ಸಮಗ್ರ ನ್ಯೂಸ್: ಪ್ರವಾಸಿಗರು ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ಜಲಪಾತಗಳ ಬಳಿ ಡ್ಯಾನ್ಸ್ ಮಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ಪೋಲಿಸ್ ಇಲಾಖೆ, ಪೊಲೀಸರನ್ನ ನಿಯೋಜನೆ ಮಾಡಿದೆ.
23 ಕಿಲೋ ಮೀಟರ್ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಮಳೆಗಾಲದಲ್ಲಿ ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳು ಸೃಷ್ಟಿಯಾಗಿರುತ್ತವೆ. ಚಿಕ್ಕಮಗಳೂರು ಜಿಲ್ಲೆಯಿಂದ ಉಡುಪಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ ಬರುವ ಪ್ರವಾಸಿಗರು ಈ ಮಾರ್ಗವನ್ನು ನೆಚ್ವಿಕೊಂಡಿದ್ದರು. ಮಳೆಗಾಲದಲ್ಲಿ ರಸ್ತೆ ಬದಿಯ ಜಲಪಾತಗಳ ಬಳಿ ವಾಹನ ನಿಲ್ಲಿಸಿಕೊಂಡು ಕುಣಿಯುತ್ತಿದ್ದರು. ಕುಣಿವ ದಾವಂತದಲ್ಲಿ ರಸ್ತೆಯಲ್ಲಿ ಓಡಾಡುವ ವಾಹನಗಳಿಗೂ ಅಡ್ಡ ಹೋಗುತ್ತಿದ್ದರು.
ಈ ಮಾರ್ಗದಲ್ಲಿ ಆಂಬುಲೆನ್ಸ್ ಕೂಡ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ಪ್ರವಾಸಿಗರು ಮಕ್ಕಳು ಮರಿಗಳನ್ನು ಕೂಡ ಚಾರ್ಮಾಡಿ ಘಾಟಿಯಲ್ಲಿ ಸದಾ ನೀರು ಹರಿಯುವ ಬಂಡೆಯ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು. ಜಾರುವ ಬಂಡೆಗಳ ಮೇಲೆ ಹುಚ್ಚಾಟ ಆಡುತ್ತಿದ್ದರು. ಇದೀಗ ಪೊಲೀಸ್ ಇಲಾಖೆ ಜಲಪಾತದ ಬಳಿ ಹೈವೇ ಪ್ಯಾಟ್ರೋಲ್ ಪೊಲೀಸರನ್ನು ಯೋಜನೆ ಮಾಡಿದೆ. ಪೊಲೀಸರು ಬೆಳಗ್ಗೆಯಿಂದ ಸಂಜೆವರೆಗೂ ಜಲಪಾತಗಳ ಬಳಿಯೇ ಇರುತ್ತಾರೆ. ಸ್ಥಳೀಯರು ಕೂಡ ಬಂಡೆಗಳ ಮೇಲೆ ಪ್ರವಾಸಿಗರ ಹುಚ್ಚಾಟ ಕಂಡು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಬೇಕು ಅಥವಾ ಗಸ್ತು ತಿರುಗಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಇದೀಗ ಪೊಲೀಸ್ ಇಲಾಖೆ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜನೆ ಮಾಡಿದೆ.