Ad Widget .

ಟ್ಯೂಷನ್ ಮುಗಿಸಿ ವಾಪಾಸ್ಸಾಗುತ್ತಿದ್ದ ಮಕ್ಕಳ ಮೇಲೆ ಹರಿದ ಗೂಡ್ಸ್ ವಾಹನ| ಇಬ್ಬರು ಸಾವು; ಮೂವರು ಗಂಭೀರ

ಸಮಗ್ರ ನ್ಯೂಸ್: ರಾತ್ರಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಐವರು ಮಕ್ಕಳ ಮೇಲೆ ಟಾಟಾ ಏಸ್ ಗೂಡ್ಸ್‌ ವಾಹನ ಹರಿದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯ ಮಾಗಡಿ ರಸ್ತೆಯ ಗೊಲ್ಲರದೊಡ್ಡಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.

Ad Widget . Ad Widget .

ರೋಹಿನ್ (5) ಮತ್ತು ಶಾಲಿನಿ (8) ಮೃತಪಟ್ಟವರು. ಗಂಭೀರವಾಗಿ ಗಾಯಗೊಂಡಿರುವ ಸುಚಿತ್, ಗೌತಮಿ ಹಾಗೂ ಲೇಖನ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

Ad Widget . Ad Widget .

ಗ್ರಾಮದ ಮನೆಯೊಂದರಲ್ಲಿ ರಾತ್ರಿ 8ರ ಸುಮಾರಿಗೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಮಕ್ಕಳು ರಸ್ತೆ ದಾಟುತ್ತಿದ್ದಾಗ, ಮಾಗಡಿ ಕಡೆಯಿಂದ ವೇಗವಾಗಿ ಬಂದಿರುವ ಗೂಡ್ಸ್ ವಾಹನ ಚಾಲಕ ಮಕ್ಕಳ ಮೇಲೆ ಹರಿದಿದೆ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.

ಸ್ಥಳೀಯರು ಮಕ್ಕಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ರೋಹಿನ್ ಮತ್ತು ಶಾಲಿನಿ ಬದುಕುಳಿಯಲಿಲ್ಲ. ಘಟನೆ ಬಳಿಕ, ಚಾಲಕ ಸ್ವಲ್ಪ ದೂರದಲ್ಲಿ ಗೂಡ್ಸ್ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ಭೇಟಿ ನೀಡಿದರು. ಮುದ್ದು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

Leave a Comment

Your email address will not be published. Required fields are marked *