ಸಮಗ್ರ ನ್ಯೂಸ್: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದ ಕರ್ನಾಟಕ ಕರಾವಳಿ ಹಾಗೆಯೇ ಕೇರಳದ ಕನ್ನಡ ಕರಾವಳಿಯಾದ ಕಾಸರಗೋಡು ಜಿಲ್ಲೆ ಸೇರಿದಂತೆ ಕಡಲತೀರದಲ್ಲಿ ಬಿಸಿಲ ಝಳ ಗುರುವಾರವೂ ಜಾಸ್ತಿ ಕಂಡುಬಂದಿದ್ದು, ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ದಕ್ಷಿಣೋತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇತ್ತು.
ಕೆಲವೆಡೆ ಇಡೀ ದಿನ ಮಳೆ ಸುರಿಯಲಿಲ್ಲ. ಆಷಾಢ ಮಾಸದ ಬಿಸಿಲಿಗೆ ರೋಗರುಜಿನಗಳು ಜಾಸ್ತಿಯಾಗುತ್ತವೆ ಎಂಬ ಹೇಳಿಕೆಗೆ ಇಂಬು ನೀಡುವಂತೆ ವೈದ್ಯರ ಬಳಿ ಸಾಲುಗಟ್ಟಲೆ ಜನರು ಕಾಣಸಿಗುತ್ತಿದ್ದರು. ಮಳೆ ಕಣ್ಣಾಮುಚ್ಚಾಲೆಯಾಡುತ್ತಿರುವ ಕಾರಣ, ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆ ರೋಗವಾಹಕಗಳಾಗಿ ಪರಿವರ್ತನೆ ಹೊಂದುತ್ತಿರುವ ಕಾರಣ, ಸಾಂಕ್ರಾಮಿಕ ರೋಗಗಳಲ್ಲೂ ಹೆಚ್ಚಳ ಕಂಡುಬಂದಿದೆ. ವೈರಲ್ ಜ್ವರ ಈಗ ಕರಾವಳಿಯಲ್ಲಿ ಬಿಸಿಲಿನ ತಾಪಕ್ಕೆ ಜಾಸ್ತಿಯಾಗತೊಡಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು ಗರಿಷ್ಠ ತಾಪಮಾನ ಕಂಡುಬಂತು. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಜಾವ ಕೆಲ ಹೊತ್ತು ಮಳೆಯಾಗಿತ್ತು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸಂಜೆ ಮೋಡ ಕವಿದ ವಾತಾವರಣವಿದ್ದು, ಮಿಂಚು ಕಾಣಿಸಿತ್ತು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ವಿಭಾಗವಾದ ಐಎಂಡಿ ಬೆಂಗಳೂರು ಪ್ರಕಟಿಸಿದ ವರದಿಯ ಪ್ರಕಾರ ಇಂದು (ಆಗಸ್ಟ್ 11) ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.