ಸಮಗ್ರ ನ್ಯೂಸ್: ಮಹಿಳೆಯನ್ನು ತನ್ನ ಕಾರಲ್ಲಿ ಕರೆದೊಯ್ಯುತ್ತಿದ್ದ ಎಂಬ ಕಾರಣಕ್ಕೆ ಕಾರಲ್ಲಿ ಹೋಗುತ್ತಿದ್ದ ಅನ್ಯಕೋಮಿನ ವ್ಯಕ್ತಿಗೆ ಕೆಲ ಯುವಕರು ತಡೆದು ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನದಿಂದ ವರದಿಯಾಗಿದೆ. ಸದ್ಯ ಸುಳ್ಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ತಾಲೂಕಿನ ಅರಂತೋಡು ಕಡೆ ಟ್ಯಾಪಿಂಗ್ ಕೆಲಸ ವಹಿಸಿಕೊಂಡು ಮಾಡುತ್ತಿದ್ದ ಅನ್ಯಕೋಮಿನ ವ್ಯಕ್ತಿ ಮಹಿಳೆಯೊಬ್ಬರನ್ನು ತನ್ನ ಕಾರಲ್ಲಿ ಸುತ್ತಾಡಿಸುತ್ತಿದ್ದಾನೆ ಎಂಬ ಅನುಮಾನದಿಂದ ಕೆಲ ಯುವಕರು ಕಾರನ್ನು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ. ಇಂದು ಸಂಜೆ ಆತ ಮಹಿಳೆಯನ್ನು ಸುಳ್ಯಕ್ಕೆ ಬಿಟ್ಟು ತೊಡಿಕಾನ ಕಡೆಗೆ ಬರುತ್ತಿದ್ದಾನೆಂಬ ಮಾಹಿತಿ ದೊರೆತ ಸಂಘಟನೆಯ ಕೆಲವು ಯುವಕರು ಅಡ್ಯಡ್ಕ ಸಮೀಪ ಕಾರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದರೆಂದೂ, ಸುಳ್ಯದಿಂದ ಬಂದ ಸಂಘಟನೆಯ ಇಬ್ಬರು ಯುವಕರು ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದರೆಂದೂ ತಿಳಿದುಬಂದಿದೆ.
ಹಲ್ಲೆಯಿಂದ ಗಾಯಗೊಂಡ ವ್ಯಕ್ತಿ ಸುಳ್ಯಕ್ಕೆ ಬಂದು ದೂರು ನೀಡಿದ್ದು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಕೆಲವು ನಾಯಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.