Ad Widget .

ವಿಶ್ವ ಹೆಪಟೈಟಿಸ್ ದಿನ – ಜುಲೈ 28

ಸಮಗ್ರ ನ್ಯೂಸ್:ಜಾಗತಿಕವಾಗಿ ವಿಶ್ವದಾದ್ಯಂತ ಜುಲೈ 28ರಂದು “ವಿಶ್ವ ಹೆಪಟೈಟಿಸ್ ದಿನ” ಎಂದು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷವಾದ ಜಾಗ್ರತೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ ಜಾರಿಗೆ ತಂದಿದೆ. ಜಗತ್ತಿನಾದ್ಯಂತ ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದು ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ, ವರ್ಷವೊಂದರಲ್ಲಿ ಹೆಪಟೈಟಿಸ್ ರೋಗದಿಂದಾಗಿ ಜೀವ ಕಳೆದುಕೊಳ್ಳುತ್ತಿರುವುದು ಬಹಳ ಕಳವಳಕಾರಿ ಬೆಳವಣಿಗೆಯಾಗಿದೆ. ಭಾರತ ದೇಶವೊಂದರಲ್ಲೇ 40 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದಾರೆಂದು ವಿಶ್ವ ಸಂಸ್ಥೆಯ ವರದಿಗಳಿಂದ ತಿಳಿದು ಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ಆವಿಷ್ಕಾರಗಳು ಮತ್ತು ಕ್ರಾಂತಿಗಳು ನಡೆಯುತ್ತಿದ್ದರೂ ತಡೆಗಟ್ಟಬಹುದಾದ ರೋಗಗಳಲ್ಲಿ ಒಂದಾದ ಈ ಹೆಪಟೈಟಿಸ್ ದಿನೇ ದಿನೇ ಮನುಕುಲದ ಮೇಲೆ ಸವಾರಿ ಮಾಡುತ್ತಿರುವುದೇ ಸೋಜಿಗದ ವಿಚಾರವಾಗಿದೆ. ಏಡ್ಸ್ ನಷ್ಟೇ ಮಾರಕವಾದ ರೋಗವಾದ ಹೆಪಟೈಟಿಸ್‍ನ್ನು ಸೂಕ್ತವಾದ ವೈದ್ಯಕೀಯ ಮಾರ್ಗದರ್ಶನ ಮತ್ತು ಸಾಕಷ್ಟು ಮುಂಜಾಗರೂಕತೆಗಳಿಂದ ಖಂಡಿತವಾಗಿಯೂ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.

Ad Widget . Ad Widget .

ವಿಶ್ವದಾದ್ಯಂತ 2 ಮಿಲಿಯನ್ ಮಂದಿ ವರ್ಷವೊಂದರಲ್ಲಿ ಅಜಾಗರೂಕತೆ ಅಸಡ್ಡೆ ಮತ್ತು ರೋಗಪೂರಿತ ಇಂಜೆಕ್ಷನ್‍ಗಳಿಂದಲೇ ಹೆಪಟೈಟೀಸ್ ಬಿ ಮತ್ತು ಸಿ ರೋಗಕ್ಕೆ ತುತ್ತಾಗುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಹಾಗಯೇ ಶೇಕಡಾ 81 ಮಂದಿ ಮಕ್ಕಳಿಗೆ ಲಸಿಕೆ ಮುಖಾಂತರ ಹೆಪಟೈಟಿಸ್ ರೋಗವನ್ನು ತಡೆಗಟ್ಟಲಾಗಿದೆ ಎಂದೂ ತಿಳಿದು ಬಂದಿದೆ. ಒಟ್ಟಿನಲ್ಲಿ ಹೆಪಟೈಟಿಸ್ ರೋಗವನ್ನು ಖಂಡಿತವಾಗಿಯೂ ತಡೆಗಟ್ಟಬಹುದಾಗಿದ್ದು ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಜನಸಾಮಾನ್ಯರು ವಿಶೇಷ ಕಾಳಜಿ ವಹಿಸುವ ತುರ್ತು ಅನಿವಾರ್ಯತೆ ಇದೆ. ವಿಶ್ವ ಸಂಸ್ಥೆ 4 ಜಾಗತಿಕವಾಗಿ ಕಾಡುವ ರೋಗಗಳನ್ನು ಆಯ್ಕೆ ಮಾಡಿ ಆ ರೋಗಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಆ ರೋಗಗಳು ಯಾವುದೆಂದರೆ ಹೆಪಟೈಟಿಸ್, ಏಡ್ಸ್, ಕ್ಷಯ ರೋಗ ಮತ್ತು ಮಲೇರಿಯಾ. ಒಟ್ಟಿನಲ್ಲಿ ಜನರಿಗೆ ಈ ಹೆಪಟೈಟಿಸ್ ರೋಗ ಹೇಗೆ ಬರುತ್ತದೆ? ಹೇಗೆ ಹರಡುತ್ತದೆ? ಹೇಗೆ ತಡೆಗಟ್ಟಬಹುದು? ಯಾವ ಮುನ್ನೆಚ್ಚರಿಕೆ ವಹಿಸಬೇಕು? ಮತ್ತು ಯಾವ ರೀತಿ ಈ ರೋಗ ಬಂದರೂ ಬದುಕಬಹುದು? ಎಂಬುದರ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ನಿರಂತರವಾಗಿ ವಿಶ್ವದಾದ್ಯಂತ ವಿಶ್ವ ಆರೋಗ್ಯ ಸಂಸ್ಥೆ ಇತರ ಸಂಘ ಸಂಸ್ಥೆಗಳು ಮತ್ತು ಸರಕಾರಗಳ ಜೊತೆ ಸೇರಿ ಮಾಡುತ್ತಿದೆ. ಜುಲೈ 28ರಂದು ಹೆಪಟೈಟಿಸ್ ವೈರಸ್‍ನ್ನು ಕಂಡು ಹಿಡಿದ ಮತ್ತು ಹೆಪಟೈಟಿಸ್ ರೋಗಕ್ಕೆ ಲಸಿಕೆ ಕಂಡುಹಿಡಿದ ನೋಬೆಲ್ ಪ್ರಶಸ್ತಿ ವಿಜೇತ ಪ್ರೋಫೆಸರ್ ಬರೂಚ ಸಾಮ್ಯುಯೆಲ್ ಬ್ಲೂಮ್‍ಬರ್ಗ್ ಇವರ ಜನ್ಮದಿನವಾಗಿದ್ದು ಅವರ ಸ್ಮರಣಾರ್ಥ ಜುಲೈ 28ನ್ನು ವಿಶ್ವ ಹೆಪಟೈಟಿಸ್ ದಿನ ಎಂದು ಆಚರಿಸಲಾಗುತ್ತದೆ.

