ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರ ದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಬೆಟ್ಟದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹಕ್ಕೆ ಹೆಗಲು ಕೊಟ್ಟು ಬೆಟ್ಟದಲ್ಲಿ ಇಳಿಸುವ ಮೂಲಕ ಪಿಎಸೈ ಪ್ರದೀಪ್ ಪೂಜಾರಿ ಹಾಗೂ ಸಿಬ್ಬಂದಿ ,ಸೈನಿಕರು ಮಾನವೀಯತೆ ಮೆರೆದಿದ್ದಾರೆ.

ಜಾಲಾರಿ ದೇವಾಲಯದ ಬೆಟ್ಟದ ಬಳಿ ಸೈನಿಕರು ಕ್ಯಾಂಪ್ ಹಾಕಿ ಕೂಂಬಿಂಗ್ ನಡೆಸುತ್ತಿದ್ದಾಗ ಬೆಟ್ಟದಲ್ಲಿ ಸೈನಿಕರ ಕಣ್ಣಿಗೆ ಶವ ಕಾಣಿಸಿದೆ. ಈ ವಿಷಯವನ್ನು ಚಿಕ್ಕಬಳ್ಳಾಪುರ ಎಸ್‌ಪಿಯವರ ಗಮನಕ್ಕೆ ಸೈನಿಕರು ತಂದಿದ್ದಾರೆ. ಸುಮಾರು 50 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು ಗುರುತು ಪತ್ತೆಯಾಗಿಲ್ಲ.
ಬಳಿಕ ಹತ್ತಾರು ಕಿಲೋಮೀಟರ್ ಎತ್ತರದ ಬೆಟ್ಟದ ಸಾಲು ಇದ್ದು,5-6 ಕಿಲೋಮೀಟರ್ ದೂರದಲ್ಲಿ ಪೊದೆಯ ನಡುವೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ತೆರಳಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸೈ ಹಾಗೂ ಸಿಬ್ಬಂದಿ,ಸೈನಿಕರು ಮೃತದೇಹ ಹೊತ್ತು ಕೆಳಗೆ ತರಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್‌ಐ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕೆಂಗುಡೇಲು ನಿವಾಸಿ ಪ್ರದೀಪ್ ಪೂಜಾರಿ ಹಾಗೂ ಅವರ ಸಿಬ್ಬಂದಿ ಸೇರಿದಂತೆ-ಸೈನಿಕರು ಚಟ್ಟದ ಮಾದರಿ ತಯಾರು ಮಾಡಿ 5-6 ಕಿಲೋಮೀಟರ್ ದುರ್ಗಮ ಹಾದಿಯಲ್ಲಿ ಸಾಕಷ್ಟು ಹರಸಾಹಸ ಪಟ್ಟು ಮೃತದೇಹವನ್ನು ಕೆಳಗೆ ಹೊತ್ತು ತಂದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.