ಸಮಗ್ರ ನ್ಯೂಸ್: ಕಪ್ಪು ಬಂಗಾರ’ ಎಂದೇ ಕರೆಯಲ್ಪಡುವ ಕಾಳು ಮೆಣಸು ಬೆಳಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 6 ವರ್ಷಗಳ ಬಳಿಕ ಮತ್ತೆ 60,000 ರೂಪಾಯಿ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಳವಾಗಬಹುದೆಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.
ಎಂಟು ದಿನಗಳ ಹಿಂದಿನವರೆಗೂ ಪ್ರತಿ ಕ್ವಿಂಟಾಲ್ ಗೆ 45,000 ರೂಪಾಯಿಗಳಿಂದ 49,000 ರೂಪಾಯಿ ಆಸುಪಾಸಿನಲ್ಲಿದ್ದ ಕಾಳು ಮೆಣಸಿನ ದರ ಸೋಮವಾರದಂದು ಶಿರಸಿ ಮಾರುಕಟ್ಟೆಯಲ್ಲಿ 61,599 ರೂಪಾಯಿಗೆ ಟೆಂಡರ್ ಆಗಿದೆ.
ಆರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಕಾಳುಮೆಣಸಿಗೆ ಇದಕ್ಕಿಂತ ಹೆಚ್ಚಿನ ಬೆಲೆ ಸಿಕ್ಕಿತೆಂದು ಹೇಳಲಾಗಿದ್ದು, ಇದಾದ ಬಳಿಕ ಮತ್ತೆ ಕಾಳುಮೆಣಸಿಗೆ ಬಂಗಾರದ ಬೆಲೆ ಬಂದಿದೆ. ಕಾಳುಮೆಣಸಿಗೆ ಇದುವರೆಗೆ ಸೂಕ್ತ ಬೆಲೆ ಸಿಗದೇ ನಿರಾಸೆಗೊಂಡಿದ್ದ ಬೆಳೆಗಾರರಿಗೆ ಈಗ ನಡೆಯುತ್ತಿರುವ ಬೆಳವಣಿಗೆ ಖುಷಿ ಮೂಡಿಸಿದೆ.
ಕುಸಿತ ಕಂಡ ಬಳಿಕ ಅಲ್ಪ ಏರಿಕೆ ಕಂಡಿದ್ದ ಅಡಿಕೆ ಧಾರಣೆ ಸದ್ಯ ಸ್ಥಿರತೆ ಕಾಯ್ದುಕೊಂಡಿದ್ದು, 55-56 ಸಾವಿರ ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಮಂಗಳವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ 56,099 ರೂಪಾಯಿಗೆ ಮಾರಾಟವಾಗಿದ್ದು ಗರಿಷ್ಠ ಮೊತ್ತ ಎನಿಸಿಕೊಂಡಿತು.
ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಯಾದ ಶಿವಮೊಗ್ಗದಲ್ಲಿ ಸರಕು ಅಡಿಕೆ ದರ ಕ್ವಿಂಟಾಲ್‌ಗೆ ಕನಿಷ್ಠ 50030 ರೂಪಾಯಿ ಇದ್ದರೆ ಗರಿಷ್ಠ ದರ 80,800 ರೂಪಾಯಿಗೆ ಮಾರಾಟವಾಗಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಗರಿಷ್ಠ 56,012 ರೂಪಾಯಿಗೆ ಮಾರಾಟವಾಗಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಗರಿಷ್ಠ 52,459 ರೂಪಾಯಿಗೆ ಮಾರಾಟವಾಗಿದೆ.
57 ಸಾವಿರ ರೂಪಾಯಿವರೆಗೆ ತಲುಪಿದ್ದ ಅಡಿಕೆ ಧಾರಣೆ 54-55 ಸಾವಿರಕ್ಕೆ ಕುಸಿತ ಕಂಡಿತ್ತು, ಮತ್ತೆ ಬೆಲೆ ಏರಿಕೆ ಕಂಡು 56 ಸಾವಿರ ರೂಪಾಯಿ ತಲುಪಿದ್ದು ಸದ್ಯ ಅದೇ ಧಾರಣೆಯಲ್ಲಿ ಮುಂದುವರೆಯುತ್ತಿದೆ.