Ad Widget . Ad Widget .

ಏನಿದು ಹೆಪಟೈಟಿಸ್ ?
ಹೆಪಟೈಟಿಸ್ ರೋಗ ಹೆಚ್ಚಾಗಿ ಲಿವರ್ (ಯಕೃತ್)ನ್ನು ಕಾಡುವ ಕಾಯಿಲೆಯಾಗಿದ್ದು ಹೆಪಟೈಟಿಸ್ ಎ.ಬಿ.ಸಿ.ಡಿ ಮತ್ತು ಇ ಎಂಬ ವೈರಸ್‍ನಿಂದ ಹರಡುತ್ತದೆ. ಹೆಪಟೈಟಿಸ್ ರೋಗದಲ್ಲಿ ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಎಂದು ಐದು ವಿಧಗಳಿವೆ. ಜಾಗತಿಕವಾಗಿ ಕೋಟಿಗಟ್ಟಲೆ ಮಂದಿ ಈ ರೋಗದಿಂದ ಬಳಲುತ್ತಿದ್ದು ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳು ಸಾರಿ ಹೇಳುತ್ತದೆ. ಸಾಮಾನ್ಯವಾಗಿ ಹೆಪಟೈಟಿಸ್ ಎ, ಡಿ, ಇ ಹೆಚ್ಚು ತೊಂದರೆ ನೀಡದಿದ್ದರೂ ಹೆಪಟೈಟಿಸ್ ಬಿ ಮತ್ತು ಸಿ ಹೆಚ್ಚು ಮಾರಣಾಂತಿಕವಾಗುವ ಸಾಧ್ಯತೆ ಇರುತ್ತದೆ. ವರ್ಷವೊಂದರಲ್ಲಿ 1.5 ಮಿಲಿಯನ್ ಸಾವಿಗೆ ಕಾರಣವಾಗುವ ಈ ರೋಗಕ್ಕೆ, ಹೆಪಟೈಟಿಸ್ ಬಿ ಮತ್ತು ಸಿ ಹೆಚ್ಚಿನ ಕಾಣಿಕೆ ನೀಡುತ್ತದೆ ಎಂದರೂ ತಪ್ಪಲ್ಲ. ಹೆಪಟೈಟಿಸ್ ರೋಗದಲ್ಲಿ ಅಲ್ಪಕಾಲದ ತೀವ್ರವಾದ (Acute) ಮತ್ತು ದೀರ್ಘಕಾಲದ (Chronic) ಎಂಬುದಾಗಿ ಎರಡು ವಿಧಗಳಿದ್ದು, ಅಲ್ಪಕಾಲದ ತೀವ್ರವಾದ ಹೆಪಟೈಟಿಸ್‍ನಿಂದಲೇ ಹೆಚ್ಚಿನ ಸಾವು ನೋವು ಸಂಭವಿಸುತ್ತದೆ. ಹೆಪಟೈಟಿಸ್ ಬಿ ಒಂದರಿಂದಲೇ ವರ್ಷವೊಂದಲ್ಲಿ 7,80,000 ಮಂದಿ ಜೀವ ಕಳೆದುಕೊಳ್ಳುತ್ತಾರೆ ಎಂಬುದು ಆತಂಕಕಾರಿ ವಿಚಾರವಾಗಿದೆ. ಹೆಪಟೈಟಿಸ್ ಬಿ ಮತ್ತು ಸಿ ರೋಗಕ್ಕೆ ಪರಿಣಾಮಕಾರಿ ಲಸಿಕೆಗಳು ಲಭ್ಯವಿದ್ದು, ಖಂಡಿತವಾಗಿಯೂ ರೋಗವನ್ನು ತಡೆಗಟ್ಟಬಹುದಾಗಿದೆ. ಅದೇ ರೀತಿ ಹೆಪಟೈಟಿಸ್ ಸಿ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯು ಲಭ್ಯವಿರುತ್ತದೆ. ಹೆಪಟೈಟಿಸ್ ಬಿ ರೋಗ ಸಾಮಾನ್ಯವಾಗಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಇವರುಗಳು