್ದೆ (ಎವಿಡೆನ್ಸ್ ಆಕ್ಟ್) ಬದಲಿಗೆ ಭಾರತೀಯ ಸಾಕ್ಷ್ಮ್ಯ ಕಾಯ್ದೆ ಎಂಬ ಹೊಸ ಕಾನೂನುಗಳನ್ನು ಪರಿಚಯಿಸುತ್ತಿದೆ.
ಲೋಕಸಭೆಯಲ್ಲಿ ಅಪರಾಧ ಕಾನೂನುಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದ್ದು, ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದರೆ ಗಲ್ಲುಶಿಕ್ಷೆ ವಿಧಿಸಲಾಗುವುದು. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ದೇಶದಲ್ಲಿ ಇನ್ಮುಂದೆ ಅತ್ಯಾಚಾರ, ಅಪ್ರಾಪ್ತರ ಮೇಲೆ ದೌರ್ಜನ್ಯಗಳನ್ನು ನಡೆಸುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ಜಾರಿಗೆ ಬರಲಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದರೆ ಗಲ್ಲುಶಿಕ್ಷೆ, ಗ್ಯಾಂಗ್ ರೇಪ್ ಪ್ರಕರಣಕ್ಕೆ ಅಪರಾಧಿಗಳಿಗೆ 20 ವರ್ಷ ಜೀವಾವಧಿ ಶಿಕ್ಷೆ, ಗುಂಪುಗೂಡಿ ಹತ್ಯೆ ಪ್ರಕರಣಕ್ಕೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಅಲ್ಲದೇ ಮದುವೆ, ಉದ್ಯೋಗ, ಉನ್ನತ ಸ್ಥಾನ ನೀಡುವುದಾಗಿ ನಂಬಿಸಿ ಮೋಸ ಮಾಡುವವರಿಗೆ ಹಾಗೂ ಸುಳ್ಳು ಭರವಸೆ ನೀಡಿ ಅನೈತಿಕ ಚಟುವಟಿಕೆ ನಡೆಸುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.