ಸಮಗ್ರ ನ್ಯೂಸ್: ಕೆಎಂಎಫ್ ನಂದಿನಿ ಹಾಲಿನ ಅರ್ಧ ಲೀಟರ್ ಪ್ಯಾಕೇಟ್‌ನಲ್ಲಿ 450 ಮಿಲೀ ಹಾಲು ನೀಡಲಾಗುತ್ತಿದೆ. ” ಹಾಲಿನ ದರ ಏರಿಕೆ ಜತೆಗೆ ಹಾಲಿನ ಪ್ರಮಾಣವನ್ನು ಕೆಎಂಎಫ್ ತಗ್ಗಿಸಿದೆ ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಶುಕ್ರವಾರ ಸಂಜೆ ಟ್ವೀಟ್ ಮಾಡಿರುವ ಯತ್ನಾಳ್ ಅವರು, ನಂದಿನಿ ಹಾಲಿನ ಪ್ಯಾಕೇಟ್ ಪೋಟೊವನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ ಮುಖಂಡರಿಗೆ ಎಲ್ಲೆಲ್ಲಿ ಹೇಗೇಗೆ ಮೋಸ ಮಾಡುವ ಕಲೆ ಕರಗತವಾಗಿದೆ! ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿದ್ದಲ್ಲದೆ, ಹಾಲಿನ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ! ಹೀಗೂ ಮೋಸ ಮಾಡಬಹುದೆಂದು ಯಾರೂ ಊಹಿಸಲು ಸಾಧ್ಯವಿಲ್ಲ! ಕಾಂಗ್ರೆಸ್ ಕಲೆ! ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಈ ಮೂಲಕ ರಾಜ್ಯ ಸರ್ಕಾರ ಹಾಗೂ ಕೆಎಂಎಫ್ ಅನ್ನು ಪ್ರಶ್ನಿಸಿದ್ದಾರೆ. ಜತೆಗೆ ಕಾಂಗ್ರೆಸ್ ಮುಖಂಡರಿಗೆ ಮೋಸದ ಕಲೆ ಕರಗತವಾಗಿದೆ ಎಂದು ಗುಡುಗಿದ್ದಾರೆ. ಶುಕ್ರವಾರ ಬೆಳಿಗ್ಗೆಯಿಂದ ಈ ನಂದಿನ ಹಾಲಿನ 450 ಎಂಎಲ್ ಪಾಕೇಟ್ ಸಾಕಷ್ಟು ಕಡೆಗಳಲ್ಲಿ ವೈರಲ್ ಆಗುತ್ತಿದೆ. ಕೆಎಂಎಫ್‌ನ ನಡೆಯನ್ನು ಹಲವರು ಖಂಡಿಸುತ್ತಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿರುವಂತೆ ಹಾಲಿನ ಪ್ಯಾಕೆಟ್ ಪ್ರಮಾಣದ 500 ml ಅನ್ನು 450 ml ಗೆ ಇಳಿಸಲಾಗಿದೆ ಎಂಬ ಆರೋಪದ ಹಿನ್ನಲೆಯನ್ನು ಪರಿಶೀಲಿಸಿದಾಗ ಯತ್ನಾಳ್ ಮಾಡಿರುವ ಆರೋಪ ಸುಳ್ಳು ಎಂದು ತಿಳಿದುಬಂದಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಇತ್ತೀಚೆಗೆ ನಂದಿನಿ ಬ್ರಾಂಡ್‌ನಲ್ಲಿ ಮಾರಾಟವಾಗುವ ಪೂರ್ಣ ಕೆನೆ ಹಾಲಿನ ಬೆಲೆಯನ್ನು ಹೆಚ್ಚಿಸಿತ್ತು. 6% ಕೊಬ್ಬು ಮತ್ತು 9% ಘನವಸ್ತುಗಳು-ಕೊಬ್ಬು ಅಲ್ಲದ ಅಥವಾ SNF ಹೊಂದಿರುವ ಈ ಹಾಲು ಹಿಂದೆ ಗ್ರಾಹಕರಿಗೆ ಒಂದು ಲೀಟರ್ (1,000 ಮಿಲಿ) 50 ರೂಪಾಯಿಗೆ ಮತ್ತು ಅರ್ಧ ಲೀಟರ್ (500 ಮಿಲಿ) 24ರೂಗೆ ಮಾರಾಟವಾಗುತ್ತಿತ್ತು. ಆದ್ರೆ ಈಗ ಹಾಲಿನ ಬೆಲೆಯನ್ನು ಬದಲಾಯಿಸದೆ ಹಾಲಿನ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತಿದೆ. 50 ರೂಪಾಯಿ ಬೆಲೆಯ ಒಂದು ಲೀಟರ್ ಹಾಲು ಮತ್ತು 24 ರೂ ಬೆಲೆಯ ಅರ್ಧ ಲೀಟರ್ ಹಾಲನ್ನು ಕ್ರಮವಾಗಿ 900 ಮಿಲಿ ಮತ್ತು 450 ಮಿಲಿ ಪ್ಯಾಕ್‌ಗಳಿಗೆ ಇಳಿಸಲಾಗುತ್ತಿದೆ. ಈ ಮೂಲಕ ಹಾಲಿನ ಕೊರತೆ ನೀಗಿಸಲು ಹೊಸ ಪ್ಲಾನ್ಅನ್ನು ಮಾರ್ಚ್‌ನಿಂದ ಜಾರಿ ಮಾಡಿದೆ ಎಂದು The Indian Express ವರದಿ ಮಾಡಿದೆ. ಈ ತೀರ್ಮಾನವನ್ನು ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲೆ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಮಾಡಿದ ವರದಿಯಲ್ಲಿ ಬಹಿರಂಗಗೊಂಡಿದೆ.
ಅಂದರೆ ರಾಜ್ಯದಲ್ಲಿ ಚುನಾವಣೆ ನಡೆದಿದ್ದು ಮೇ 10, 2023, ಚುನಾವಣಾ ಫಲಿತಾಂಶ 13 ಮೇ 2023ರಂದು ಘೋಷಣೆ ಮಾಡಲಾಗಿತ್ತು ನಂತರ ಮೇ ಕೊನೆಯ ವಾರದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಅಂದರೆ ನಂದಿನಿ ಪಾಶ್ಚೀಕರಿಸಿದ ಹಾಲಿನ ಪ್ರಮಾಣದಲ್ಲಿ ಕಡಿತ ಮಾಡಿದ ಸಂದರ್ಭದಲ್ಲಿ ಇದದ್ದು ಬಿಜೆಪಿ ಸರ್ಕಾರ ಹಾಗೂ ಕೆಎಂಎಫ್ ನ ಅಧ್ಯಕ್ಷರಾಗಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕ್ಕಿಹೋಳಿ ಅಧಿಕಾರದಲ್ಲಿದದ್ದು ಗಮನಾರ್ಹ.