ಹೆಚ್ಚಿನ ಜಾಗ್ರತೆ ವಹಿಸುವ ಅವಶ್ಯಕತೆ ಇರುತ್ತದೆ. ಹೆಪಟೈಟೀಸ್ ಎ ಮತ್ತು ಇ ಕಲುಷಿತ ನೀರು ಮತ್ತು ಆಹಾರಗಳಿಂದ ಹೆಚ್ಚಾಗಿ ಹರಡುತ್ತದೆ ಮತ್ತು ಹೆಚ್ಚು ಮಾರಣಾಂತಿಕವಾಗುವ ಸಾಧ್ಯತೆ ಬಹಳ ಕಡಿಮೆಯಾಗಿರುತ್ತದೆ. ಆದರೆ ಹೆಪಟೈಟಿಸ್ ಬಿ, ಸಿ, ಡಿ ಹೆಚ್ಚಾಗಿ ಪದೇ ಪದೇ ಉಪಯೋಗಿಸುವ ಇಜೆಂಕ್ಷನ್‍ಗಳ ಮುಖಾಂತರ, ರಕ್ತಪೂರಣದ ಮುಖಾಂತರ, ಅಸುರಕ್ಷಿತ ದೈಹಿಕ ಸಂಪರ್ಕ, ತಾಯಿಯಿಂದ ಮಗುವಿಗೆ ಮತ್ತು ಅಸುರಕ್ಷಿತ ವೈದ್ಯಕೀಯ ಚಿಕಿತ್ಸೆ, ರೋಗಪೂರಿತ ವೈದ್ಯಕೀಯ ಉಪಕರಣಗಳ ಮುಖಾಂತರ ಹರಡುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ವೈರಸ್‍ಗಳು ನಮ್ಮ ದೇಹದ ಯಕೃತ್ ನ ಮೇಲೆ ದಾಳಿ ಮಾಡಿ ಅದರ ಕಾರ್ಯಕ್ಷಮತೆಯನ್ನು ಮತ್ತು ಕಾರ್ಯದಕ್ಷತೆಯನ್ನು ಕ್ಷೀಣಿಸುವಂತೆ ಮಾಡುತ್ತದೆ. ಯಕೃತ್ತ್ ನಮ್ಮ ದೇಹದ ಅತೀ ಮುಖ್ಯ ಅಂಗವಾಗಿದ್ದು ದೇಹದ ಎಲ್ಲಾ ಜೀರ್ಣಾಂಗ ಪ್ರಕ್ರಿಯೆ ಮತ್ತು ರಕ್ಷಣಾ ಪ್ರಕ್ರಿಯೆಯ ನೇತೃತ್ವ ವಹಿಸುತ್ತದೆ. ವೈರಸ್‍ಗಳ ದಾಳಿಗೆ ತುತ್ತಾದ ಯಕೃತ್ತ್ ತನ್ನ ರಕ್ಷಣಾ ಪ್ರಕ್ರಿಯೆ ಮತ್ತು ಜೀರ್ಣಾಂಗ ಪ್ರಕ್ರಿಯೆಯನ್ನು ಸರಿಯಾಗಿ ನಿಭಾಯಿಸಲಾಗದೆ, ದೇಹದ ಆರೋಗ್ಯ ಹದಗೆಟ್ಟು ವ್ಯಕ್ತಿ ಜಾಂಡೀಸ್ (ದೇಹದ ಚರ್ಮ, ಕಣ್ಣಿನ ಮೇಲ್ಪದರ ಹಳದಿ ಬಣ್ಣಕ್ಕೆ ತಿರುಗುವುದು) ವಾಂತಿ, ಬೇಧಿ, ಹಸಿವಿಲ್ಲದಿಲ್ಲದಿರುವುದು ವಿಪರೀತ ಹೊಟ್ಟೆನೋವು, ಜ್ವರ, ಮೈಕೈ ನೋವು, ವಿಪರೀತ ಸುಸ್ತು, ದೇಹದ ತೂಕ ಕಡಿಮೆಯಾಗುವುದು, ಅಜೀರ್ಣ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕದಿದ್ದಲ್ಲಿ ಯಕೃತ್ತ ವೈಫಲ್ಯ ಮತ್ತು ಯಕೃತ್ತ್‍ನ ಕ್ಯಾನ್ಸರ್‍ನಿಂದಾಗಿ ಜೀವ ಹಾನಿ ಕೂಡಾ ಸಂಭವಿಸುತ್ತದೆ.

