Ad Widget .

ಯಕ್ಷ ಗುರು ವಿಶ್ವ ವಿನೋದ ಬನಾರಿ, ಕುಮಾರ ಸುಬ್ರಹ್ಮಣ್ಯರಿಗೆವನಜ ರಂಗಮನೆ ಪ್ರಶಸ್ತಿ 2022-23

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ವತಿಯಿಂದ
ರಂಗಮನೆಯ ಅಧ್ಯಕ್ಷ ಡಾ|| ಜೀವನ್ ರಾಂ ಸುಳ್ಯರವರ ಮಾತೃಶ್ರೀ ಶ್ರೀಮತಿ ವನಜಾಕ್ಷಿ ಜಯರಾಮ ಇವರ ನೆನಪಿನಲ್ಲಿ ವರ್ಷಂಪ್ರತಿ ಕೊಡಮಾಡುವ ‘ವನಜ ರಂಗಮನೆ ಪ್ರಶಸ್ತಿ’ಗೆ 2022 ನೇ ಸಾಲಿನಲ್ಲಿ ಯಕ್ಷ ಗುರು ಕೆ.ವಿಶ್ವವಿನೋದ ಬನಾರಿ ಹಾಗೂ 2023 ನೇ ಸಾಲಿಗೆ ಹಿಮ್ಮೇಳ ಗುರುಗಳಾದ ವಳಕ್ಕುಂಜ ಕುಮಾರ ಸುಬ್ರಹ್ಮಣ್ಯರನ್ನು ಆಯ್ಕೆ ಮಾಡಲಾಗಿದೆ.

Ad Widget . Ad Widget .

ವಿಶ್ವ ವಿನೋದ ಬನಾರಿ

Ad Widget . Ad Widget .

ಮೇರುವ್ಯಕ್ತಿತ್ವದ ಯಕ್ಷಗುರು ಕಿರಿಕ್ಕಾಡು ವಿಷ್ಣು ಭಟ್ಟ ಮತ್ತು ಶ್ರೀಮತಿ ಪರಮೇಶ್ವರಿ ಅಮ್ಮ ದಂಪತಿಗಳ ಪುತ್ರರಾದ ವಿಶ್ವ ವಿನೋದ ಬನಾರಿಯವರು ಬಾಲ್ಯದಿಂದಲೇ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು.

ಮೂಲತಃ ಕೃಷಿಕರಾಗಿದ್ದರೂ ಕಳೆದ ಅರವತ್ತು ವರ್ಷಗಳಿಂದ ಸಾಹಿತಿಯಾಗಿ, ಯಕ್ಷಗಾನ ಭಾಗವತಿಕೆಯ ಅತ್ಯುತ್ತಮ ಶಿಕ್ಷಕನಾಗಿ, ತಾಳಮದ್ದಳೆಯ ಅರ್ಥಧಾರಿಯಾಗಿ, ಪ್ರಸಂಗ ಕರ್ತೃವಾಗಿ ಅಸಾಧಾರಣ ಸೇವೆ ಸಲ್ಲಿಸಿದವರು. ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳು, ನೂರಾರು ಶಿಷ್ಯಂದಿರನ್ನು ಪಡೆದವರು.
ಶಬರಿಮಲೆ ಅಯ್ಯಪ್ಪ, ತೊಡಿಕಾನ ಕ್ಷೇತ್ರ ಮಹಾತ್ಮೆ, ಮಾಗಧ ವಧೆ, ವೀರರಾಣಿ ಅಬ್ಬಕ್ಕ, ಕಿತ್ತೂರ ರಾಣಿ ಚೆನ್ನಮ್ಮ, ಅಲ್ಲದೆ ತುಳು ಮತ್ತು ಮಲಯಾಳಂನಲ್ಲಿ ಪಂಚವಟಿ ಯಕ್ಷಗಾನ ಜೊತೆಗೆ ಜನಜಾಗೃತಿಗಾಗಿ ಪರಿಸರ ಸಂರಕ್ಷಣೆ, ಕೊರೋನಾ ರಕ್ಕಸ ಮುಂತಾದ ಪ್ರಸಂಗಗಳನ್ನೂ ರಚಿಸಿದ್ದಾರೆ.

