ಸಮಗ್ರ ನ್ಯೂಸ್: ತನಿಖೆಗಾಗಿ ಕೇರಳಕ್ಕೆ ಬಂದಿದ್ದ ಕರ್ನಾಟಕ ಪೊಲೀಸರನ್ನು ಕೇರಳ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಕ್ರಿಪ್ಟೋ ಕರೆನ್ಸಿ ತನಿಖೆಗಾಗಿ ಕೇರಳಕ್ಕೆ ಬಂದಿದ್ದ ಬೆಂಗಳೂರು ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ನಾಲ್ವರನ್ನು ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಕೊಚ್ಚಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಕೊಚ್ಚಿ ಪೋಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಬಂಧಿತ ಪೋಲೀಸ್ ಅಧಿಕಾರಿಗಳನ್ನು ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಇನ್ಸ್‌ಪೆಕ್ಟರ್ ಶಿವಪ್ರಕಾಶ್, ಮೂವರು ಸಿಬ್ಬಂದಿಗಳಾದ ವಿಜಯ್‌ಕುಮಾರ್ ಎಚ್‌ಸಿ, ಶಿವನಿ ಎಚ್‌ಸಿ ಮತ್ತು ಸಂದೇಶ್ ಎಂದು ಗುರುತಿಸಲಾಗಿದೆ.
ಕ್ರಿಪ್ಟೋ ಕರೆನ್ಸಿ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ವೈಟ್ ಫೀಲ್ಡ್ ಪೊಲೀಸ್ ಅಧಿಕಾರಿಗಳ ತಂಡವು ಕೊಚ್ಚಿಯ ಕುಂಬಲಂಗಿಯಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿತ್ತು. ಆದರೆ ಆರೋಪಿಗಳೊಂದಿಗೆ ಅಲ್ಲೇ ಡೀಲ್ ಕುದುರಿಸಿದ ಪೋಲೀಸರು ಇಬ್ಬರನ್ನು ಈ ಇಬ್ಬರನ್ನು ಬಿಡುಗಡೆ ಮಾಡಲು 10 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ಆರೋಪಿಗಳಿಂದ 4 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದರು. ಆದರೆ ಹಣ ಪಾವತಿಸಿದ ಹೊರತಾಗಿಯೂ ಪೊಲೀಸ್ ಅಧಿಕಾರಿಗಳು ಇಬ್ಬರನ್ನು ಬಿಡುಗಡೆ ಮಾಡಿರಲಿಲ್ಲ ಎಂದು ಶಂಕಿತ ಆರೋಪಿಗಳ ಕುಟುಂಬ ಸದಸ್ಯರು ಕೊಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಕಾರ್ಯಾಚರಣೆ ನಡೆಸಿದ ಕೊಚ್ಚಿ ಪೋಲೀಸರು ಕೊಚ್ಚಿ ನಗರದಲ್ಲಿಯೇ ಇದ್ದ ಬೆಂಗಳೂರು ಪೊಲೀಸರ ವಾಹನ ಹಾಗೂ ವಾಹನದಲ್ಲಿದ್ದ ನಗದನ್ನು ವಶಕ್ಕೆ ಪಡೆದುಕೊಂಡು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಕೊಚ್ಚಿ ಪೋಲೀಸ್ ಉಪ ಆಯುಕ್ತ ಪಿ. ವಿ. ಬೇಬಿ ಅವರು ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು ನಂತರ ಪೂರ್ಣ ಮಾಹಿತಿ ನೀಡುವುದಾಗಿ ಹೇಳಿದರು.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಭ್ರಷ್ಟಾಚಾರದ ವಿರುದ್ದ ಸಮರ ಸಾರುವುದಾಗಿ ಹೇಳಿಕೊಂಡಿದ್ದ ರಾಜ್ಯ ಸರ್ಕಾರಕ್ಕೆ ಈ ಪ್ರಕರಣ ಮುಜುಗರ ತಂದಿದೆ. ತನ್ನದೇ ಅಧಿಕಾರಿಗಳನ್ನು ಲಂಚ ಸ್ವೀಕಾರದ ಆರೋಪದ ಮೇರೆಗೆ ಪಕ್ಕದ ರಾಜ್ಯದ ಪೋಲೀಸರು ಹಣದ ಸಮೇತ ಬಂಧಿಸಿರುವುದು ಭ್ರಷ್ಟಾಚಾರ ಕಿಂಚಿತ್ತೂ ಕಡಿಮೆ ಆಗಿಲ್ಲ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಆಗಿದೆ. ಮಂಗಳವಾರವಷ್ಟೇ 116 ಇನ್ಸ್‌ಪೆಕ್ಟರ್ ಗಳ ವರ್ಗಾವಣೆ ಪಟ್ಟಿ ಸಿದ್ದಪಡಿಸಿ ಆದೇಶ ಹೊರಡಿಸಿದ್ದ ಸರ್ಕಾರ ಬುಧವಾರ ಮದ್ಯಾಹ್ನ ವರ್ಗಾವಣೆ ಆದೇಶವನ್ನೇ ಸಂಪೂರ್ಣ ರದ್ದು ಮಾಡಿದೆ.