ಹೆಪಟೈಟಿಸ್ ‘ಬಿ’ ರೋಗದ ಲಕ್ಷಣಗಳು ಏನು?
ಹೆಪಟೈಟಿಸ್ ‘ಬಿ’ ವೈರಾಣು ಸೋಂಕು ತಗುಲಿದ ಬಳಿಕ ಕೆಲವರಲ್ಲಿ ಯಾವ ತೊಂದರೆಯೂ ಕಾಣಿಸುವುದಿಲ್ಲ. ಇನ್ನು ಕೆಲವರಲ್ಲಿ ವಾಂತಿ, ಭೇದಿ, ಹಸಿವಿಲ್ಲದಿರುವುದು, ಹೊಟ್ಟೆನೋವು, ಸುಸ್ತು, ಕಾಮಾಲೆ ಅಥವಾ ಜಾಂಡೀಸ್ (ದೇಹದ ಚರ್ಮ ಮತ್ತು ಕಣ್ಣಿನ ಮೇಲ್ಪದರ ಹಳದಿ ಬಣ್ಣಕ್ಕೆ ತಿರುಗುವುದು) ಜ್ವರ, ಮೈಕೈ ನೋವು, ದೇಹದ ತೂಕ ಕಡಿಮೆಯಾಗುವುದು, ಅಜೀರ್ಣ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇನ್ನು ಕೆಲವರಲ್ಲಿ ಗಾಡ ವರ್ಣದ ಮೂತ್ರ ಕಾಣಿಸಿಕೊಳ್ಳುತ್ತದೆ. ಧೀರ್ಘಕಾಲಿಕ ತೊಂದರೆ ಇರುವವರಲ್ಲಿ ಹೆಚ್ಚಿನ ತೊಂದರೆ ಕಾಣಸಿಗದು. ಆದರೆ ಯಕೃತ್ತಿನಲ್ಲಿ ನಾರಿನ ಅಂಶ (Fibrosis or Cirrhosis) ಜಾಸ್ತಿಯಾದಾಗ ಯಕೃತ್ತಿನ ಕಾರ್ಯಕ್ಷಮತೆ ಕ್ಷೀಣಿಸಿಕೊಂಡು ಯಕೃತ್ತಿನ ಕೆಲಸಗಳು ಸ್ಥಗಿತಗೊಳ್ಳುತ್ತದೆ. ಯಕೃತ್ತು ಊದಿಕೊಂಡು ದೊಡ್ಡದಾಗಬಹುದು ಇಲ್ಲವೇ ಉದರದಲ್ಲಿ ನೀರು ಶೇಖರಣೆ ಆಗುವ ಸಾಧ್ಯತೆಯೂ ಇದೆ.

ಹೇಗೆ ಹರಡುತ್ತದೆ?

