ಸಮಗ್ರ ನ್ಯೂಸ್: ಹನ್ನೊಂದು ವರ್ಷಗಳ ಹಿಂದೆ ಕಾಮುಕರ ಕೈಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಗೌಡ ಪ್ರಕರಣಕ್ಕೆ ಮರುಜೀವ ಬಂದಿದ್ದು, ನ್ಯಾಯಕ್ಕಾಗಿ ಮತ್ತೆ ಹೋರಾಟಗಳು ಉಗ್ರ ರೂಪ ಪಡೆದುಕೊಳ್ಳುತ್ತಿವೆ.
ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡುತ್ತಿರುವ ಈ ಪ್ರಕರಣ ಕರಾವಳಿಯಲ್ಲಿ ಕಿಚ್ಚು ಹಬ್ಬಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳ ಬಗ್ಗೆ ಮರುತನಿಖೆ ನಡೆಸಿ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡುವಂತೆ ಸೌಜನ್ಯ ಹೋರಾಟ ಸಮಿತಿ ಕರಾವಳಿಯ ವಿವಿಧೆಡೆ ಇಂದಿನಿಂದ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದೆ.
ಇಂದು(ಆ.11) ಮಂಗಳೂರಿನ ನೆಹರು ಮೈದಾನದಲ್ಲಿ ಪ್ರತಿಭಟನೆ ಮತ್ತು ಹಕ್ಕೊತ್ತಾಯ ಸಭೆ ನಡೆಯಲಿದೆ. ಆಗಸ್ಟ್ 14ರಂದು ಪುತ್ತೂರಿನಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ, ರಸ್ತೆ ತಡೆ ನಡೆಯಲಿದೆ.
ಆಗಸ್ಟ್ 20 ರಂದು ಹೋರಾಟ ಸಮಿತಿಯಿಂದ ವಿಟ್ಲದಲ್ಲಿ ಪ್ರತಿಭಟನೆ ನಡೆಯಲಿದ್ದು, ಆಗಸ್ಟ್ 20ರಂದು ಮಂಗಳೂರಿನ ಕದ್ರಿ ಮೈದಾನದಲ್ಲಿ ಹೋರಾಟ ನಡೆಯಲಿದೆ.
ಆಗಸ್ಟ್ 22 ರಂದು ತುಮಕೂರು ಜಿಲ್ಲೆಯಲ್ಲಿ ಹಕ್ಕೊತ್ತಾಯ ಮತ್ತು ಹೋರಾಟ ಸಭೆ ನಡೆಯಲಿದ್ದು, ಆಗಸ್ಟ್ 25 ರಂದು ಕುಂದಾಪುರದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.
ಆಗಸ್ಟ್ 28 ರಂದು ದ.ಕ ಜಿಲ್ಲೆಯ ಬೆಳ್ತಂಗಡಿಯಲ್ಲಿ ‘ ಬೆಳ್ತಂಗಡಿ ಚಲೋ’ ಹೋರಾಟ ನಡೆಯಲಿದ್ದು, ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
ಒಟ್ಟಾರೆ ದೌರ್ಜನ್ಯಕ್ಕೆ ಒಳಗಾದ ಸೌಜನ್ಯಳ ನ್ಯಾಯಕ್ಕಾಗಿ ರಾಜ್ಯಾದ್ಯಂತ ಪ್ರತಿಭಟನಾ ಕಾವು ಜೋರಾಗಿದ್ದು, ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.