ಸಮಗ್ರ ನ್ಯೂಸ್: ಕಳೆದ ಬಾರಿಯ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಿಜೆಪಿ ಸೋಲಿಗೆ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ರಾಜಕಾರಣವೇ ಕಾರಣವೆಂದು ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಿಎಂ ಡಿ.ವಿ ಸದಾನಂದ ಗೌಡರ ಮೇಲೆ ಆರೋಪಿಸಿ ಅವರ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಯುವಕರ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆಸಲಾಗಿತ್ತು. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಇದರ ಹಿಂದಿನ ಕಾಣದ ಕೈಗಳ ಹೆಸರು ವಾರದೊಳಗೆ ಬಹಿರಂಗ ಪಡಿಸುತ್ತೇನೆ ಎಂದಿರುವ ಶಾಸಕ ಅಶೋಕ್ ರೈ ಸೈಲೆಂಟ್ ಆಗಿರುವುದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಿ ಬಿಜೆಪಿಯ ಆಶಾ ತಿಮ್ಮಪ್ಪ ಗೌಡರು ಸೋಲಲು ಕಾರಣವಾಗಿದ್ದರು. ಆದರೆ ಕಾರ್ಯಕರ್ತರ ಆಕಾಂಕ್ಷೆಯ ಪುತ್ತಿಲರಿಗೆ ಟಿಕೆಟ್ ತಪ್ಪಿಸಲು ಮಾಜಿ ಸಿಎಂ ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಾರಣ ಎಂಬುದು ಕಾರ್ಯಕರ್ತರ ನಿಲುವಾಗಿತ್ತು. ಕಾಂಗ್ರೆಸ್ ನ ಅಶೋಕ್ ರೈ ಗೆಲ್ಲಲು ಇವರಿಬ್ಬರೇ ಕಾರಣ ಎಂದು ಭಾವಿಸಿದ್ದ ಕೆಲವು ಕಾರ್ಯಕರ್ತರು ಇವರಿಬ್ಬರ ಫೋಟೋಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಾದ ಬಳಿಕ ಚಪ್ಪಲಿ ಹಾರ ಹಾಕಿರುವ ಆರೋಪದ ಮೇಲೆ ಕೆಲವು ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರನ್ನು ಪೊಲೀಸರು ದೂರು ದಾಖಲಿಸಿಕೊಂಡು ಬಂಧಿಸಿದ್ದರು. ಅಲ್ಲದೇ ಬಂಧನಕ್ಕೊಳಗಾದ ಕಾರ್ಯಕರ್ತರ ಮೇಲೆ ತನಿಖೆ ನೆಪದಲ್ಲಿ ಹಲ್ಲೆ ನಡೆಸಿ ಒಬ್ಬ ಕಾರ್ಯಕರ್ತ ತನ್ನ ಶ್ರವಣ ಸಾಮರ್ಥ ಕಳೆದುಕೊಂಡಿದ್ದ. ಇನ್ನೂ ಕೆಲವರು ತೀವ್ರವಾಗಿ ಜಖಂಗೊಂಡಿದ್ದರು.
ಪೊಲೀಸರ ಈ ನಡೆ ಪುತ್ತೂರಿನಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಬಿಜೆಪಿ, ಕಾಂಗ್ರೆಸ್ ನಡುವೆ ತಿಕ್ಕಾಟಕ್ಕೂ ಕಾರಣವಾಗಿತ್ತು. ಇತ್ತ ಸರ್ಕಾರ ಅಸ್ತಿತ್ವಕ್ಕೆ ಬಂದಿರದ ಹಿನ್ನಲೆಯಲ್ಲಿ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದ ಬಿಜೆಪಿಯ ವಿರುದ್ದ ಕಿಡಿಕಾರಿದ್ದ ಶಾಸಕ ಅಶೋಕ್ ಕುಮಾರ್ ರೈ ವಾರದೊಳಗೆ ಹಲ್ಲೆ ನಡೆಸಲು ಪೊಲೀಸರಿಗೆ ಒತ್ತಡ ಹೇರಿದವರ ಮಾಹಿತಿ ಬಹಿರಂಗಗೊಳಿಸುವುದಾಗಿ ಹೇಳಿಕೆ ನೀಡಿದ್ದರು.
ಅದಾದ ಬಳಿಕ ಪ್ರಕರಣ ತೀವ್ರತೆ ಕಳೆದುಕೊಂಡು ಇದೀಗ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಕೆಲವು ಬಿಜೆಪಿ ಕಾರ್ಯಕರ್ತರು ಕೋರ್ಟ್, ಕೇಸ್ ಅಂತ ಅಲೆದಾಡ್ತಾ ಇದ್ದಾರೆ. ಪ್ರಕರಣದ ರೂವಾರಿಗಳ ಹೆಸರು ಬಹಿರಂಗ ಪಡಿಸುತ್ತೇನೆಂದ ಶಾಸಕ ಅಶೋಕ್ ಕುಮಾರ್ ರೈ ಮೂರು ತಿಂಗಳಾದರೂ ಸೈಲೆಂಟಾಗಿದ್ದಾರೆ. ಶಾಸಕರ ಈ ಮೌನ ಮತ್ತೆ ‘ಹೊಂದಾಣಿಕೆ’ ಯ ಆರೋಪಕ್ಕೆ ಪುಷ್ಟಿ ನೀಡುತ್ತಿದೆ.