  1. ವೈರಾಣು ಸೋಂಕಿತ ರಕ್ತದ ಮತ್ತು ದೇಹದ ದ್ರವ್ಯಗಳಾದ ವೀರ್ಯ, ಯೋನಿದ್ರವಗಳ ಸಂಪರ್ಕದಿಂದ ಹರಡುತ್ತದೆ. ಸೋಂಕು ಇರುವ ವ್ಯಕ್ತಿಗಳ ಜೊತೆ ಅಸುರಕ್ಷಿತ ಸಂಭೋಗದಿಂದ ಹರಡುವ ಸಾಧ್ಯತೆ ಇದೆ.
  2. ವೈರಾಣು ಸೋಂಕು ಇರುವ ರಕ್ತಪೂರಣದಿಂದಲೂ ರೋಗ ಹರಡಬಹುದು.
  3. ಕಿಡ್ನಿ ರೋಗಗಳ ‘ಡಯಾಲಿಸೀಸ್’ ಚಿಕಿತ್ಸೆ ನೀಡುವ ಸಮಯದಲ್ಲಿ ವೈರಾಣು ಸೋಂಕು ತಗಲುವ ಸಾಧ್ಯತೆ ಇದೆ.
  4. ವೈರಾಣು ಸೋಂಕಿತ ತಾಯಿಯಿಂದ ಮಗುವಿಗೆ ಹೆರಿಗೆ ಸಮಯದಲ್ಲಿ ಹರಡುವ ಸಾಧ್ಯತೆ ಇದೆ.
  5. ಹಚ್ಚೆ ಹಾಕಿಸಿಕೊಳ್ಳುವವರು, ಆಕ್ಯುಪಂಚರ್ ಮಾಡಿಸಿಕೊಂಡಾಗ ಒಂದೇ ಸೂಜಿಯಿಂದ ಮಾದಕ ದ್ರವ್ಯಗಳನ್ನು ಹಲವರು ಸೇವಿಸಿಕೊಂಡಾಗ ಸೋಂಕು ತಗಲುವ ಸಾಧ್ಯತೆ ಇದೆ. ವಿಶ್ವದಾದ್ಯಂತ ಎರಡು ಮಿಲಿಯನ್ ಮಂದಿ ಅಸುರಕ್ಷಿತ ಚುಚ್ಚು ಮದ್ದಿನ ಬಳಕೆಯಿಂದ ಹೆಪಟೈಟಸ್ ‘ಬಿ’ ಮತ್ತು ಸಿ ರೋಗಕ್ಕೆ ತುತ್ತಾಗುವುದು ಈ ಇಪ್ಪತ್ತೊಂದನೇ ಶತಮಾನದ ದುರಂತ ಎಂದರೂ ತಪ್ಪಾಗದು.
  6. ಅಸುರಕ್ಷಿತ ವೈದ್ಯಕೀಯ ಚಿಕಿತ್ಸೆ, ರೋಗಪೂರಿತ ವೈದ್ಯಕೀಯ ಉಪಕರಣಗಳ ಮೂಲಕವೂ ಹೆಪಟೈಟಿಸ್ ಬಿ ವೈರಾಣು ಹರಡುವ ಸಾಧ್ಯತೆ ಇದೆ.

ಹೇಗೆ ಹರಡುವುದಿಲ್ಲ?
ಹೆಪಟೈಟಿಸ್ ಬಿ ಸೋಂಕು ಇರುವ ವ್ಯಕ್ತಿಯ ಕೈಗಳನ್ನು ಮುಟ್ಟುವುದು, ಆಲಂಗಿಸುವುದು, ಅವರೊಡನೆ ಒಂದೇ ತಟ್ಟೆಯಲ್ಲಿ ಊಟ ಮಾಡುವುದು ಮುಂತಾದವುಗಳಿಂದ ರೋಗ ಹರಡುವುದಿಲ್ಲ. ಆದರೆ ಹೆಪಟೈಟಿಸ್ ‘ಎ’ ವೈರಾಣು ದೇಹದ ಸಂಪರ್ಕದಿಂದ, ದೇಹಬಾದೆ ತೀರಿಸಿದ ಬಳಿಕ ಸರಿಯಾಗಿ ಸೋಪಿನ ದ್ರಾವಣ ಬಳಸದೇ ಕೈ ತೊಳೆಯುವುದರಿಂದ ರೋಗ ಹರಡುವ ಸಾಧ್ಯತೆ ಇರುತ್ತದೆ.
ಕೆಮ್ಮು, ಸೀನುಗಳಿಂದ ಹೆಪಟೈಟಸ್ ‘ಬಿ’ ಹರಡುವುದಿಲ್ಲ. ಸೊಳ್ಳೆಗಳಿಂದಲೂ ಹೆಪಟೈಟಿಸ್ ‘ಬಿ’ ರೋಗ ಹರಡುವುದಿಲ್ಲ. ರೋಗಿಯ ಜೊತೆ ಮಲಗುವುದರಿಂದ, ಒಂದೇ ಹೊದಿಕೆ ಬಳಸುವುದರಿಂದ ಹೆಪಟೈಟಿಸ್ ಬಿ ಹರಡುವುದಿಲ್ಲ.

ತಡೆಗಟ್ಟುವುದು ಹೇಗೆ?