ಯಾವುದೇ ಫಲಾಪೇಕ್ಷೆ ಇಲ್ಲದೆ ತನ್ನ ಯಕ್ಷ ಜ್ಞಾನವನ್ನು ಧಾರೆ ಎರೆದ ಇವರ ನಿಸ್ವಾರ್ಥ ಸೇವೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಸಂಪಾಜೆ ಯಕ್ಷೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಸನ್ಮಾನಗಳು ದೊರಕಿವೆ.

ಕುಮಾರ ಸುಬ್ರಹ್ಮಣ್ಯ:
ಯಕ್ಷಗುರು ಕಿರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಮೊಮ್ಮಗನಾಗಿ ಜನಿಸಿದ ಕುಮಾರ ಸುಬ್ರಹ್ಮಣ್ಯರು ವಳಕ್ಕುಂಜ ನಾರಾಯಣ ಭಟ್ ಹಾಗೂ ಶ್ರೀಮತಿ ಭುವನ ಮಾತಾ ದಂಪತಿಗಳ ಮಗನಾಗಿದ್ದಾರೆ.

ಎಳವೆಯಲ್ಲೇ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಮೂಡಿಸಿಕೊಂಡ ಇವರು ಅನೇಕ ಯಕ್ಷಗಾನ ಪ್ರಸಂಗಗಳ ನೂರಾರು ಪಾತ್ರಗಳಿಗೆ ಜೀವ ತುಂಬಿದವರು. ನಂತರದಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ಬನಾರಿ ಶ್ರೀ ಗೋಪಾಲಕೃಷ್ಣ ಸಂಘದಲ್ಲಿ ಚೆಂಡೆ ಮದ್ದಳೆ ಆರಂಭಿಸಿದ ಇವರು ಕೆಲವು ವರ್ಷ ಕೂಡ್ಲು ಮೇಳ, ಕಟೀಲು ಮೇಳಗಳಲ್ಲಿ ಹಿಮ್ಮೇಳ ವಾದಕರಾಗಿ ದುಡಿದು ನಂತರ ಹವ್ಯಾಸಿ ಕ್ಷೇತ್ರವನ್ನು ಪ್ರವೇಶಿಸಿ ಯಕ್ಷರಂಗವನ್ನು ಇನ್ನಷ್ಟು ಶ್ರೀಮಂತಗೊಳಿಸಿದವರು. ಕಳೆದ 45 ವರ್ಷಗಳಿಂದ ಸುಳ್ಯ ಮಡಿಕೇರಿ ಪುತ್ತೂರು ಪಂಜ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಚೆಂಡೆ ಮದ್ದಳೆಯ ಗುರುವಾಗಿ ನೂರಾರು ಹಿಮ್ಮೇಳ ವಾದಕರನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನಕ್ಕಂತೂ ಕುಮಾರ ಸುಬ್ರಹ್ಮಣ್ಯರು ಅನಿವಾರ್ಯ ಎನಿಸುವಷ್ಟು ಬೆಳೆದು ನಿಂತಿದ್ದಾರೆ.

ಇವರ ಕಲಾ ಸೇವೆಗೆ ಯಕ್ಷ ಕೂಟ ಸಂಪಾಜೆ ಸನ್ಮಾನ, ಜಿಲ್ಲಾ ಸಾಹಿತ್ಯ ಸಮ್ಮೇಳನ ಸನ್ಮಾನ, ಪಂಜ ಜೇಸಿ ಸನ್ಮಾನ, ಯುವಜನ ಮೇಳ ರಾಜ್ಯ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನಗಳು ದೊರಕಿವೆ.

ಆ.27 ರಂದು ಸುಳ್ಯ ಹಳೆಗೇಟಿನ ರಂಗಮನೆಯಲ್ಲಿ ನಡೆಯುವ ಯಕ್ಷ ಸಂಭ್ರಮದಲ್ಲಿ ವನಜ ರಂಗಮನೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ಪ್ರಶಸ್ತಿ, ಶಾಲು, ಫಲಕ, ಸ್ಮರಣಿಕೆ, ಫಲಪುಷ್ಪ ಹಾಗೂ ರೂ.10,000 ನಗದು ಒಳಗೊಂಡಿರುತ್ತದೆ ಎಂದು ರಂಗಮನೆ ಅಧ್ಯಕ್ಷ ಡಾ|ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Leave a Comment

Your email address will not be published. Required fields are marked *