  1. ಸುರಕ್ಷಿತವಾದ ನೀರು ಮತ್ತು ಆಹಾರವನ್ನು ಸೇವಿಸಬೇಕು. ಎಲ್ಲಾ ವರ್ಗದ ಜನರಿಗೆ ಸುರಕ್ಷಿತ ನೀರು, ಆಹಾರ ದೊರಕುವಂತೆ ಮಾಡಬೇಕು.
  2. ದೇಹಬಾಧೆ ತೀರಿಸಿದ ಬಳಿಕ ಖಡ್ಡಾಯವಾಗಿ ಕೈಯನ್ನು ಸೋಪ್ ದ್ರಾವಣ ಬಳಸಿ ತೊಳೆಯಬೇಕು. ಹೆಚ್ಚಿನ ಹೆಪಟೈಟಿಸ್ ಕೊಳೆಯಿಂದ ಕೂಡಿದ ಕೈಗಳಿಂದ ಬಾಯಿಯ ಮುಖಾಂತರ ದೇಹಕ್ಕೆ ಹರಡುತ್ತದೆ ಎಂದು ತಿಳಿದು ಬಂದಿದೆ.
  3. ರಕ್ತಪೂರಣ ಮಾಡುವಾಗ ಮತ್ತು ರಕ್ತದ ಕಣಗಳನ್ನು ಪಡೆದುಕೊಳ್ಳುವಾಗ ಸಾಕಷ್ಟ ಮುಂಜಾಗರೂಕತೆ ವಹಿಸಬೇಕು.
  4. ವಿವಾಹೇತರ ಕಾಮತೃಷೆಗಳನ್ನು ಕಾಂಡೋಮ್ ಬಳಸಿಯೇ ಮಾಡತಕ್ಕದ್ದು.
  5. ಹೆಪಟೈಟೀಸ್ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಜೊತೆ ದೈಹಿಕ ಸಂಪರ್ಕವನ್ನು ಮಾಡಬಾರದು. ಅದೇ ರೀತಿ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ದೈಹಿಕ ದ್ರವ್ಯಗಳ ಸಂಪರ್ಕ ಬಾರದಂತೆ ಎಚ್ಚರ ವಹಿಸಬೇಕು. (ವೀರ್ಯ, ರಕ್ತ ಎಂಜಲು ಇತ್ಯಾದಿ)
  6. ಒಮ್ಮೆ ಬಳಸಿದ ಸೂಜಿಯನ್ನು ಮತ್ತೊಮ್ಮೆ ಬಳಸಲೇಬಾರದು. ಹೆಚ್ಚಿನ ಹೆಪಟೈಟಿಸ್ ಸೂಜಿಗಳ ಮುಖಾಂತರವೇ ಹರಡುತ್ತದೆ ಎಂದು ತಿಳಿದು ಬಂದಿದೆ. ಅದೇ ರೀತಿ ಮಾದಕ ದ್ರವ್ಯ ವ್ಯಸನಿಗಳು ಒಂದೇ ಸೂಜಿಯನ್ನು ಪದೇ ಪದೇ ಬಳಸಿದ ಬಳಿಕ ಬೇರೆ ವ್ಯಕ್ತಿಗಳು ಅದೇ ಸೂಜಿಯನ್ನು ಬಳಸುವುದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಶ್ವದಾದ್ಯಂತ 2 ಮಿಲಿಯನ್ ಮಂದಿ ಅಸುರಕ್ಷಿತ ಇಂಜೆಕ್ಷನ್‍ಗಳಿಂದಲೇ ಹೆಪಟೈಟಿಸ್ ಬಿ ಮತ್ತು ಸಿ ರೋಗಕ್ಕೆ ತುತ್ತಾಗುತ್ತಿರುವುದೇ ಈ 21 ನೇ ಶತಮಾನದ ದುರಂತವೆಂದರೂ ತಪ್ಪಲ್ಲ.
  7. ಹೆಪಟೈಟಿಸ್ ರೋಗವನ್ನು ತಡೆಯಲು ಪರಿಣಾಮಕಾರಿ ಲಸಿಕೆ ಲಭ್ಯವಿದೆ. ಹೆಪಟೈಟಿಸ್ ರೋಗವನ್ನು ತಡೆಗಟ್ಟಲು ಪರಿಣಾಮಕಾರಿ ಲಸಿಕೆಗಳು ಲಭ್ಯವಿದೆ. ವೈದರ ಸೂಚನೆಯಂತೆ ಹುಟ್ಟಿನಿಂದ 9 ತಿಂಗಳ ಒಳಗೆ ಮೂರು ಬಾರಿ ಈ ಲಸಿಕೆ ನೀಡಲಾಗುತ್ತದೆ. ಇದರಿಂದ ಶೇಕಡಾ 99% ರಷ್ಟು ರಕ್ಷಣೆ ದೊರಕುತ್ತದೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು (ಶೂಶ್ರೂಶಕರಿಗೆ) ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಆರಂಭಿಕ ಲಸಿಕೆ ಮೂರು ಬಾರಿ ಹಾಕಿಸಿದ ಬಳಿಕ ಪ್ರತೀ 5 ವರ್ಷಕ್ಕೊಮ್ಮೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳತಕ್ಕದ್ದು. ಪರಿಣಿತ ವೈದ್ಯರ ಸೂಕ್ತ ಮಾರ್ಗದರ್ಶನದಿಂದ ಈ ಲಸಿಕೆಗಳನ್ನು ಸೂಕ್ತ ಕಾಲದಲ್ಲಿ ತೆಗೆದುಕೊಂಡಲ್ಲಿ ಹೆಪಟೈಟಿಸ್ ರೋಗವನ್ನು ಖಂಡಿತವಾಗಿಯೂ ತಡೆಗಟ್ಟಬಹುದು.

ಚಿಕಿತ್ಸೆ ಹೇಗೆ?

ಹೆಪಟೈಟಿಸ್ ಬಿ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆಯನ್ನು ತಗ್ಗಿಸುವ ಹಲವಾರು ಔಷಧಿಗಳು ಲಭ್ಯವಿದೆ. ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಿಗಳು ಲಭ್ಯವಿದೆ. ಯಕೃತ್ತು ಮತ್ತಷ್ಟು ಹಾಳಾಗದಂತೆ ತಡೆಯುವ ಔಷಧಿಗಳು ಲಭ್ಯವಿದೆ. ಯಕೃತ್ತಿಗೆ ಮಾರಕವಾಗುವ ಔಷಧಿಗಳು, ಮದ್ಯಪಾನ, ಜಂಕ್ ಆಹಾರಗಳು, ಕರಿದ ತಿಂಡಿಗಳು ಮುಂತಾದವುಗಳನ್ನು ವರ್ಜಿಸಬೇಕು. ಪೌಷ್ಠಿಕ ಆಹಾರ ಸೇವಿಸತಕ್ಕದ್ದು. ದೇಹದ ರಕ್ಷಣಾ ವ್ಯವಸ್ಥೆಗೆ ಪೂರಕವಾದ ಆಹಾರ ಮತ್ತು ಔಷಧಿ ಸೇವಿಸಬೇಕು. ಯಕೃತ್ ಸಂಪೂರ್ಣವಾಗಿ ಹಾಳಾಗಿ ‘ಸಿರ್ಹೋಸಿಸ್’ ರೋಗ ಅಂತಿಮ ಹಂತ ತಲುಪಿದ್ದಲ್ಲಿ ಯಕೃತ್ತಿನ ಕಸಿ ಮಾಡಬೇಕಾದೀತು.

ಕೊನೆಮಾತು
ಹೆಪಟೈಟಿಸ್ ಮತ್ತು ಏಡ್ಸ್ ಎಂಬುದು ಈ ಶತಮಾನದ ಬಹುದೊಡ್ಡ ರೋಗ. ಮನುಕುಲವನ್ನು ಕಾಡಿಸಿ ವ್ಯಕ್ತಿಯನ್ನು ಜೀವಂತವಾಗಿ ಕ್ಷಣ ಕ್ಷಣಕ್ಕೂ ಸಾಯಿಸುವ ಈ ರೋಗದ ಬಗ್ಗೆ ಹೆಚ್ಚಿನ ಮಾರ್ಗದರ್ಶನ ಮತ್ತು ಜಾಗೃತಿ ಮೂಡಿಸುವುದು ಅತೀ ಅಗತ್ಯ. ಹೆಪಟೈಟಿಸ್ ಮಾರಣಾಂತಿಕ ಕಾಯಿಲೆಯಾದರೂ, ತಡೆಗಟ್ಟಬಹುದಾದ ರೋಗವಾಗಿದ್ದು ಸಾಕಷ್ಟು ಮುಂಜಾಗರೂಕತೆ ಮತ್ತು ಮೂಲ ಸೌಕರ್ಯಗಳು ಮತ್ತು ಸೌಲಭ್ಯಗಳಾದ ಶುದ್ಧನೀರು ಹಾಗೂ ಪರಿಶುದ್ಧ ಪೋಷಕಾಂಶಯುಕ್ತ ಆಹಾರ ದೊರಕುವಂತೆ ಮಾಡಿದಲ್ಲಿ ಖಂಡಿತವಾಗಿಯೂ ಹೆಪಟೈಟಿಸ್ ರೋಗವನ್ನು ಹತೋಟಿಯಲ್ಲಿಡಬಹುದು ಎಂಬುದು ಸಮಾಧಾನಕರ ಅಂಶ. ಅನಕ್ಷರತೆ, ಬಡತನ, ಮೂಢನಂಬಿಕೆಗಳ ಆಗರ ಮತ್ತು ಮೂಲ ಸೌಕರ್ಯಗಳ ಕೊರತೆ ಇರುವ ಮುಂದುವರಿಯುತ್ತಿರುವ ನಮ್ಮ ಭಾರತ ದೇಶದಲ್ಲಿ ಹೆಪಟೈಟಿಸ್‍ನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಪ್ರತಿಯೊಬ್ಬ ವೈದ್ಯರ ಮತ್ತು ಪ್ರಜೆಯ ಸಾಮಾಜಿಕ ಹೊಣೆಗಾರಿಕೆ ಆಗಿರುತ್ತದೆ. ಈ ನಿಟ್ಟನಲ್ಲಿ ಪ್ರತಿಯೊಬ್ಬ ವೈದ್ಯ ಮತ್ತು ನಾಗರೀಕರು ತಮ್ಮ ಹೊಣೆ ಅರಿತು ಜವಾಬ್ದಾರಿಯಿಂದ ವರ್ತಿಸಿದಲ್ಲಿ ಹೆಪಟೈಟಿಸ್ ರೋಗಕ್ಕೆ ಮೂಗುದಾರ ಹಾಕುವುದು ಖಂಡಿತವಾಗಿಯೂ ಸಾಧ್ಯವಾಗಬಹುದು ಮತ್ತು ಅದರಲ್ಲಿಯೇ ಮನುಕುಲದ ಒಳಿತು ಅಡಗಿದೆ ಎಂಬುದು ಸಾರ್ವಕಾಲಿಕ ಸತ್ಯ ಎಂದರೂ ತಪ್ಪಲ್ಲ. ಪ್ರತಿ ವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನ ಎಂದು ಆಚರಿಸಿ ಹೆಪಟೈಟಿಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ದಿನ ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ವಿಜ್ಞಾನಿ ಡಾ|| ಬರೂಚ್ ಬ್ಲೂಮ್‍ಬರ್ಗ್ ಅವರು ಹುಟ್ಟಿದ ದಿನ. ಅವರು ಹೆಪಟೈಟಿಸ್ ಬಿ ವೈರಸ್ ಪತ್ತೆ ಹಚ್ಚಿದರು ಮತ್ತು ಹೆಪಟೈಟಿಸ್ ರೋಗವನ್ನು ಪತ್ತೆ ಹಚ್ಚುವ ಪರೀಕ್ಷೆಯನ್ನು ಆರಂಭಿಸಿದರು ಹಾಗೂ ಹೆಪಟೈಟಿಸ್ ಬಿ ರೋಗಕ್ಕೆ ಲಸಿಕೆಯನ್ನು ಕಂಡುಹಿಡಿದರು. ಇದರ ನೆನಪಿಗಾಗಿ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನ ಎಂದು ಆಚರಿಸಿ ಅವರ ಚೇತನಕ್ಕೆ ಗೌರವ ಸಲ್ಲಿಸಲಾಗುತ್ತದೆ. 2023 ರ ವಿಶ್ವ ಹೆಪಟೈಟಿಸ್ ದಿನದ ಧ್ಯೇಯ ವಾಕ್ಯ ‘We are not waiting’ ಎಂಬುದಾಗಿದೆ. ಈ ಹೆಪಟೈಟಿಸ್ ರೋಗ ಬಂದ ಬಳಿಕ ಅದು ಯಾರನ್ನೂ ಕಾಯುವುದಿಲ್ಲ ಮತ್ತು ರೋಗ ಹೆಚ್ಚುತ್ತಲೇ ಹೋಗುತ್ತದೆ. ಈ ಕಾರಣದಿಂದ ರೋಗದ ಬಗ್ಗೆ ಜಾಗೃತಿ ಮೂಡಿಸಲು ‘ನಾವು ಕಾಯುವುದಿಲ್ಲ’ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ಹೆಪಟೈಟಿಸ್ ದಿನ ಆಚರಿಸಲಾಗುತ್ತಿದೆ. ರೋಗಿಗೆ ಅರಿವಿಲ್ಲದೆ ಅವರನ್ನು ಸಾವಿನಂಚಿಗೆ ಕರೆದೊಯ್ಯುವ ವಿಶಿಷ್ಟ ರೋಗ ವೈರಲ್ ಹೆಪಟೈಟಿಸ್ ಆಗಿದ್ದು, ಈ ರೋಗದ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಸರಕಾರ ಮತ್ತು ಸಾರ್ವಜನಿಕರ ಸಹಾಭಾಗಿತ್ವ ಅತ್ಯಂತ ಅಗತ್ಯವಾಗಿದೆ. ಎಲ್ಲರೂ ಕೈ ಜೋಡಿಸಿದಾಗ ಹೆಪಟೈಟಿಸ್ ಮುಕ್ತ ಸಮಾಜದ ನಿರ್ಮಾಣ ಸಾಧ್ಯವಿದೆ.

ಡಾ|| ಮುರಲೀ ಮೋಹನ್ ಚೂಂತಾರು
MDS,DNB,MOSRCSEd(U.K), FPFA, M.B.A
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787

Leave a Comment

Your email address will not be published. Required fields are marked *